ADVERTISEMENT

Interview| ಆರೆಸ್ಸೆಸ್‌ಗೆ ಸೇರಿದವನೆಂಬ ಅಪಪ್ರಚಾರ: ಮಹೇಶ ಜೋಶಿ

‘ಕನ್ನಡ ವಿರೋಧಿ ನಿಲುವು ತೋರಿದರೆ ಸರ್ಕಾರದ ವಿರುದ್ಧವೂ ಹೋರಾಟ’ / ಪ್ರಜಾವಾಣಿ ಸಂದರ್ಶನ

ವರುಣ ಹೆಗಡೆ
Published 25 ನವೆಂಬರ್ 2021, 4:38 IST
Last Updated 25 ನವೆಂಬರ್ 2021, 4:38 IST
ಮಹೇಶ ಜೋಶಿ
ಮಹೇಶ ಜೋಶಿ   

ಬೆಂಗಳೂರು: ‘ಕನ್ನಡಸಾಹಿತ್ಯ ಪರಿಷತ್ತಿನ (ಕಸಾಪ) ಲಾಂಛನದ ದುರುಪಯೋಗ ಮಾಡಲು ಹಾಗೂ ಹೊಸ ಹುದ್ದೆಗಳ ಸೃಷ್ಟಿಗೆ ಅವಕಾಶ ನೀಡುವುದಿಲ್ಲ. ಕೇಂದ್ರ,ರಾಜ್ಯ ಸರ್ಕಾರಗಳು ಕನ್ನಡ ವಿರೋಧಿ ನಿಲುವು ತಾಳಿದರೆ ಪತ್ರ ಬರೆದು ಸುಮ್ಮನೆ ಕೂರಲಾರೆ.ಹೋರಾಟದ ಜೊತೆಗೆ ಕಾನೂನು ಕ್ರಮಕ್ಕೆ ಮುಂದಾಗುತ್ತೇನೆ. . .’

ಕಸಾಪದ 26ನೇ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕಮಹೇಶ ಜೋಶಿ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡ ಮಾತುಗಳಿವು.

‘ಮಾಧ್ಯಮದಲ್ಲಿ 35 ವರ್ಷ ಕೆಲಸ ಮಾಡಿದ್ದೇನೆ. ಎಲ್ಲ ರಾಜಕೀಯ ಪಕ್ಷ ಹಾಗೂ ಮುಖಂಡರೊಂದಿಗೆ ಸಂಪರ್ಕ ಹೊಂದಿರುವೆ. ಆದರೆ, ರಾಜಕೀಯವಾಗಿ ನಾನು ತಟಸ್ಥ. ಯಾವುದೇ ರಾಜಕೀಯ ಪಕ್ಷದ‌ ಪ್ರಾಥಮಿಕ ಸದಸ್ಯತ್ವ ಪಡೆದುಕೊಂಡಿಲ್ಲ. ಪಕ್ಷಗಳ ಸಿದ್ಧಾಂತಗಳನ್ನೂ ಒಪ್ಪುವುದಿಲ್ಲ. ನಾನು ಬಿಜೆಪಿ ಮತ್ತುಆರೆಸ್ಸೆಸ್‌ಗೆ ಸೇರಿದವನು ಎಂದು ಕೆಲವರು ಅಪಪ್ರಚಾರ ಮಾಡಿದರು. ಇದಕ್ಕೆ ಕಿವಿಗೊಡದಮತದಾರರು ತಕ್ಕ ಉತ್ತರ ನೀಡಿದ್ದಾರೆ’ ಎಂದು ಹೇಳಿದರು.

ADVERTISEMENT

*5 ವರ್ಷಗಳ ಅವಧಿಯಲ್ಲಿ ಕನ್ನಡಿಗರು ಏನೆಲ್ಲಾ ನಿರೀಕ್ಷಿಸಬಹುದು?

ಜೋಶಿ:ನಾನು ದೂರದರ್ಶನವನ್ನು ಸಮೀಪ ದರ್ಶನವನ್ನಾಗಿಸಿದೆ. ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ರೂಪಿಸುತ್ತೇನೆ.ನಿವೃತ್ತಿ ಬಳಿಕ ಪುನರ್ವಸತಿಗಾಗಿ ಬಂದಿದ್ದಲ್ಲ.

