ಬಾಗಲಕೋಟೆ: ’ಪರ್ಸೆಂಟೆಜ್ ವಿಚಾರದಲ್ಲಿ ಹಿಟ್ ಅಂಡ್ ರನ್ ಕೆಲಸ ಬಿಟ್ಟು ಯಾರು ಲಂಚ ತೆಗೆದುಕೊಂಡಿದ್ದಾರೆ ಎಂಬುದರ ಬಗ್ಗೆ ದಾಖಲೆಗಳನ್ನು ಕೊಡಿ. ಆ ಬಗ್ಗೆ ಸೂಕ್ತ ಸಂಸ್ಥೆಯಿಂದ ತನಿಖೆ ಮಾಡಿಸೋಣ‘ ಎಂದುರಾಜ್ಯ ಗುತ್ತಿಗೆದಾರರ ಸಂಘದವರಿಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಾಕೀತು ಮಾಡಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನುಇಲಾಖೆಯ ಕಾರ್ಯಭಾರ ವಹಿಸಿಕೊಂಡ ನಂತರ8723 ಮಂದಿ ಗುತ್ತಿಗೆದಾರರಿಗೆ ₹10,210 ಕೋಟಿ ಮೊತ್ತ ಬಿಡುಗಡೆ ಮಾಡಿಸಿದ್ದೇನೆ. ಇದರಲ್ಲಿ ಯಾವುದೇ ಪರ್ಸೆಂಟೇಜ್ ವ್ಯವಹಾರ ನಡೆದಿಲ್ಲ. ಎಲ್ಲವನ್ನೂ ಪಾರದರ್ಶಕವಾಗಿ ನಡೆಸಿದ ಹೆಮ್ಮೆ ಇದೆ. ಈ ಅವಧಿಯಲ್ಲಿಯಾವುದೇ ಟೆಂಡರ್ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
‘ಸರ್ಕಾರಿ ಕಾಮಗಾರಿಗಳಲ್ಲಿ ಹಣ ಮಂಜೂರು ಮಾಡಲು ಮೊದಲು ಶೇ 15ರಿಂದ ಶೇ 20 ರಷ್ಟು ಕಮಿಷನ್ ಇತ್ತು. ಅದೀಗ ಶೇ 40ಕ್ಕೆ ಹೆಚ್ಚಿದೆ ಎಂಬುದು ಗುತ್ತಿಗೆದಾರರ ಸಂಘದವರ ಆರೋಪ. ಹೀಗೆ ಅನಗತ್ಯವಾಗಿ ತೇಜೋವಧೆ ಮಾಡುವುದು ಬಿಟ್ಟು ದಾಖಲೆಗಳ ಬಿಡುಗಡೆ ಮಾಡಲಿ’ ಎಂದು ಆಗ್ರಹಿಸಿದರು.
‘ನರಿ ತೋಟದಲ್ಲಿ ಹೊಟ್ಟೆ ತುಂಬ ಮೇಯ್ದ ನಂತರ ರಸ್ತೆಗೆ ಬಂದು ಊಳಿಟ್ಟಿತಂತೆ. ಇದರಿಂದ ಅದರೊಟ್ಟಿಗೆ ಮೇಯುತ್ತಿದ್ದ ಉಳಿದ ನರಿಗಳ ಹೊಟ್ಟೆಗೆ ಕಲ್ಲು ಬಿದ್ದಂತಾಯಿತಂತೆ’ ಎಂದು ಕಾರಜೋಳ ಮಾರ್ಮಿಕವಾಗಿ ಹೇಳಿದರು. ಸಂಘದ ಮುಖಂಡರು ಹಿರಿಯರು ಇದ್ದಾರೆ. ಅವರ ಬಗ್ಗೆ ಕೆಟ್ಟದ್ದಾಗಿ ಮಾತಾಡೊಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.