ವಿಧಾನಸಭೆ ಕಲಾಪ (ಸಂಗ್ರಹ ಚಿತ್ರ)
ಬೆಂಗಳೂರು: ವಿಧಾನಪರಿಷತ್ತಿನಲ್ಲಿ ವಿರೋಧ ಪಕ್ಷದ ಒತ್ತಾಯದಿಂದಾಗಿ ಬುಧವಾರ ಮತ ವಿಭಜನೆಗೆ ಹಾಕಿದ್ದರಿಂದ ಸೋಲು ಕಂಡಿದ್ದ ‘ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ಮಸೂದೆ’ಯನ್ನು ವಿಧಾನಸಭೆಯಲ್ಲಿ ಗುರುವಾರ ಪುನರ್ ಪರ್ಯಾಲೋಚನೆ ನಡೆಸಿ ಮತ್ತೆ ಅಂಗೀಕಾರ ಪಡೆಯಲಾಯಿತು.
ವಿಧಾನಪರಿಷತ್ತಿನಿಂದ ತಿರಸ್ಕೃತರೂಪದಲ್ಲಿದ್ದ ಮಸೂದೆಯನ್ನು ಕಾನೂನು ಸಚಿವ ಎಚ್.ಕೆ. ಪಾಟೀಲ ಅವರು ಮಂಡಿಸಿದರು.
ವಿಧಾನಪರಿಷತ್ತಿನಲ್ಲಿ ಈ ಮಸೂದೆಯ ಕುರಿತು ಸುದೀರ್ಘ ಚರ್ಚೆಯ ಬಳಿಕ ಅನುಮೋದನೆ ವೇಳೆಯಲ್ಲಿ ಆಡಳಿತ ಪಕ್ಷದ ಸದಸ್ಯರು ಕಡಿಮೆ ಇರುವುದನ್ನು ಗಮನಿಸಿದ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವಿಭಜನೆ ಮತಕ್ಕೆ ಆಗ್ರಹಿಸಿದರು. ಮಸೂದೆಯನ್ನು ಮತಕ್ಕೆ ಹಾಕಿದಾಗ ಮಸೂದೆ ಪರ 23 ಮಸೂದೆ ವಿರುದ್ಧ 26 ಮತಗಳು ಚಲಾವಣೆಗೊಂಡಿದ್ದರಿಂದಾಗಿ, ಮಸೂದೆಗೆ ಸೋಲುಂಟಾಗಿತ್ತು.
ಅಂಗೀಕಾರ: ‘ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳ (ಕ್ಷೇಮಾಭಿವೃದ್ಧಿ ಕ್ರಮಗಳು ಮತ್ತು ದೌರ್ಜನ್ಯಗಳ ವಿರುದ್ಧ ರಕ್ಷಣೆ’ ಮಸೂದೆ, ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ( ತಿದ್ದುಪಡಿ) ಮಸೂದೆ, ಕರ್ನಾಟಕ ಲಿಫ್ಟ್‌ಗಳ, ಎಸ್ಕಲೇಟರುಗಳ ಮತ್ತು ಪ್ಯಾಸೆಂಜರ್ ಕನ್ವೇಯರ್‌ಗಳ (ತಿದ್ದುಪಡಿ) ಮಸೂದೆಗೂ ವಿಧಾನಸಭೆ ಅಂಗೀಕಾರ ನೀಡಿತು.
ಕೊಡಗಿನಲ್ಲಿ ಜಾರಿಯಲ್ಲಿರುವ ‘ಜಮ್ಮಾ ಬಾಣೆ’ ಭೂಹಿಡುವಳಿಯಡಿ ಭೂ ಹಕ್ಕು ಬದಲಾವಣೆ, ನೋಂದಣಿ, ಉತ್ತರಾಧಿಕಾರ, ಪರಭಾರೆಗಳನ್ನು ಸರಳೀಕರಿಸುವ ಉದ್ದೇಶದಿಂದ ಮಂಡಿಸಿದ ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ಮಸೂದೆಯನ್ನು ಸದನ ಸಮಿತಿಗೆ ವಹಿಸಲಾಯಿತು. ಮಸೂದೆಯಲ್ಲಿ ಸಾಕಷ್ಟು ಜಟಿಲತೆ ಇರುವ ಕಾರಣ ಪರಿಶೀಲನೆಗಾಗಿ ಸದನ ಸಮಿತಿಗೆ ವಹಿಸುವಂತೆ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.