ಎಚ್.ಡಿ. ಕುಮಾರಸ್ವಾಮಿ
ಬೆಂಗಳೂರು: ‘ರಾಜ್ಯ ಸರ್ಕಾರ 10 ವರ್ಷಗಳ ಹಿಂದೆ ನಡೆಸಿದ ಜಾತಿಗಣತಿಯ ವರದಿಯನ್ನು ಮತ್ತೆ –ಮತ್ತೆ ಪರಿಶೀಲನೆಗೆ ನೀಡಲಾಗುತ್ತಿದೆ. ಆ ವರದಿ ದೋಷಪೂರಿತವಾಗಿದೆ. ಅದನ್ನು ಬಿಡಿ. ರಾಜ್ಯ ಸರ್ಕಾರದಲ್ಲಿ ದುಡ್ಡಿಗೇನೂ ಬರವಿಲ್ಲ. ಗಂಜಿ ಕೇಂದ್ರಗಳಿಗಾಗಿ ಬಾಯಿಬಿಟ್ಟುಕೊಂಡು ಹಲವರು ಕಾದಿದ್ದಾರೆ. ಅವರನ್ನು ಸೇರಿಸಿಕೊಂಡು ಸಮಿತಿ ರಚಿಸಿ, ಅವರಿಂದ ಹೊಸದಾಗಿ ಗಣತಿ ಮಾಡಿಸಿ’ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.
‘ಜಾತಿಗಣತಿ ವರದಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುತ್ತಲೇ ಇರುತ್ತಾರೆ. ಆದರೆ, ಕಾಂತರಾಜ ವರದಿ ಸರ್ಕಾರದ ಕೈ ಸೇರಿ ಎಷ್ಟು ವರ್ಷವಾಯಿತು? ಜಾತಿಗಳ ಸಮಸ್ಯೆಗಳಿಗೆ ಇವರು ಪರಿಹಾರ ಕೊಟ್ಟಿದ್ದಾರೆಯೇ? ಸಿದ್ದರಾಮಯ್ಯ ಏಳು ವರ್ಷಗಳವರೆಗೆ ಮುಖ್ಯಮಂತ್ರಿ ಆಗಿದ್ದರು. ಹೀಗಿದ್ದರೂ ಏನೂ ಮಾಡಿಲ್ಲ’ ಎಂದು ದೂರಿದರು.
‘ಈ ಕೆಲಸ ಮಾಡಲು ಸಾಧ್ಯವಾಗದೇ ಇದ್ದರೆ, ಸ್ವಲ್ಪ ಕಾಯಿರಿ. ಕೇಂದ್ರ ಸರ್ಕಾರವೇ ಜಾತಿಗಣತಿ ನಡೆಸಲು ತೀರ್ಮಾನಿಸಿದೆ. ಅದು ಬರುವವರೆಗೂ ಕಾಯಿರಿ’ ಎಂದರು.
ಸಂಪುಟ ಸಭೆಯಲ್ಲಿ ತೀರ್ಮಾನ: ಮುಖ್ಯಮಂತ್ರಿ ಸಿದ್ದರಾಮಯ್ಯ
ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ಜಾತಿ ಗಣತಿ ವರದಿಯ ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗುವುದು ಸಹಜ. ₹160 ಕೋಟಿ ವೆಚ್ಚದಲ್ಲಿ ಸಿದ್ದಪಡಿಸಲಾದ ವರದಿಯನ್ನು ಸ್ವೀಕರಿಸಲಾಗಿದ್ದು,
ವರದಿಯ ಜಾರಿಯ ಬಗ್ಗೆ ತೀರ್ಮಾನ ಕೈಗೊಳ್ಳಲು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಜಾತಿ ಗಣತಿ ವರದಿಗೆ ವಿರೋಧ ವ್ಯಕ್ತವಾಗಿರುವ ಬಗ್ಗೆ ಭಾನುವಾರ ಇಲ್ಲಿ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.