
ವಿಧಾನಸಭೆ ಕಲಾಪ (ಸಂಗ್ರಹ ಚಿತ್ರ)
ಬೆಂಗಳೂರು: ಗ್ರಾಮೀಣಾಭಿವೃದ್ಧಿಇಲಾಖೆಯು ‘ವಿಬಿ ಜಿ ರಾಮ್ ಜಿ’ ವಿರುದ್ಧ ನೀಡಿದ್ದ ಜಾಹೀರಾತು ವಿಧಾನಸಭೆಯಲ್ಲಿ ಗುರುವಾರ ವಿರೋಧ ಪಕ್ಷ-ಆಡಳಿತ ಪಕ್ಷದ ಸದಸ್ಯರ ನಡುವೆ ವಾಕ್ಸಮರಕ್ಕೆ ವಸ್ತುವಾಯಿತು. ಗದ್ದಲ ತಹಬದಿಗೆ ಬಾರದೇ ಇದ್ದುದರಿಂದ ಕೆಲ ಹೊತ್ತು ಮುಂದೂಡಲಾಯಿತು. ಮತ್ತೆ ಕಲಾಪ ಆರಂಭವಾದಾಗಲೂ ವಾಗ್ವಾದ ಮುಂದುವರಿಯಿತು. ಸರ್ಕಾರದ ನಡೆ ವಿರೋಧಿಸಿ ವಿರೋಧ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು.
ಬಿಜೆಪಿ ಟೀಕಾಪ್ರಹಾರ
‘ಸಾರ್ವಜನಿಕರ ತೆರಿಗೆ ಹಣದಿಂದ ಕೇಂದ್ರ ಸರ್ಕಾರದ ವಿರುದ್ಧ ಇಲಾಖೆ ಈ ಜಾಹೀರಾತು ನೀಡಿದೆ. ಇದು ಸೇಡಿನ, ದ್ವೇಷದ ರಾಜಕಾರಣ. ತೆರಿಗೆ ಹಣದ ಲೂಟಿ’ ಎಂದು ಸದನದಲ್ಲಿ ಈ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಎಸ್. ಸುರೇಶ್ ಕುಮಾರ್ ವಾಗ್ದಾಳಿ ನಡೆಸಿದರು. ವಿರೋಧ ಪಕ್ಷದ ಇತರ ಸದಸ್ಯರೂ ದನಿಗೂಡಿಸಿದರು.
ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ‘ಯಾರಪ್ಪನ ದುಡ್ಡು ಇದು? ನೀವು ಕೇಂದ್ರ ಸರ್ಕಾರವನ್ನು ಟೀಕಿಸುವುದಾದರೆ ಕಾಂಗ್ರೆಸ್ ಪಕ್ಷದಿಂದ ಜಾಹೀರಾತು ಕೊಡಬೇಕಿತ್ತು’ ಎಂದು ಅಬ್ಬರಿಸಿದರು.
‘ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದ ತೀರ್ಮಾನವನ್ನು ಪಕ್ಷ ಒಪ್ಪದಿದ್ದರೂ ಸರ್ಕಾರ ಒಪ್ಪಬೇಕು. ಕೇಂದ್ರ ಸರ್ಕಾರದ ಯೋಜನೆ ವಿರುದ್ಧ ಜಾಹೀರಾತು ನೀಡಿರುವ ಈ ಸರ್ಕಾರಕ್ಕೆ ನಾಚಿಕೆಯಾಗಬೇಕು’ ಎಂದು ಬಿಜೆಪಿಯ ವಿ. ಸುನಿಲ್ ಕುಮಾರ್ ಟೀಕಿಸಿದರು. ದನಿಗೂಡಿಸಿದ ಯತ್ನಾಳ್, ‘ನಕಲಿ ಗಾಂಧಿಗಳನ್ನು ಮೆಚ್ಚಿಸಲು ನರೇಗಾ ಹಿಡಿದುಕೊಂಡಿದ್ದಾರೆ’ ಎಂದು ಹರಿಹಾಯ್ದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ, ‘ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ವಿರುದ್ಧ ಸುಖಾಸುಮ್ಮನೆ ‘ತೆರಿಗೆ ಭಯೋತ್ಪಾದನೆ’ಯ ಆರೋಪ ಮಾಡುತ್ತಿದೆ. ರಾಜ್ಯ–ಕೇಂದ್ರದ ಸಂಬಂಧ ಹಾಳು ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಇದನ್ನು ಪ್ರತಿಭಟಿಸಿ ಸಭಾತ್ಯಾಗ ಮಾಡುತ್ತಿದ್ದೇವೆ’ ಎಂದು ಹೇಳಿ ಸದಸ್ಯರ ಜತೆ ಸದನದಿಂದ ಹೊರನಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.