ಕರವೇ ಅಧ್ಯಕ್ಷ ನಾರಾಯಣಗೌಡ
ಬೆಂಗಳೂರು: ಕರ್ನಾಟಕದಲ್ಲಿ ಮಾರಾಟವಾಗುವ ಎಲ್ಲ ಬಗೆಯ ಉತ್ಪನ್ನಗಳ ಮೇಲಿನ ಹೆಸರು, ವಿವರಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿ ಮುದ್ರಿಸಬೇಕು ಎಂಬ ನಮ್ಮ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿದ್ದು ಹೀಗಾಗಿ ನಮ್ಮ ಮಹಾಸಂಘರ್ಷ ಯಾತ್ರೆಯ ಮೊದಲ ಬೇಡಿಕೆ ಈಗ ಈಡೇರಿದಂತಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ ಹೇಳಿದ್ದಾರೆ.
ಎಕ್ಸ್ ನಲ್ಲಿ ರಾಜ್ಯ ಸರ್ಕಾರದ ಆದೇಶವೊಂದನ್ನು ಅವರು ಪೋಸ್ಟ್ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಫೆ.1ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ "ಮಹಾಸಂಘರ್ಷ ಯಾತ್ರೆ"ಗೆ ಚಾಲನೆ ನೀಡಿತ್ತು. ಈ ಯಾತ್ರೆ ರಾಜ್ಯದ 31 ಜಿಲ್ಲೆಗಳಿಗೆ ಏಪ್ರಿಲ್ ತಿಂಗಳಿನಿಂದ ಹೋಗಲಿದೆ. ಆದರೆ, ಇದರಲ್ಲಿ ಮೊದಲ ಬೇಡಿಕೆ ಈಗ ಈಡೇರಿದಂತಾಗಿದೆ ಎಂದು ಅವರು ಹೇಳಿದ್ದಾರೆ.
ಇದಕ್ಕಾಗಿ ಸಿದ್ಧರಾಮಯ್ಯನವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಹೊರದೇಶ, ಹೊರರಾಜ್ಯಗಳ ಉತ್ಪನ್ನಗಳ ಏಜೆನ್ಸಿಯನ್ನು ಕನ್ನಡಿಗರಿಗೆ ನೀಡಬೇಕು ಮತ್ತು ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ಬಗೆಯ ಬ್ಯಾಂಕ್ ಗಳು, ಹಣಕಾಸು ಸಂಸ್ಥೆಗಳಲ್ಲಿ ಕನ್ನಡಿಗರಿಗೇ ಉದ್ಯೋಗ ನೀಡಬೇಕು ಎಂಬುದು ನಮ್ಮ ಎರಡು ಮತ್ತು ಮೂರನೇ ಬೇಡಿಕೆ ಆಗಿದೆ ಎಂದಿದ್ದಾರೆ.
ಈ ಸುತ್ತೋಲೆ ಬರಿಯ ಸುತ್ತೋಲೆಯಾಗಿ ಉಳಿಯಬಾರದು. ಕಾಲಮಿತಿಯೊಳಗೆ ಇದು ಜಾರಿಯಾಗುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಸಂಬಂಧಪಟ್ಟ ಅಧಿಕಾರಿಗಳು ಉತ್ಪನ್ನಗಳ ತಯಾರಕರಿಗೆ ಸುತ್ತೋಲೆಯ ಕುರಿತು ಮಾಹಿತಿ ನೀಡಿ ಕನ್ನಡದಲ್ಲಿ ಮುದ್ರಿಸಬೇಕೆಂದು ತಾಕೀತು ಮಾಡಬೇಕು. ನಿಯಮ ತಪ್ಪಿದಲ್ಲಿ ಅಂಥ ಉತ್ಪನ್ನಗಳ ಮಾರಾಟಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.