*ಜಗತ್ತು ದಿನೇದಿನೇ ಬದಲಾಗುತ್ತಿದ್ದರೂ ಕಸಾಪ ಹೊಸತನ ಹಾಗೂ ತಂತ್ರಜ್ಞಾನಕ್ಕೆ ತೆರೆದುಕೊಂಡಿಲ್ಲ?.

ಜೋಶಿ:ಕನ್ನಡದ ಕಾಯಕಕ್ಕೆ ಆಧುನಿಕ ತಂತ್ರಜ್ಞಾನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತೇನೆ. ಸದಸ್ಯತ್ವ ನೋಂದಣಿ ಸೇರಿದಂತೆ ವಿವಿಧ ಪ್ರಕ್ರಿಯೆಗಳಿಗೆ ಮೊಬೈಲ್ ಆ್ಯಪ್‌ ರೂಪಿಸುತ್ತೇನೆ. ಮತದಾನವನ್ನೂ ಆ್ಯಪ್‌ ಮೂಲಕವೇ ನಡೆಸುವ ವ್ಯವಸ್ಥೆ ಕಲ್ಪಿಸುತ್ತೇನೆ.

* ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಇತ್ತೀಚಿನ ವರ್ಷಗಳಲ್ಲಿ ಅನ್ಯಾಯ ಆಗುತ್ತಲೇ ಇದೆ?

ಜೋಶಿ:ದೂರದರ್ಶನಕ್ಕೆ ಬರುವ ಮೊದಲು ಮೂರು ವರ್ಷಗಳು ಕಾರ್ಮಿಕ ಆಯುಕ್ತನಾಗಿದ್ದೆ. ಹೀಗಾಗಿ, ಉದ್ಯೋಗ ಕ್ಷೇತ್ರದಲ್ಲಿ ಕನ್ನಡಿಗರಿಗೆ ಆಗುವ ಅನ್ಯಾಯ ಅರಿವಿನಲ್ಲಿದೆ.

* ಬ್ಯಾಂಕಿಂಗ್ ಪರೀಕ್ಷೆ ಸೇರಿದಂತೆ ವಿವಿಧೆಡೆ ದ್ವಿಭಾಷಾ ಸೂತ್ರ ಅನುಸರಿಸಿ, ಹಿಂದಿ ಹೇರಿಕೆ ಮಾಡಲಾಗುತ್ತಿದೆಯಲ್ಲವೇ?

ಜೋಶಿ:ಯಾವುದೇ ಕಾರಣಕ್ಕೂ ದ್ವಿಭಾಷಾ ಸೂತ್ರ ಒಪ್ಪಲು ಸಾಧ್ಯವಿಲ್ಲ.ಕೇಂದ್ರ ಸರ್ಕಾರ ನಡೆಸುವ ಪರೀಕ್ಷೆಗಳು ಕನ್ನಡದಲ್ಲಿಯೂ ನಡೆಯಬೇಕು. ಕೇಂದ್ರ ಸರ್ಕಾರಿ ಕಚೇರಿಗಳು ಸೇರಿದಂತೆ ಯಾರೊಬ್ಬರು ಕನ್ನಡ ಕಡೆಗಣಿಸಿದರೆ ಧರಣಿ ಮಾಡಿ, ಕಾನೂನು ಸಲಹೆ ಪಡೆದು ಪ್ರಕರಣ ದಾಖಲಿಸುತ್ತೇನೆ.

* ಸ್ವಾಯತ್ತ ಸಂಸ್ಥೆ ಕಸಾಪ ಇತ್ತೀಚಿನ ವರ್ಷಗಳಲ್ಲಿ ಸರ್ಕಾರದ ಅಂಗ ಸಂಸ್ಥೆಯಂತೆ ವರ್ತಿಸುತ್ತಿದೆ ಎಂಬ ಟೀಕೆ ಇದೆಯಲ್ಲ?

ಜೋಶಿ:ಇದುಅಧ್ಯಕ್ಷರ ಮೇಲೆ ಅವಲಂಬನೆ ಆಗಿರುತ್ತದೆ. ನನ್ನ ಅವಧಿಯಲ್ಲಿ ಪರಿಷತ್ತು ಸರ್ಕಾರದ ಅಂಗ ಸಂಸ್ಥೆಯಂತೆ ವರ್ತಿಸುವುದಿಲ್ಲ. ಸ್ವಾಯತ್ತತೆ ಕಾಪಾಡಿಕೊಳ್ಳುತ್ತೇನೆ.

