ADVERTISEMENT

ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ಗಾಯಿತ್ರಿ ವಿರುದ್ಧ ಕಸಾಪ ಖಂಡನಾ ನಿರ್ಣಯ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 16:02 IST
Last Updated 4 ಸೆಪ್ಟೆಂಬರ್ 2025, 16:02 IST
   

ಬೆಂಗಳೂರು: ಅನುದಾನ ಬಿಡುಗಡೆ ಮಾಡದ ಕಾರಣ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಗಾಯಿತ್ರಿ ಅವರ ವಿರುದ್ಧ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಕಾರ್ಯಕಾರಿ ಸಮಿತಿಯು ಖಂಡನಾ ನಿರ್ಣಯ ಕೈಗೊಂಡಿದೆ. 

ಪರಿಷತ್ತಿಗೆ ವಾರ್ಷಿಕ ಅನುದಾನ ಬಿಡುಗಡೆಯಾಗದಿರುವ ಬಗ್ಗೆ ನಗರದಲ್ಲಿ ಬುಧವಾರ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು. ಇದಕ್ಕೆ ಕಾರಣರಾಗಿರುವ ಕೆ.ಎಂ.ಗಾಯಿತ್ರಿ ಅವರ ವಿರುದ್ಧ ಖಂಡನಾ ನಿರ್ಣಯವನ್ನು ತೆಗೆದುಕೊಳ್ಳಲಾಯಿತು. ಈ ನಿರ್ಣಯವನ್ನು ಪರಿಷತ್ತಿನ ಕಾರ್ಯಕಾರಿ ಸಮಿತಿಯ ಕಾರ್ಯದರ್ಶಿ ಬಿ.ಎಂ.ಪಟೇಲ್‌ಪಾಂಡು ಅವರು ಪತ್ರದ ಮೂಲಕ ಗಾಯಿತ್ರಿ ಅವರ ಗಮನಕ್ಕೆ ತಂದಿದ್ದಾರೆ ಎಂದು ಕಸಾಪ ಮೂಲಗಳು ತಿಳಿಸಿವೆ. 

ಖಂಡನಾ ನಿರ್ಣಯ ತಲುಪಿದ ಒಂದು ವಾರದೊಳಗೆ ಗಾಯಿತ್ರಿ ಅವರು ಅನುದಾನ ಬಿಡುಗಡೆ ಮಾಡದಿದ್ದರೆ, ಕಸಾಪ ಅಧ್ಯಕ್ಷ ಮಹೇಶ ಜೋಶಿ ಅವರ ನೇತೃತ್ವದಲ್ಲಿ ಕನ್ನಡ ಭವನದ ಎದುರು ಪ್ರತಿಭಟನೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ನಿರ್ಣಯದಲ್ಲಿ ಹೇಳಲಾಗಿದೆ.

ADVERTISEMENT

ಪ್ರಸಕ್ತ ಸಾಲಿನ ವಾರ್ಷಿಕ ಆಯವ್ಯಯದಲ್ಲಿ ಕಸಾಪಗೆ ಮಂಜೂರಾಗಿರುವ ವಾರ್ಷಿಕ ಅನುದಾನದ ಮೊದಲ ಕಂತು ₹ 1.25 ಕೋಟಿ, ಇನ್ನೂ ಬಿಡುಗಡೆ ಆಗದಿರುವ ಬಗ್ಗೆ ಇದಕ್ಕೂ ಮೊದಲು ಚರ್ಚಿಸಲಾಯಿತು. ಇದರಿಂದ ಪರಿಷತ್ತಿನ ಸಿಬ್ಬಂದಿಗೆ ವೇತನ, ನಿತ್ಯ ಚಟುವಟಿಕೆಗಳು, ಕನ್ನಡ ಪರ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿರುವ ಬಗ್ಗೆ ಕಳವಳ ವ್ಯಕ್ತವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.