ADVERTISEMENT

ಸಾಹಿತ್ಯ ಸಮ್ಮೇಳನ: ₹25 ಕೋಟಿಗೆ ಕಸಾಪ ಮನವಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2024, 15:46 IST
Last Updated 25 ಜನವರಿ 2024, 15:46 IST
ಮಹೇಶ್ ಜೋಶಿ
ಮಹೇಶ್ ಜೋಶಿ    

ಬೆಂಗಳೂರು: ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಂಬರುವ ಬಜೆಟ್‌ನಲ್ಲಿ ₹25 ಕೋಟಿ ಅನುದಾನ ಮೀಸಲಿಡುವಂತೆ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ. 

ಈ ಬಗ್ಗೆ ಕಸಾಪ ಅಧ್ಯಕ್ಷ ಮಹೇಶ ಜೋಶಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ‘ಹಾವೇರಿಯಲ್ಲಿ ನಡೆದ 86ನೇ ಸಾಹಿತ್ಯ ಸಮ್ಮೇಳನಕ್ಕೆ ಬಜೆಟ್‌ನಲ್ಲಿಯೇ ₹ 20 ಕೋಟಿ ಅನುದಾನ ನೀಡಿ, ಬಳಿಕ ₹ 5 ಕೋಟಿ ಅನುದಾನವನ್ನು ಹೆಚ್ಚುವರಿಯಾಗಿ ಸರ್ಕಾರ ನೀಡಿತ್ತು. ಅದೇ ರೀತಿ, ಈ ಬಾರಿಯ ಬಜೆಟ್‌ನಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ಮೀಸಲಿಡಬೇಕು. ಪರಿಷತ್ತಿನ ನಿರ್ವಹಣೆಗೆ ವಾರ್ಷಿಕ ₹ 20 ಕೋಟಿ ಅನುದಾನವನ್ನು ಒದಗಿಸಬೇಕು’ ಎಂದು ತಿಳಿಸಿದ್ದಾರೆ. 

‘ಈಗ ಪರಿಷತ್ತಿನ ಚಟುವಟಿಕೆಗಳ ಗಾತ್ರ ಹಿಗ್ಗಿದೆ. 31 ಜಿಲ್ಲಾ ಮತ್ತು 6 ಗಡಿನಾಡು ಘಟಕವನ್ನು ಪರಿಷತ್ತು ಹೊಂದಿದೆ. ತಾಲ್ಲೂಕು ಸಮ್ಮೇಳನಗಳ ಜತೆಗೆ ಜಿಲ್ಲಾ, ತಾಲ್ಲೂಕು, ಗಡಿನಾಡು ಘಟಕಗಳ ನಿರ್ವಹಣೆ, ಸಿಬ್ಬಂದಿ ವೇತನ, ಕಚೇರಿ ನಿರ್ವಹಣೆ ಸೇರಿ ವಿವಿಧ ವೆಚ್ಚಗಳನ್ನು ಭರಿಸಬೇಕಿದೆ. ನಿಘಂಟು ಯೋಜನೆಗೆ ಮರು ಚಾಲನೆ, ಯುವ ಸಂಪುಟ, ಸುವರ್ಣ ಮಹೋತ್ಸವದ ಸಂಪುಟಗಳೂ ಸೇರಿ ಹಲವು ಮಹತ್ವದ ಯೋಜನೆಗಳನ್ನು ಪರಿಷತ್ತು ಹೊಮ್ಮಿಕೊಂಡಿದೆ. ಹಳೆಯ ಅಮೂಲ್ಯವಾದ ಕೃತಿಗಳೂ ಮರು ಮುದ್ರಣ ಆಗಬೇಕಿದೆ. ಹೀಗಾಗಿ, ಪರಿಷತ್ತಿನ ನಿರ್ವಹಣೆಗೆ ಹೆಚ್ಚಿನ ಅನುದಾನ ಒದಗಿಸಬೇಕು’ ಎಂದು ಪತ್ರದಲ್ಲಿ ಕೋರಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.