ADVERTISEMENT

‘ಕನ್ನಡ ವಿಶ್ವವಿದ್ಯಾಲಯ ಕೇಸರೀಕರಣ ಆರೋಪದಲ್ಲಿ ಸತ್ಯವಿಲ್ಲ’

​ಪ್ರಜಾವಾಣಿ ವಾರ್ತೆ
Published 31 ಜನವರಿ 2022, 17:31 IST
Last Updated 31 ಜನವರಿ 2022, 17:31 IST

ಬೆಂಗಳೂರು: ‘ಕನ್ನಡ ವಿಶ್ವವಿದ್ಯಾಲಯವನ್ನು ಕೇಸರೀಕರಣಗೊಳಿಸುವ ಪ್ರಯತ್ನಗಳ ಮೂಲಕ ಸಂಸ್ಥೆಯ ಚೇತನ್ಯ ಕುಂದಿಸಲಾಗುತ್ತಿದೆ ಎಂದು ಲೇಖಕ ಬಂಜಗೆರೆ ಜಯಪ್ರಕಾಶ್ ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾದ ಮಾತು’ ಎಂದು ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯ ಸಮಿವುಲ್ಲಾ ಖಾನ್ ಹೇಳಿದ್ದಾರೆ.

‘ವಿಶ್ವವಿದ್ಯಾಲಯವು ಸಮಸ್ತ ಕನ್ನಡಿಗರ ಅಸ್ಮಿತೆಯಾಗಿ ಕೆಲಸ ಮಾಡುತ್ತಿದೆ. ಕನ್ನಡದ ಬಗ್ಗೆ ಕಾಳಜಿ ಇರುವ ಬಂಜಗೆರೆ ಅವರು ತಮ್ಮ ದೃಷ್ಟಿಕೋನ ಬದಲಿಸಿಕೊಳ್ಳಬೇಕು’ ಎಂದು ಹೇಳಿದ್ದಾರೆ.

‘ಕನ್ನಡ ವಿಶ್ವವಿದ್ಯಾಲಯವು ಸಂಶೋಧನೆ ಪ್ರಧಾನವಾದ ವಿಶ್ವವಿದ್ಯಾಲಯ. ಬೋಧಕ ವರ್ಗದ ವಿದ್ವತ್ ವಲಯದಿಂದ ನಿರೀಕ್ಷಿತ ಮಟ್ಟದ ಸಂಶೋಧನೆಗಳು, ಶೈಕ್ಷಣಿಕ ಚಟುವಟಿಕೆಗಳು, ಪುಸ್ತಕ ಪ್ರಕಟಣೆಗಳು ಆಗದಿರುವುದು ಗಮನಕ್ಕೆ ಬಂದಿದೆ. 2012ರಿಂದ ಇಲ್ಲಿಯವರೆಗಿನ ಬೋಧಕ ವರ್ಗದ ಕಾರ್ಯ ಪ್ರಗತಿ ಪರಿಶೀಲನೆಯನ್ನು ಕಾರ್ಯಕಾರಿ ಸಮಿತಿ ಸದಸ್ಯರ ತಂಡ ಕೈಗೊಂಡಿದೆ. ಆ ಮೂಲಕ ಶೈಕ್ಷಣಿಕ ಚಟುವಟಿಕೆಗಳ ಸಮರ್ಪಕ ಅನುಷ್ಠಾನಕ್ಕೆ ಪುನಶ್ಚೇತನ ನೀಡುವ ಪ್ರಯತ್ನ ಮಾಡಲಾಗಿದೆ’ ಎಂದಿದ್ದಾರೆ.

ADVERTISEMENT

‘ಕನ್ನಡ ವಿಶ್ವವಿದ್ಯಾಲಯದ ಸ್ವರೂಪಕ್ಕೆ ಯಾವುದೇ ಧಕ್ಕೆ ಇಲ್ಲದಂತೆ ಬೆಳೆಸಬೇಕು ಮತ್ತು ಉತ್ತಮ ಶೈಕ್ಷಣಿಕ ವಾತಾವರಣ ಸೃಷ್ಟಿಸಬೇಕು ಎಂಬ ಹಿರಿಯ ವಿದ್ವಾಂಸರ ಸಲಹೆಗಳನ್ನು ಸ್ವಾಗತಿಸುತ್ತೇನೆ. ವಿಶ್ವವಿದ್ಯಾಲಯಕ್ಕೆ ಅಗತ್ಯ ಇರುವ ಅನುದಾನ ನೀಡುವಂತೆ ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥನಾರಾಯಣ ಅವರಲ್ಲಿ ವಿನಂತಿಸುತ್ತೇನೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.