ಬೆಂಗಳೂರು: ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದ ಕೊನೆಯ ದಿನ ಸುವರ್ಣ ವಿಧಾನಸೌಧದ ಒಳಗೆ ಪ್ರತಿಭಟನೆ ನಡೆಸಿದ ಬಿಜೆಪಿ ಸದಸ್ಯರ ಮೇಲೆ ದೌರ್ಜನ್ಯ ಎಸಗಿದ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಆಗ್ರಹಿಸಿದರು.
ಸಚಿವೆ ಲಕ್ಷ್ಮಿ ಹೆಬ್ಬಾಳಕರ ಮತ್ತು ಬಿಜೆಪಿಯ ಸಿ.ಟಿ. ರವಿ ನಡುವೆ ನಡೆದ ವಾಗ್ವಾದ, ನಂತರ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದಾಗ ಸುವರ್ಣವಿಧಾನಸೌಧ ಒಳಗೆ ಬಂದ ಪೊಲೀಸರು ಬಿಜೆಪಿ ಸದಸ್ಯರನ್ನು ವಶಕ್ಕೆ ಪಡೆದಿದ್ದರು. ಈ ಘಟನೆಯನ್ನು ಪ್ರಸ್ತಾಪಿಸಿದ ನಾರಾಯಣ ಸ್ವಾಮಿ, ‘ಪೊಲೀಸರು ಹೇಗೆ ಒಳಗಡೆ ಬಂದರು? ಹೀಗಾದರೆ, ಸದಸ್ಯರಿಗೆ ರಕ್ಷಣೆ ಕೊಡುವವರು ಯಾರು? ಇದು ಹಕ್ಕು ಚ್ಯುತಿ ಅಲ್ಲವೇ? ಪೊಲೀಸರ ಮೇಲೆ ಕ್ರಮ ಆಗಬೇಕು’ ಎಂದು ಒತ್ತಾಯಿಸಿದರು.
ಆಗ ಸಭಾ ನಾಯಕ ಎನ್.ಎಸ್. ಬೋಸರಾಜು, ಕಾಂಗ್ರೆಸ್ ಸದಸ್ಯರಾದ ಸಲೀಂ ಅಹಮದ್, ಐವಾನ್ ಡಿಸೋಜ, ‘ಯಾವ ನಿಯಮದ ಅಡಿ ಈ ವಿಷಯ ಪ್ರಸ್ತಾಪಿಸುತ್ತಿದ್ದೀರಿ’ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಆಡಳಿತ– ವಿರೋಧ ಪಕ್ಷದ ಸದಸ್ಯರ ನಡುವೆ ವಾಗ್ವಾದ ನಡೆಯಿತು.
ಮಧ್ಯಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ, ‘ಈ ಪ್ರಕರಣವನ್ನು ಈಗಾಗಲೇ ಹಕ್ಕು ಚ್ಯುತಿ ಸಮಿತಿಗೆ ವಹಿಸಿದ್ದೇನೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.