ADVERTISEMENT

ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ: ಸಚಿವರ ನುಡಿ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2021, 19:33 IST
Last Updated 20 ಡಿಸೆಂಬರ್ 2021, 19:33 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಳಗಾವಿ (ಸುವರ್ಣ ವಿಧಾನಸೌಧ): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ. ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಅವರ ಸಚಿವ ಸಂಪುಟದ ಸದಸ್ಯರು ಪ್ರತಿಕ್ರಿಯಿಸಿದರು.

‘ಸ್ಥಾನಮಾನ, ಅಧಿಕಾರ ಪದನಾಮ ಶಾಶ್ವತವಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ ಮಾತಿಗೆ ಹಲವು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

‘ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಬದಲಾವಣೆ ಇಲ್ಲ ಎಂದು ವರಿಷ್ಠರು ಸ್ಪಷ್ಟವಾಗಿ ಹೇಳಿದ್ದಾರೆ. ನಾವೆಲ್ಲರೂ ಬೊಮ್ಮಾಯಿ ಜೊತೆ ಇದ್ದೇವೆ. ಇದೆಲ್ಲ ಕೇವಲ ಕಾಲ್ಪನಿಕ. ಅವರ ಕ್ಷೇತ್ರದಲ್ಲಿ ಭಾವನಾತ್ಮಕವಾಗಿ ಮಾತನಾಡಿದ್ದಾರೆ ಅಷ್ಟೆ’ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.

ADVERTISEMENT

ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಪ್ರತಿಕ್ರಿಯಿಸಿ, ‘ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಮುಂದುವರಿಯಲಿದ್ದಾರೆ. ಅವರ ನಾಯಕತ್ವದಲ್ಲಿ ಎಲ್ಲವೂ ನಡೆಯಲಿದೆ. ನಾನು ಸ್ಪಷ್ಟವಾಗಿ ಹೇಳುತ್ತೇನೆ’ ಎಂದರು.

ಅದು ಸಹಜವಾಗಿ ಬಂದಿರುವ ಮಾತು. ಬದಲಾವಣೆ ಎನ್ನುವುದು ಸಹಜ. ಪ್ರಕ್ರಿಯೆಗಳು ನಡೆಯುತ್ತಲೇ ಇರುತ್ತವೆ. ಪಕ್ಷ ನನಗೆ ಮುಖ್ಯಮಂತ್ರಿ ಸ್ಥಾನ ಕೊಟ್ಟರೆ ಮಾಡಿ ತೋರಿಸುತ್ತೇನೆ. ಪ್ರಾಮಾಣಿಕವಾಗಿ ನಿರ್ಣಯ ತೆಗೆದುಕೊಳ್ಳುವವರು ಮುಖ್ಯಮಂತ್ರಿ ಆಗಬೇಕು. ಬಾಲಂಗೋಚಿಗಳಿಗೆ ಕೊಟ್ಟರೆ ಕಷ್ಟ’ ಎಂದರು.

ಹೇಳಿಕೆಯಲ್ಲಿ ತಪ್ಪಿಲ್ಲ: ‘ಬೊಮ್ಮಾಯಿ ತಮ್ಮ ಕ್ಷೇತ್ರದಲ್ಲಿ ಭಾವನಾತ್ಮಕವಾಗಿ ಮಾತನಾಡಿರುವುದು ಸಹಜ. ನಾನು ಕೂಡ ನನ್ನ ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತ. ನಮ್ಮ ಜನರ ಎದುರು ನಮ್ಮ ಅಧಿಕಾರ ತೋರಲು ಆಗುವುದಿಲ್ಲ. ಹೀಗಾಗಿ, ಅವರ ಹೇಳಿಕೆಯಲ್ಲಿ ತಪ್ಪಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ‌.ಕೆ. ಶಿವಕುಮಾರ್ ಹೇಳಿದರು.

ವಿಧಾನ ಪರಿಷತ್‌ ಕಾಂಗ್ರೆಸ್‌ ಸದಸ್ಯ ಸಿ.ಎಂ ಇಬ್ರಾಹಿಂ, ‘ಅದು ಭಾವನಾತ್ಮಕ ಕಣ್ಣೀರು. ಮುಂದೆ ಜಾಗ ಖಾಲಿ‌ ಮಾಡುವ ಸೂಚನೆ. ಅಧಿಕಾರ ಶಾಶ್ವತವಲ್ಲ ಎಂದು ಹೇಳುತ್ತಾರೆ. ಜೀವನವೇ ಶಾಶ್ವತವಲ್ಲ, ಕುರ್ಚಿ ಯಾವಾಗ ಶಾಶ್ವತ? ಅದನ್ನು ನೋಡಿ ಬಸವ ಕೃಪಾದವರು ಬಸವಕೃಪಾದಲ್ಲೇ ಇರಿ. ಕೇಶವ ಕೃಪ ನಂಬಿ‌ಹೋದರೆ ಅಲ್ಲೂ ಇಲ್ಲ ಇಲ್ಲೂ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.