ADVERTISEMENT

ಕಸಾಪದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ವಿಚಾರಣೆಗೆ ತಡೆ ನೀಡಲು ಹೈಕೋರ್ಟ್ ನಕಾರ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 15:46 IST
Last Updated 26 ಜುಲೈ 2025, 15:46 IST
   

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್‌ನ (ಕಸಾಪ) 2023-24ನೇ ಸಾಲಿನ ಆದಾಯ, ಅನುದಾನ, ಖರೀದಿ ಮತ್ತು ಮಾರಾಟ ಸೇರಿದಂತೆ ಆರ್ಥಿಕ ವಹಿವಾಟಿ ನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಗಳ ಬಗ್ಗೆ ವಿಚಾರಣೆ ನಡೆಸಲು ವಿಚಾರಣಾಧಿಕಾರಿ ನೇಮಿಸಿ ಬೆಂಗಳೂರು ನಗರ ಜಿಲ್ಲಾ 2ನೇ ವಲಯದ ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಸಂಘಗಳ ನೋಂದಣಾಧಿಕಾರಿ ಹೊರಡಿಸಿರುವ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್‌ ನಿರಾಕರಿಸಿದೆ.

‘ಸಹಕಾರ ಸಂಘಗಳ ನಿಬಂಧಕರ ಆದೇಶಕ್ಕೆ ತಡೆ ನೀಡಬೇಕು’ ಎಂದು ಕೋರಿ ಕಸಾಪ ಅಧ್ಯಕ್ಷ ಮಹೇಶ ಜೋಶಿ ಸಲ್ಲಿಸಿದ್ದ ರಿಟ್ ಅರ್ಜಿಯ ಮಧ್ಯಂತರ ಮನವಿ ಬಗ್ಗೆ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಪ್ರಕಟಿಸಿದೆ. ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಕಸಾಪದ 2023-24ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆ ನಡೆಸುವುದನ್ನು ರದ್ದುಪಡಿಸಿರುವ ಸಹಕಾರ ಸಂಘಗಳ ಉಪ ನಿಬಂಧಕರ ಕ್ರಮವನ್ನು ಪೀಠ ಅಮಾನ್ಯಗೊಳಿಸಿದೆ.

‘ವಿಚಾರಣಾಧಿಕಾರಿ ನೇಮಿಸಿರುವ ಬಗೆಗಿನ ನಿಯಮಗಳು ಹಾಗೂ ಪ್ರಕರಣದ ದಾಖಲೆಗಳ ಆಧಾರದ ಮೇಲೆ ವಿಸ್ತೃತವಾಗಿ ವಿಚಾರಣೆ ನಡೆಸಿ ತೀರ್ಮಾನ ಕೈಗೊಳ್ಳಬೇಕಿದೆ. ಹಾಗಾಗಿ, ಆದೇಶಕ್ಕೆ ತಡೆ ನೀಡಲು ಇದು ಸೂಕ್ತವಾದ ಹಂತವಲ್ಲ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ADVERTISEMENT

‘ವಿಚಾರಣಾಧಿಕಾರಿ ನೇಮಕಾತಿ ಆದೇಶವು ಅರ್ಜಿಯ ಕುರಿತಂತೆ ಹೈಕೋರ್ಟ್‌ ಹೊರಡಿಸಲಿರುವ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ’ ಎಂದು ಸ್ಪಷ್ಟಪಡಿಸಿದೆ.

ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ 2025ರ ಜೂನ್ 29ರಂದು ಆಯೋಜಿಸಲು ಉದ್ದೇಶಿಸಲಾಗಿದ್ದ 2023-24ನೇ ಸಾಲಿನ ಕಸಾಪ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ರದ್ದುಪಡಿಸಿ ಜೂನ್ 27ರಂದು ಸಹಕಾರ ಸಂಘಗಳ ಉಪನಿಬಂಧಕರು ಆದೇಶಿಸಿದ್ದರು. ಅಂತೆಯೇ, 2023-24ರಿಂದ ಇಲ್ಲಿಯವರೆಗೆ ಪರಿಷತ್ತು ಅನುಮೋದಿಸಿರುವ ತಿದ್ದುಪಡಿಗಳು, ಆಡಳಿತ ಮಂಡಳಿ ಪದಾಧಿಕಾರಿಗಳಿಗೆ ಪರಿಷತ್ತಿನ ಅಧ್ಯಕ್ಷರು ನಿಯಮಬಾಹಿರವಾಗಿ ನೀಡಿದ್ದಾರೆ ಎನ್ನಲಾದ ನೋಟಿಸ್‌ಗಳು, 2023-24ನೇ ಸಾಲಿನಲ್ಲಿ ಪರಿಷತ್‌ಗೆ ಸಂಗ್ರಹವಾಗಿರುವ ಆದಾಯವನ್ನು ದುರುಪಯೋಗ ಮಾಡಿಕೊಂಡ ಆರೋಪ, ಈ ಅವಧಿಯಲ್ಲಿನ ಖರೀದಿ ಮತ್ತು ಮಾರಾಟದಲ್ಲಿ ಆಗಿರುವ ಅವ್ಯವಹಾರ ಮತ್ತಿತರ ವಿಷಯಗಳನ್ನು ಪರಿಶೀಲಿಸಿ ವಿಚಾರಣೆ ನಡೆಸಲು ವಿಚಾರಣಾಧಿಕಾರಿ ನೇಮಕ ಮಾಡಿ 2025ರ ಜೂನ್ 30ರಂದು ಆದೇಶ ಹೊರಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.