ADVERTISEMENT

‘ಪೂರ್ಣಕುಂಭ ಪದ್ಧತಿಯನ್ನು ಕಂಬಾರರು ಖಂಡಿಸಬೇಕಿತ್ತು’; ಸಿ.ಬಸವಲಿಂಗಯ್ಯ

ಮಂಜುಶ್ರೀ ಎಂ.ಕಡಕೋಳ
Published 5 ಜನವರಿ 2019, 20:26 IST
Last Updated 5 ಜನವರಿ 2019, 20:26 IST
‘ರಂಗಭೂಮಿ: ಇತ್ತೀಚಿನ ಪ್ರಯೋಗಗಳು’ ಗೋಷ್ಠಿಯಲ್ಲಿ ಪ್ರೊ.ಲಕ್ಷ್ಮೀ ಚಂದ್ರಶೇಖರ, ಸಮ್ಮೇನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ, ಸಿ. ಬಸವಲಿಂಗಯ್ಯ, ಡಾ.ರಾಮಕೃಷ್ಣ ಮರಾಠೆ, ಸುಭಾಷ ನರೇಂದ್ರ ಪಾಲ್ಗೊಂಡಿದ್ದರು ಪ್ರಜಾವಾಣಿ ಚಿತ್ರ
‘ರಂಗಭೂಮಿ: ಇತ್ತೀಚಿನ ಪ್ರಯೋಗಗಳು’ ಗೋಷ್ಠಿಯಲ್ಲಿ ಪ್ರೊ.ಲಕ್ಷ್ಮೀ ಚಂದ್ರಶೇಖರ, ಸಮ್ಮೇನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ, ಸಿ. ಬಸವಲಿಂಗಯ್ಯ, ಡಾ.ರಾಮಕೃಷ್ಣ ಮರಾಠೆ, ಸುಭಾಷ ನರೇಂದ್ರ ಪಾಲ್ಗೊಂಡಿದ್ದರು ಪ್ರಜಾವಾಣಿ ಚಿತ್ರ   

ಡಾ.ಡಿ.ಸಿ.ಪಾವಟೆ ವೇದಿಕೆ, (ಧಾರವಾಡ): ‘ಸಮ್ಮೇಳನದಲ್ಲಿ ಮಹಿಳೆಯರು ಪೂರ್ಣ ಕುಂಭ ಹೊತ್ತು ಮೆರವಣಿಗೆ ಮಾಡಿದ ಊಳಿಗಮಾನ್ಯ ಪದ್ಧತಿಯನ್ನು ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರರು ಖಂಡಿಸಬೇಕಿತ್ತು’ ಎಂದು ರಾಷ್ಟ್ರೀಯ ನಾಟಕ ಶಾಲೆ ನಿರ್ದೇಶಕಸಿ.ಬಸವಲಿಂಗಯ್ಯ ಅಭಿಪ್ರಾಯಪಟ್ಟರು.

ಸಮ್ಮೇಳನದ ಸಮಾನಾಂತರ ವೇದಿಕೆ–2ರಲ್ಲಿ ಶನಿವಾರ ನಡೆದ ’ರಂಗಭೂಮಿ; ಇತ್ತೀಚಿನ ಪ್ರಯೋಗಗಳು’ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕಂಬಾರರು ತಮ್ಮ ಎಲ್ಲಾ ನಾಟಕಗಳಲ್ಲೂ ಹೆಣ್ಣಿನ ಬಗ್ಗೆ ಬರೆದಿದ್ದಾರೆ. ಕನಿಷ್ಠ ಸಮ್ಮೇಳನದ ಕೊನೆಯ ದಿನವಾದರೂ ಅವರು ಅಸಹಿಷ್ಣುತೆ, ಮೆರವಣಿಗೆಯನ್ನು ಖಂಡಿಸಿ ಮಾತನಾಡಬೇಕು. ಹೆಣ್ಣು ಮುಟ್ಟಾಗುತ್ತಾಳೆ ಅನ್ನುವ ಕಾರಣಕ್ಕಾಗಿ ದೇವಸ್ಥಾನ ಪ್ರವೇಶ ನಿಷೇಧಿಸಲಾಗುತ್ತದೆ. ಇದರ ಹಿಂದೆ ದೊಡ್ಡ ರಾಜಕಾರಣವೇ ನಡೆಯುತ್ತಿದೆ. ದೇವಸ್ಥಾನದ ಗರ್ಭಗುಡಿಯಲ್ಲೇ ಗರ್ಭ ಹೊತ್ತಿರುವ ಹೆಣ್ಣಿನ ಪ್ರವೇಶ ನಿರಾಕರಿಸಲಾಗುತ್ತದೆ. ಅಯ್ಯಪ್ಪ ಸ್ವಾಮಿ, ಅಪ್ಪ–ಅಮ್ಮ ಇಲ್ಲದೇ ಹುಟ್ಟಲು ಸಾಧ್ಯವೇ? ವೃತ್ತಿ ಮತ್ತು ಹವ್ಯಾಸಿ ರಂಗಭೂಮಿ ಇದಕ್ಕೆ ಪ್ರತಿಕ್ರಿಯಿಸಬೇಕು. ಇದನ್ನು ನಾವು ಕೇಳದೇ ಹೋದರೆ ಈ ರೀತಿಯ ಸಮ್ಮೇಳನ ಜಾತ್ರೆಯಾಗುತ್ತದೆಯೇ ಹೊರತು ಕನ್ನಡದ ಸಂಸ್ಕೃತಿ ಎಂದು ಹೇಳಿಕೊಳ್ಳಲೂ ಆಗದು’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ರಂಗಭೂಮಿ ಯಾವತ್ತಿಗೂ ಹೆಣ್ಣಿನ ಶೋಷಣೆ, ಹಸಿವು, ದೌರ್ಜನ್ಯಗಳ ಕುರಿತು ಮಾತನಾಡಿದೆ. ನಾರ್ವೆಯ ನಾಟಕಕಾರ ಇಬ್ಸನ್ ’ಡಾಲ್ ಹೌಸ್’ ನಾಟಕ ಬರೆದಾಗ, ಮೊದಲ ಬಾರಿಗೆ ಹೆಣ್ಣೊಬ್ಬಳು ರಾತ್ರಿ ಮನೆಬಿಟ್ಟು ಹೊರಡುತ್ತಾಳೆ. ಆಗ ಇಡೀ ಯುರೋಪ್ ಬೆಚ್ಚಿ ಬೀಳುತ್ತದೆ. ಅಂತೆಯೇ ಇಂದಿಗೂ ಭಾರತದಲ್ಲಿ ಹೆಣ್ಣುಮಕ್ಕಳು ಸುರಕ್ಷಿತವಾಗಿಲ್ಲ ಎಂಬುದು ಗೊತ್ತಾಗುತ್ತದೆ’ ಎಂದರು.

