ADVERTISEMENT

ಬಿಜೆಪಿಗೆ ಮುಜುಗರ ತಂದ ಲಂಚ ಪ್ರಕರಣ: ವಿರೂಪಾಕ್ಷಪ್ಪಗೆ ಸಿಎಂ ಬೊಮ್ಮಾಯಿ ತರಾಟೆ 

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2023, 19:42 IST
Last Updated 5 ಮಾರ್ಚ್ 2023, 19:42 IST
ಕೆ. ಮಾಡಾಳ್‌ ವಿರೂಪಾಕ್ಷಪ್ಪ
ಕೆ. ಮಾಡಾಳ್‌ ವಿರೂಪಾಕ್ಷಪ್ಪ   

ಬೆಂಗಳೂರು: ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಇರುವಾಗ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರ ಪುತ್ರನ ಲಂಚ ಪಡೆದ ಪ್ರಕರಣ ಬಿಜೆಪಿಗೆ ತೀವ್ರ ಮುಜುಗರ ಉಂಟು ಮಾಡಿದೆ.

ಈ ಪ್ರಕರಣ ಚುನಾವಣೆಯ ಫಲಿತಾಂಶದ ಮೇಲೂ ಪರಿಣಾಮ ಬೀರಬಹುದು ಎಂಬ ಆತಂಕವೂ ಮೂಡಿದೆ. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ವಿರೂಪಾಕ್ಷಪ್ಪ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಈವರೆಗೂ ಯಾವುದೇ ಪಕ್ಷದ ಪರ ಅಥವಾ ವಿರುದ್ಧ ‘ಅಲೆ’ ಸೃಷ್ಟಿಯಾಗದೇ ಇರುವ ಸಂದರ್ಭದಲ್ಲೇ ಲಂಚ ಪ್ರಕರಣ ಬಹಿರಂಗವಾಗಿದೆ. ಇದರಿಂದ ಪಕ್ಷದ ವಿರುದ್ಧ ಜನ ತಿರುಗಿ ಬೀಳುವ ಸಾಧ್ಯತೆ ಇದೆ. ನಿಶ್ಚಿತವಾಗಿ ಚುನಾವಣೆಯಲ್ಲಿ ಈ ಪ್ರಕರಣದಿಂದ ಪಕ್ಷಕ್ಕೆ ಹಿನ್ನಡೆಯಾಗಬಹುದು ಎಂದು ಪಕ್ಷದ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ADVERTISEMENT

ಶೇ 40ರಷ್ಟು ಲಂಚದ ಪ್ರಕರಣ ಮುನ್ನೆಲೆಗೆ ಬಂದಾಗ ದಾಖಲೆ ಇದ್ದರೆ ಕೊಡಿ ತನಿಖೆ ಮಾಡಿಸುತ್ತೇವೆ ಎಂದು ಬಿಜೆಪಿ ನಾಯಕರು ಸವಾಲು ಹಾಕಿದ್ದರು. ಇದೀಗ ದಾಖಲೆ ಸಮೇತ ಶಾಸಕ ಸಿಕ್ಕಿಬಿದ್ದಿರುವುದು ಕಾಂಗ್ರೆಸ್‌ಗೆ ಪ್ರಬಲ ಅಸ್ತ್ರ ಸಿಕ್ಕಿದಂತಾಗಿದೆ ಎಂದು ಚರ್ಚಿಸಲಾಗುತ್ತಿದೆ.

ಕಾಂಗ್ರೆಸ್‌ನ ಶೇ 40ಲಂಚ ಆರೋಪಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ ಅವಧಿಯಲ್ಲಿ ನಡೆದ ಅರ್ಕಾವತಿ ಬಡಾವಣೆ ರೀಡೂ ಒಂದು ದೊಡ್ಡ ಹಗರಣ, ₹8,000 ಕೋಟಿಯ ಈ ಹಗರಣದ ಹಣ ಯಾರ ಜೇಬಿಗೆ ಹೋಗಿದೆ ಎಂದು ಪ್ರಶ್ನಿಸುವ ಮೂಲಕ ತಿರುಗೇಟು ನೀಡಿದ್ದರು. ಅಲ್ಲದೇ, ಈ ಹಗರಣದ ಆರೋಪಿಗಳನ್ನು ಜೈಲಿಗೆ ಕಳುಹಿಸುವುದಾಗಿಯೂ ವಿಧಾನಸಭೆಯಲ್ಲಿ ಹೇಳಿದ್ದರು.

‘ಮಾಡಾಳ್‌ ಅವರ ಪ್ರಕರಣದಲ್ಲಿ ಲೋಕಾಯುಕ್ತಕ್ಕೆ ಮುಕ್ತವಾಗಿ ಕಾರ್ಯನಿರ್ವಹಿಸಲು ನಮ್ಮ ಸರ್ಕಾರ ಅವಕಾಶ ನೀಡಿದೆ. ಹೀಗಾಗಿ ದಾಳಿ ನಡೆಸಿ ಪ್ರಶಾಂತ್‌ ಮಾಡಾಳ್‌ ಅವರನ್ನು ಬಂಧಿಸಲಾಗಿದೆ. ಕಾಂಗ್ರೆಸ್‌ ಸರ್ಕಾರವಿದ್ದಾಗ ಹಗರಣ ಹೊರಗೆ ಬರುತ್ತದೆ ಎಂದು ಲೋಕಾಯಕ್ತವನ್ನು ರದ್ದು ಮಾಡಿ, ಎಸಿಬಿಯನ್ನು ರಚಿಸಿತ್ತು. ಎಲ್ಲ ಪ್ರಕರಣಗಳಿಗೂ ಕ್ಲಿನ್‌ಚಿಟ್‌ ನೀಡಿತ್ತು’ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.