ADVERTISEMENT

‘ಐವರಿಗೆ ಪ್ರಶಸ್ತಿ ಕೊಡಿಸಿದ್ದೇನೆ’

ರಾಜ್ಯೋತ್ಸವ ಪ್ರಶಸ್ತಿ ಸಮಿತಿ ಸದಸ್ಯೆ ನಿರುಪಮಾ ಹೇಳಿಕೆ ವಿಡಿಯೊ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2019, 19:01 IST
Last Updated 29 ಅಕ್ಟೋಬರ್ 2019, 19:01 IST

ಬೆಂಗಳೂರು: ‘ನಾನು ಹೇಳಿದ ಐದು ಮಂದಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ನನ್ನ ಮಾತನ್ನು ಮುಖ್ಯಮಂತ್ರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು ಕೇಳಿ ಪ್ರಶಸ್ತಿ ಕೊಡಲು ಒಪ್ಪಿದ್ದಾರೆ. ಅದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ...’ ಎಂದಿರುವ ಹಿರಿಯ ಕಲಾವಿದೆ ನಿರುಪಮಾ ರಾಜೇಂದ್ರ ಅವರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಕಾರಣವಾಗಿದೆ.

‘ರಾಜ್ಯೋತ್ಸವ ಪ್ರಶಸ್ತಿಯ ಸಲಹಾ ಸಮಿತಿಯಲ್ಲಿ ನಾನಿದ್ದೆ. ವಿಧಾನಸೌಧ, ವಿಕಾಸಸೌಧಗಳಲ್ಲಿ ಓಡಾಡಿ, ಬಹಳ ಚರ್ಚೆ ಮಾಡಿ 2 ಸಾವಿರಕ್ಕೂ ಅಧಿಕ ಅರ್ಜಿಗಳಲ್ಲಿ ಯೋಗ್ಯರನ್ನು ಆಯ್ಕೆ ಮಾಡಿದ್ದೇವೆ. ಪ್ರಭಾತ್‌ ಆರ್ಟ್‌ ಇಂಟರ್‌ನ್ಯಾಷನಲ್‌ ಕಲಾವಿದರಾದ ರಾಘವೇಂದ್ರ, ಭರತ್‌, ಶಕುಂತಲಾ ಮತ್ತು ಇತರರಿಗೆ ಅಭಿನಂದನೆಗಳು...’ ಎಂದು ವಿಡಿಯೊದಲ್ಲಿ ಹೇಳಲಾಗಿದೆ.

ಆಯ್ಕೆ ಸಮಿತಿ ಸದಸ್ಯರೊಬ್ಬರು ಈ ರೀತಿ ಮುಕ್ತವಾಗಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುವ ಅಗತ್ಯ ಇತ್ತೇ, ಮೇಲಾಗಿ ತಮ್ಮದೇ ಸಂಸ್ಥೆಗೆ ಪ್ರಶಸ್ತಿ ಕೊಡಿಸಿದ್ದಕ್ಕೆ ಒಂದಿಷ್ಟು ಪಾಪಪ್ರಜ್ಞೆ ಅವರಿಗೆ ಕಾಡುತ್ತಿಲ್ಲವೇ ಎಂದು ಹಲವರು ಪ್ರಶ್ನಿಸಿದ್ದಾರೆ.

ADVERTISEMENT

ಕಲಬುರ್ಗಿಯ ಎಸ್‌. ಜಿ. ಭಾರತಿ ಎಂಬುವವರಿಗೆ ಪ್ರಶಸ್ತಿ ಕೊಟ್ಟಿದ್ದಕ್ಕೂ ಆಕ್ಷೇಪ ವ್ಯಕ್ತವಾಗಿದೆ. ಅವರು ಬಿಜೆಪಿ ಕಾರ್ಯಕರ್ತೆ ಎಂಬುದು ಹಲವರ ಆರೋಪ.

‘ನಾನು ಸದ್ಯ ಬಿಜೆಪಿಯ ಯಾವುದೇ ಹುದ್ದೆಯಲ್ಲಿ ಇಲ್ಲ. ಡಾ. ಬಿ. ಆರ್‌. ಅಂಬೇಡ್ಕರ್‌ ಹೋರಾಟ ಸಮಿತಿ ರಾಜ್ಯ ಅಧ್ಯಕ್ಷನಾಗಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಜೈ ಭೀಮವಾದ) ಸಂಚಾಲಕನಾಗಿ 30 ವರ್ಷಗಳಿಂದ ಹೋರಾಟ
ದಲ್ಲಿ ತೊಡಗಿಸಿಕೊಂಡಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.

ಕ್ರೀಡೆ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ ವಯಸ್ಸಿನ ನಿರ್ಬಂಧ ಇಲ್ಲ ಎಂದು ಸಚಿವ ಸಿ. ಟಿ. ರವಿ ಹೇಳಿದ್ದಾರೆ. ಆದರೆ ಈ ಬಾರಿ ಪ್ರಶಸ್ತಿ ಪಡೆದ ಕೆಲವರು ಅಂತಹ ಅರ್ಹತೆ ಪಡೆದಿರಲಿಲ್ಲ ಎಂಬ ಮಾತೂ ಕೇಳಿಬಂದಿದೆ.

ಬಿಜೆಪಿ ಜತೆಗೆ ಸಂಪರ್ಕ ಹೊಂದಿರುವ ಗೋಲ್ಡ್‌ ಪಿಂಚ್ ಹೋಟೆಲ್ ಮಾಲೀಕ ಪ್ರಕಾಶ್ ಶೆಟ್ಟಿ ಅವರಿಗೆ ಪ್ರಶಸ್ತಿ ಕೊಟ್ಟಿರುವುದಕ್ಕೂ ಹಲವರು ತಕರಾರು ಎತ್ತಿದ್ದಾರೆ.

ಮತ್ತೆ ಕಾನೂನು ಹೋರಾಟ

‘ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿ ತಜ್ಞರ ಸಮಿತಿ ರೂಪಿಸಿದ ಮಾರ್ಗಸೂಚಿಗಳನ್ನು ಅನುಸರಿಸಿಲ್ಲ’ ಎಂದು ವಕೀಲ ಶಂಕರಪ್ಪ ಆಕ್ಷೇಪಿಸಿದ್ದಾರೆ.

‘ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣದ ‘ಸತ್ಯವಿಠಲ’ ಕಾವ್ಯಾಂಕಿತ ಸಾಹಿತಿ ಬಿ.ವಿ.ಸತ್ಯನಾರಾಯಣ ಅವರ ರಿಟ್‌ ಅರ್ಜಿಯ ಅನುಸಾರ ಹೈಕೋರ್ಟ್‌ ಮಾರ್ಗದರ್ಶಿ ಸೂತ್ರ ರೂಪಿಸಲು ಸರ್ಕಾರಕ್ಕೆ ನಿರ್ದೇಶಿಸಿತ್ತು. ಸರ್ಕಾರ ಈ ಸೂತ್ರಗಳನ್ನು ಕಡೆಗಣಿಸಿದೆ’ ಎಂದು ಶಂಕರಪ್ಪ ಆರೋಪಿಸಿದ್ದು, ಈ ಬಗ್ಗೆ ಪುನಃ ಕಾನೂನು ಹೋರಾಟ ನಡೆಸಲಾಗುವುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.