ADVERTISEMENT

ರಾಜ್ಯ ಸರ್ಕಾರ ಸಾಲದ ಸುಳಿಯಲ್ಲಿದೆ, ಶ್ವೇತ ಪತ್ರ ಹೊರಡಿಸಿ: ಆಯನೂರು ಮಂಜುನಾಥ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2022, 21:55 IST
Last Updated 14 ಮಾರ್ಚ್ 2022, 21:55 IST
ವಿಧಾನಪರಿಷತ್ತಿನಲ್ಲಿ ಆಯನೂರು ಮಂಜುನಾಥ್
ವಿಧಾನಪರಿಷತ್ತಿನಲ್ಲಿ ಆಯನೂರು ಮಂಜುನಾಥ್   

ಬೆಂಗಳೂರು: ‘ರಾಜ್ಯ ಸರ್ಕಾರ ಸಾಲದ ಸುಳಿಯಲ್ಲಿದೆ. ಹಾಗೆಂದು, ಈ ಸಾಲ ಬೊಮ್ಮಾಯಿ ಸರ್ಕಾರ ಆರಂಭಿಸಿದ್ದಲ್ಲ. ರಾಜ್ಯದ ಆರ್ಥಿಕ ಸ್ಥಿತಿ ಅರಿಯಲು ಶ್ವೇತ ಪತ್ರ ಹೊರಡಿಸಬೇಕು.ಎಲ್ಲರೂ ಸೇರಿ ಈ ಬೇಡಿಕೆ ಮಂಡಿಸೋಣ’ ಎಂದು ಬಿಜೆಪಿಯ ಆಯನೂರು ಮಂಜುನಾಥ ಅವರು ಸಲಹೆ ನೀಡಿದರು.

ವಿಧಾನ ಪರಿಷತ್ತಿನಲ್ಲಿ ಬಜೆಟ್‌ ಮೇಲೆ ಮಾತನಾಡಿದ ಅವರು, ‘ಯಾರ ಅವಧಿಯಲ್ಲಿ ಎಷ್ಟು ಸಾಲ ಆಗಿದೆ ಎನ್ನುವುದೂ ಎಲ್ಲರಿಗೂ ತಿಳಿಯಲಿ. ಒಬ್ಬರು ಇನ್ನೊಬ್ಬರನ್ನು ಟೀಕಿಸುವ ಬದಲು ವಸ್ತುಸ್ಥಿತಿ ಅರಿತುಕೊಳ್ಳೋಣ’ ಎಂದು ಹೇಳಿದರು.

‘ಸಾಲ1 ಲಕ್ಷ ಕೋಟಿ ತಲುಪಲು 60 ವರ್ಷ ಬೇಕಾಯಿತು. ಆದರೆ, ಸಿದ್ದರಾಮಯ್ಯ ಅವಧಿಯಲ್ಲಿ ಅದು ಇಮ್ಮಡಿಯಾಯಿತು. ಸಾಲದ ಸುಳಿಗೆ ಸಿಲುಕಿಸಿದ್ದೇ ಸಿದ್ದರಾಮಯ್ಯ ಸರ್ಕಾರ. ಕುಮಾರಸ್ವಾಮಿ ಅವಧಿಯಲ್ಲೂ ಸಾಕಷ್ಟು ಸಾಲ ಆಗಿದೆ.ಬಿಜೆಪಿ ಅಧಿಕಾರದ ಅವಧಿಯಲ್ಲಿ ಕೋವಿಡ್‌, ಆದಾಯ ಕೊರತೆ, ಸಂಪನ್ಮೂಲ ಕ್ರೋಡೀಕರಣ ಆಗದೆ ಮತ್ತಷ್ಟು ಸಾಲ ಮಾಡಬೇಕಾಯಿತು. ಯಾವುದೇ ಸರ್ಕಾರ ಕೈಗೊಂಡ ನಿರ್ಧಾರವನ್ನು ಮುಂದಿನ ಸರ್ಕಾರ ನಡೆಸಿಕೊಂಡು ಹೋಗಬೇಕು’ ಎಂದು ಹೇಳಿದರು.