ಮೂರ್ತಿಗಳಿಗಿಂತ ಮನಸು ಕಟ್ಟಬೇಕು:‘100 ಅಡಿ ಬಸವಣ್ಣನ ಮೂರ್ತಿ ನಿಲ್ಲಿಸುವುದಕ್ಕಿಂತ ಬಸವಣ್ಣನನ್ನು ಜಂಗಮಗೊಳಿಸಬೇಕಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್, ಬಸವಣ್ಣನ ಮೂರ್ತಿಗಳನ್ನು ಕಟ್ಟುವುದಕ್ಕಿಂತ ದೇಶದ ಜನರ ಮನಸು–ಮನಸುಗಳನ್ನು ಕಟ್ಟಬೇಕಿದೆ. ಇಂದಿನ ರಾಜಕಾರಣ ಇಡೀ ದೇಶದ ಸಾಂಸ್ಕೃತಿಕ ಬದುಕನ್ನೇ ದಿಕ್ಕೆಡಿಸುತ್ತಿದೆ. ದೇಶದಲ್ಲಿ ಎಷ್ಟು ಅಸಹಿಷ್ಣುತೆ ಇದೆ ಎಂದರೆ ನಟ ನಾಸಿರುದ್ದೀನ್ ಷಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರೆ ಅವರಿಗೆ ಪಾಕಿಸ್ತಾನಕ್ಕೆ ವೀಸಾ ಕೊಟ್ಟು ಕಳುಹಿಸಿ ಎಂದು ಹೇಳಲಾಗುತ್ತದೆ’ ಎಂದು ವಿಷಾದಿಸಿದರು.

‘ಅಸಹಿಷ್ಣುತೆ, ನಿರುದ್ಯೋಗ, ಬಡತನ, ಶೋಷಣೆಯ ಕುರಿತು ಸಾಹಿತ್ಯ ಸಮ್ಮೇಳನದಲ್ಲಿ ಚರ್ಚೆಗಳಾಗಬೇಕು. ರಂಗಭೂಮಿ ಈಗಾಗಲೇ ಇಂಥ ವಿಷಯಗಳಿಗೆ ಸ್ಪಂದಿಸುತ್ತಿದೆ’ ಎಂದರು.

ರಂಗಶಿಕ್ಷಕರ ನೇಮಕಕ್ಕೆ ಒತ್ತಾಯ

ಬೆಂಗಳೂರಿನಂಥ ನಗರಗಳಲ್ಲಿ ಖಾಸಗಿ ಶಾಲೆಗಳು ರಂಗಶಿಕ್ಷಕರನ್ನು ನೇಮಿಸಿಕೊಂಡು ಒಳ್ಳೆಯ ಸಂಬಳ ಕೊಡುತ್ತಿವೆ. ಆದರೆ, ಅಲ್ಲಿ ಇಂಗ್ಲಿಷ್ ಕಡ್ಡಾಯ. ಕಂಬಾರರು ಸರ್ಕಾರಿ ಶಾಲೆಗಳಲ್ಲಿ ರಂಗಭೂಮಿ ಶಿಕ್ಷಕರನ್ನು ನೇಮಿಸುವಂತೆ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದು ಬಸವಲಿಂಗಯ್ಯ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.