*ಮೂಲ ಆಶಯ ಮರೆತ ಕಸಾಪ, ಸಾಹಿತ್ಯ ಸಮ್ಮೇಳನ, ದತ್ತಿ ಪ್ರಶಸ್ತಿ ವಿತರಣೆಯಂತಹ ಕಾರ್ಯಕ್ರಮಗಳಿಗೆ ಸೀಮಿತ ಆಗುತ್ತಿದೆ ಎಂಬ ಆಕ್ಷೇಪವಿದೆ?

ಜೋಶಿ:ಸಮ್ಮೇಳನದ ಜೊತೆಗೆ ಸಾಹಿತ್ಯೋತ್ಸವ, ನಾಡಹಬ್ಬ, ಉಪನ್ಯಾಸ, ಸ್ಪರ್ಧೆ, ಕಲಾಪ್ರದರ್ಶನ, ಗೋಷ್ಠಿ, ಕಾರ್ಯಾಗಾರ ಸೇರಿದಂತೆ ಎಲ್ಲವಕ್ಕೂ ಆದ್ಯತೆ ನೀಡಲಾಗುವುದು.

*ಚುನಾವಣೆಯಲ್ಲಿ ನಿಮಗೆ ಬಿಜೆಪಿ ಮತ್ತು ಆರೆಸ್ಸೆಸ್ ಬೆಂಬಲ ಸೂಚಿಸಿದ್ದವು. ಕೇಂದ್ರ ಮತ್ತು ರಾಜ್ಯದಲ್ಲಿ ಈ ಬಿಜೆಪಿ ನೇತೃತ್ವದ ಸರ್ಕಾರಗಳೇ ಇವೆ. ಅವು ಕನ್ನಡ ವಿರೋಧಿ ನಿಲುವು ತಾಳಿದರೆ ನೀವು ಹೇಗೆ ಪ್ರತಿಭಟಿಸಲು ಸಾಧ್ಯ?

ಜೋಶಿ:ಯಾವುದೇ ಪಕ್ಷದ ಸರ್ಕಾರಕನ್ನಡ ಭಾಷೆ, ಸಂಸ್ಕೃತಿ, ಗಡಿ ಹಾಗೂ ನೆಲ–ಜಲದ ಬಗ್ಗೆ ವಿರುದ್ಧ ನಿಲುವು ತಾಳಿದರೆ ಹಿಂಜರಿಕೆ ಇಲ್ಲದೆ ಹೋರಾಟ ನಡೆಸುತ್ತೇನೆ.

*ಕನ್ನಡದ ಅಸ್ಮಿತೆಯನ್ನು ಕಾಯುವ, ಕನ್ನಡತನವನ್ನು ಬೆಳೆಸುವ ಆಶಯ ಹೊಂದಿರುವ ಪರಿಷತ್ತಿನ ಚುನಾವಣೆ ವೇಳೆ ಬಿಜೆಪಿ ನಿಮ್ಮ ಬೆಂಬಲಕ್ಕೆ ನಿಂತಿದ್ದು ಎಷ್ಟು ಸರಿ?

ಜೋಶಿ:ಮತಯಾಚಿಸಲು ವಿವಿಧ ಪಕ್ಷಗಳ ಕಚೇರಿಗೆ ಹೋದಾಗ ರಾಜಕೀಯ ವಿಚಾರ ಮಾತಾಡಿಲ್ಲ.ದೇವೇಗೌಡರನ್ನು ಸಂಪರ್ಕಿಸಿದಾಗ ಕಚೇರಿಗೆ ಬರಲು ಹೇಳಿದರು.ಅವರು ನನ್ನ ಪರ ಪತ್ರ ಬರೆದು ಬೆಂಬಲ ನೀಡಲು ಮನವಿ ಮಾಡಿದ್ದರು. ಹಾಗಂತ ನಾನು ಜೆಡಿಎಸ್‌ಗೆ ಸೇರಿದವನೆ? ಗದಗದಲ್ಲಿ ಡಿ.ಆರ್. ಪಾಟೀಲ, ಎಚ್‌.ಕೆ. ಪಾಟೀಲ ಅವರು ನನ್ನ ಪರ ಮತಯಾಚಿಸಿದ್ದರು. ನನ್ನನ್ನು ಕಾಂಗ್ರೆಸ್‌ ಪಕ್ಷಕ್ಕೆ ಸೇರಿದವನು ಎನ್ನಬಹುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.