ADVERTISEMENT

ಮಾತಿನ ಮಧ್ಯೆ ರಾಜಕೀಯ ವಿಚಾರ ಪ್ರಸ್ತಾಪಿಸಿದ ಆಯನೂರು ಮಂಜುನಾಥ ಅವರು, ‘ಕರ್ನಾಟಕದಲ್ಲಷ್ಟೇ ಕಾಂಗ್ರೆಸ್‌ ಉಸಿರಾಡುತ್ತಿದೆ. ಇಲ್ಲಿ ಯಾರ ಮಾಸ್ಕ್‌ ಅನ್ನು ಯಾರು ಕೀಳುತ್ತಾರೋ ಗೊತ್ತಿಲ್ಲ’ ಎಂದು ಛೇಡಿಸಿದರು.

‘ಇಲಾಖಾವಾರು ಬಜೆಟ್‌ನಿಂದ ನ್ಯಾಯ ಅಸಾಧ್ಯ’
‘ಇಲಾಖಾವಾರು ಇದ್ದ ಬಜೆಟ್ ವಲಯವಾರು ಆಗಿದೆ. ಈ ರೀತಿಯ ಬಜೆಟ್‌ನಿಂದ ಎಲ್ಲ ಇಲಾಖೆಗಳಿಗೆ ನ್ಯಾಯ ಒದಗಿಸುವುದು ಕಷ್ಟ. ಹಿಂದಿನ ವ್ಯವಸ್ಥೆ ಜಾರಿಗೆ ಬರಬೇಕು’ ಎಂದು ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ ಹೇಳಿದರು.

‘ಈಗಾಗಲೇ ಘೋಷಿಸಿದ ರೈತರ ಸಾಲ ಮನ್ನಾಕ್ಕೆ ಇನ್ನೂ ₹ 400 ಕೋಟಿ ಬೇಕಿದೆ. ಅರ್ಹ ರೈತರು ಸಾಲ ಸಿಗದೆ ಅಸಹಾಯಕರಾಗಿದ್ದಾರೆ. ರೈತರ ಬದುಕು ಉಳಿಸಲು ಸರ್ಕಾರ ಕ್ರಮ‌ ಕೈಗೊಳ್ಳಬೇಕು. ಶಿಕ್ಷಣವನ್ನು ರಾಷ್ಟ್ರೀಕರಣ ಮಾಡಿ, ಎಲ್ಲರಿಗೂ ಸಮಾನ ಶಿಕ್ಷಣ ಸಿಗುವಂತೆ ಮಾಡಬೇಕು’ ಎಂದು ಅವರು ಆಗ್ರಹಿಸಿದರು.

‘ಕೇಂದ್ರವೂ ಶ್ವೇತ ಪತ್ರ ಹೊರಡಿಸಲಿ’
‘ರಾಜ್ಯ ಸರ್ಕಾರದಿಂದ ಮಾತ್ರವಲ್ಲ, ಕೇಂದ್ರ ಸರ್ಕಾರ ಕೂಡಾ ಶ್ವೇತ ಪತ್ರ ಹೊರಡಿಸಬೇಕು’ ಎಂದು ಕಾಂಗ್ರೆಸ್ಸಿನ ನಜೀರ್ ಅಹ್ಮದ್ ಹೇಳಿದರು.

‘ರಾಜ್ಯಕ್ಕೆ ಅನ್ಯಾಯ ಆಗುತ್ತಿರುವಾಗ ಎಲ್ಲರೂ ಹೋಗಿ ನ್ಯಾಯ ಕೇಳಬೇಕು. 2010-11ರಲ್ಲಿ ಕೇಂದ್ರದ ಪಾಲು ಶೇ 23ರಷ್ಟು ಇತ್ತು. 2015-16 ನಲ್ಲಿ ಶೇ 27 ಆಯಿತು. 2021-22 ಈಗಶೇ 18ಕ್ಕೆ ಇಳಿದಿದೆ. ಕೇಂದ್ರದಿಂದ ಬರುವ ಅನುದಾನಕಡಿತವನ್ನು ಪ್ರಶ್ನಿಸಲೇಬೇಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.