ADVERTISEMENT

ಕಸಾಪ ವತಿಯಿಂದ ಕೋವಿಡ್‌ ಮಧ್ಯೆಯೂ ಸಾಹಿತ್ಯ ಚಟುವಟಿಕೆ: ಮನು ಬಳಿಗಾರ್

ಮನು ಬಳಿಗಾರ್ ನೇತೃತ್ವದ ಕಾರ್ಯಕಾರಿ ಸಮಿತಿ ಅಧಿಕಾರದ ಅವಧಿ ಇಂದು ಅಂತ್ಯ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2021, 19:31 IST
Last Updated 1 ಸೆಪ್ಟೆಂಬರ್ 2021, 19:31 IST
ಮನು ಬಳಿಗಾರ್
ಮನು ಬಳಿಗಾರ್   

ಬೆಂಗಳೂರು: ‘ಐದೂವರೆ ವರ್ಷಗಳ ಅವಧಿಯಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದ ವಿವಿಧ ಯೋಜನೆಗಳಿಗೆ ಸರ್ಕಾರ ನೀಡಿದ ಅನುದಾನದಲ್ಲಿ ₹ 42.67 ಕೋಟಿ ಬಳಕೆ ಮಾಡಲಾಗಿದೆ. ಕೋವಿಡ್‌ ಕಾಣಿಸಿಕೊಂಡ ಬಳಿಕವೂ ನಿರಂತರ ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸಲಾಗಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಮನು ಬಳಿಗಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು ಐದೂವರೆ ವರ್ಷಗಳ ಸಾಧನೆಯನ್ನು ವಿವರಿಸಿದರು. ಅವರ ನೇತೃತ್ವದ ಕಾರ್ಯಕಾರಿ ಸಮಿತಿಯ ಅಧಿಕಾರದ ಅವಧಿ ಗುರುವಾರ ಅಂತ್ಯವಾಗಲಿದ್ದು, ಆಡಳಿತಾಧಿಕಾರಿಯಾಗಿ ನೇಮಕಗೊಂಡಿರುವ ಎಸ್. ರಂಗಪ್ಪ ಅವರು ಶುಕ್ರವಾರ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

‘ಐದೂವರೆ ವರ್ಷಗಳ ಅವಧಿಯಲ್ಲಿ ಸರ್ಕಾರವು ₹ 39.47 ಕೋಟಿ ಅನುದಾನವನ್ನು ಪರಿಷತ್ತಿಗೆ ನೀಡಿದೆ. ಅಧಿಕಾರ ವಹಿಸಿಕೊಳ್ಳುವ ಮೊದಲು ₹ 4.45 ಕೋಟಿ ಮೊತ್ತ ಪರಿಷತ್ತಿನಲ್ಲಿತ್ತು.ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಹಾಗೂ ಕನ್ನಡ ಸಮಾವೇಶಗಳ ಆಯೋಜನೆ, ಕನ್ನಡ ಭವನಗಳ ನಿರ್ಮಾಣ, ಸಿಬ್ಬಂದಿ ವೇತನ, ಜಿಲ್ಲಾ ಕಸಾಪ ನಿರ್ವಹಣೆ ಮತ್ತಿತರ ಚಟುವಟಿಕೆಗಳಿಗೆ ಹಣವನ್ನು ಖರ್ಚು ಮಾಡಲಾಗಿದೆ. ₹ 1.25 ಕೋಟಿ ಹಣ ಬಾಕಿ ಉಳಿದಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಪರಿಷತ್ತಿನ ಇತಿಹಾಸದಲ್ಲಿಯೇಪ್ರಥಮ ಬಾರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲಾಯಿತು.ಹೊರನಾಡ ಕನ್ನಡಿಗರ ರಾಷ್ಟ್ರೀಯ ಸಮಾವೇಶ ಸೇರಿದಂತೆ ವಿವಿಧ ಕಾರ್ಯ ಯೋಜನೆಗಳ ಮೂಲಕ ಹೊರ ರಾಷ್ಟ್ರಗಳಲ್ಲಿಯೂ ಕನ್ನಡದ ಕಂಪನ್ನು ಸಾರಲಾಯಿತು.ಪರಿಷತ್ತಿನ ಚುನಾವಣೆಯಲ್ಲಿ ಸುಧಾರಣೆ ತರುವುದು ಸೇರಿದಂತೆ ಹಲವು ಕೆಲಸಗಳನ್ನು ಯಶಸ್ವಿಯಾಗಿ ನಿಭಾಯಿಸಲಾಗಿದೆ’ ಎಂದರು.

215 ದತ್ತಿ ಸ್ಥಾಪನೆ: ‘ನಮ್ಮ ಅವಧಿಯಲ್ಲಿ 215 ದತ್ತಿ ಪ್ರಶಸ್ತಿಗಳನ್ನು ಹೊಸದಾಗಿ ಸ್ಥಾಪಿಸಲಾಗಿದೆ. ಪರಿಷತ್ತಿನಲ್ಲಿ ಒಟ್ಟು ದತ್ತಿ ಪ್ರಶಸ್ತಿಗಳ ಸಂಖ್ಯೆ 2001ಕ್ಕೆ ಏರಿಕೆಯಾಗಿದೆ. ₹1.18 ಕೋಟಿಗೂ ಹೆಚ್ಚು ದತ್ತಿ ಹಣ ಸಂಗ್ರಹವಾಗಿದೆ. ಪರಿಷತ್ತಿನ ಆಜೀವ ಸದಸ್ಯರ ಸಂಖ್ಯೆಯನ್ನು3,36,900ಕ್ಕೆ ಏರಿಕೆ ಮಾಡಲಾಗಿದೆ’ ಎಂದು ತಿಳಿಸಿದರು.

‘ಸಾಹಿತಿಗಳು, ಕಲಾವಿದರ ಹೆಸರಿನಲ್ಲಿ ಈಗಾಗಲೇ 22 ಕಡೆ ಕನ್ನಡ ಸಾಹಿತ್ಯ–ಸಾಂಸ್ಕೃತಿಕ ಭವನಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ನನ್ನ ಗೌರವಧನ ₹13.50ಲಕ್ಷವನ್ನುಪರಿಷತ್ತಿನಲ್ಲೇ ಠೇವಣಿಯಾಗಿರಿಸಿ, 60 ವರ್ಷ ಮೇಲ್ಪಟ್ಟ ಇಬ್ಬರು ಸಾಹಿತಿಗಳಿಗೆ ‘ಕಸಾಪ ಗೌರವ ಪ್ರಶಸ್ತಿ’ ನೀಡಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.