ಡಿ.ಕೆ.ಶಿವಕುಮಾರ್
ಬೆಂಗಳೂರು: ‘ನಾವು ಯಾವುದೇ ವಿಶ್ವವಿದ್ಯಾಲಯಗಳನ್ನು ಮುಚ್ಚುವುದಿಲ್ಲ, ಅವುಗಳನ್ನು ದೊಡ್ಡ ವಿಶ್ವವಿದ್ಯಾಲಯಗಳೊಂದಿಗೆ ವಿಲೀನ ಮಾಡುತ್ತೇವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ವಿರೋಧಪಕ್ಷದ ನಾಯಕ ಆರ್.ಅಶೋಕ ಅವರು ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡುವಾಗ ಮಧ್ಯ ಪ್ರವೇಶಿಸಿದ ಅವರು ಈ ವಿಷಯ ತಿಳಿಸಿದರು.
‘ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳಿಗೆ ವಿಶ್ವವ್ಯಾಪಿ ಮಾನ್ಯತೆ ಇದೆ. ಸಣ್ಣ ಪುಟ್ಟ ಹೊಸ ವಿಶ್ವವಿದ್ಯಾಲಯಗಳಿಗೆ ಅಷ್ಟು ಮಾನ್ಯತೆ ಸಿಗುವುದಿಲ್ಲ. ಇದರಿಂದ ವಿದ್ಯಾರ್ಥಿಗಳಿಗೂ ಸಮಸ್ಯೆ ಆಗುತ್ತದೆ. ಅಲ್ಲದೇ, ಮಂಡ್ಯ, ಚಾಮರಾಜ ವಿಶ್ವವಿದ್ಯಾಲಯಗಳಿಗೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೂ ಹೋಗುವುದಿಲ್ಲ. ಹೀಗಾಗಿ ನಾವು ಹೊಸ ವಿಶ್ವವಿದ್ಯಾಲಯಗಳನ್ನು ಮುಚ್ಚುವುದಿಲ್ಲ. ಅವುಗಳನ್ನು ವಿಲೀನಗೊಳಿಸುತ್ತೇವೆ. ನೀವು ವಿಘಟನೆ ಮಾಡುವವರು ನಾವು ಒಂದುಗೂಡಿಸುವವರು’ ಎಂದು ಶಿವಕುಮಾರ್ ಕುಟುಕಿದರು.
‘ಈ ವಿಶ್ವವಿದ್ಯಾಲಯಗಳು ನಮ್ಮ ಪ್ರಯೋಗ ಅಲ್ಲ. ಇದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆಪ್ತ ಸ್ಯಾಮ್ ಪಿತ್ರೋಡ ಅವರ ಪರಿಕಲ್ಪನೆಯ ಕೂಸು. 2013 ರಲ್ಲಿ ಒಡಮೂಡಿದ ಈ ವಿಶ್ವವಿದ್ಯಾಲಯಗಳ ಸ್ಥಾಪನೆಯ ಒಪ್ಪಂದಕ್ಕೆ 2015ರಲ್ಲಿ ಕಾಂಗ್ರೆಸ್ ಸರ್ಕಾರವೇ ಸಹಿ ಮಾಡಿತ್ತು’ ಎಂದು ಅಶೋಕ ಹೇಳಿದರು.
ಇನ್ನೂ ನಿರ್ಧಾರ ಆಗಿಲ್ಲ:
ಇದಕ್ಕೂ ಮುನ್ನ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಜಗದೀಶ್ ಗುಡಗಂಟಿ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ‘2022–23ರಲ್ಲಿ ಆರಂಭವಾದ ಏಳು ಹೊಸ ವಿಶ್ವವಿದ್ಯಾಲಯಗಳ ವಿಷಯದಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಈ ವಿಶ್ವವಿದ್ಯಾಲಯಗಳ ಭವಿಷ್ಯದ ಬಗ್ಗೆ ಸದ್ಯ ಆತಂಕ ಬೇಡ’ ಎಂದರು.
‘ಹಳೆಯ ವಿಶ್ವವಿದ್ಯಾಲಯಗಳಲ್ಲಿ ನೌಕರರಿಗೆ ಪಿಂಚಣಿ ನೀಡುವುದಕ್ಕೂ ಹಣವಿಲ್ಲ. ಆದರೂ, ಹಿಂದಿನ ಸರ್ಕಾರ ಏಳು ಹೊಸ ವಿಶ್ವವಿದ್ಯಾಲಯಗಳನ್ನು ಆರಂಭಿಸಿತ್ತು. ಅವುಗಳಿಗೆ ತಲಾ ₹ 2 ಕೋಟಿ ಅನುದಾನವನ್ನು ಮಾತ್ರ ಒದಗಿಸಲಾಗಿತ್ತು. ಈ ಹೊಸ ವಿಶ್ವವಿದ್ಯಾಲಯಗಳ ಭವಿಷ್ಯದ ವಿಚಾರದಲ್ಲಿ ಇನ್ನೂ ಅಂತಿಮ ತೀರ್ಮಾನ ಆಗಿಲ್ಲ’ ಎಂದರು.
ಉತ್ತರಕ್ಕೆ ಆಕ್ಷೇಪಿಸಿದ ಬಿಜೆಪಿಯ ಡಾ.ಸಿ.ಎನ್. ಅಶ್ವತ್ಥನಾರಾಯಣ, ‘ಸಚಿವರಿಗೆ ಮರೆವು ಬಂದಿದೆ. ಹೊಸ ವಿಶ್ವವಿದ್ಯಾಲಯಗಳನ್ನು ಮುಚ್ಚುವುದಾಗಿ ಸಂದರ್ಶನದಲ್ಲಿ ಹೇಳಿದ್ದಾರೆ. ರಾಜ್ಯಪಾಲರ ಅಧಿಕಾರ ಕಿತ್ತುಕೊಂಡಿದ್ದೀರಿ. ವಿಶ್ವವಿದ್ಯಾಲಯಗಳ ಪ್ರಗತಿ ಪರಿಶೀಲನೆಗೆ ರಾಜ್ಯಪಾಲರಿಗೆ ಮಾತ್ರ ಅಧಿಕಾರ ಇದೆ. ಕಾಯ್ದೆಯನ್ನು ಓದಿದ್ದೀರಾ’ ಎಂದು ಪ್ರಶ್ನಿಸಿದರು.
ಇಬ್ಬರ ಮಧ್ಯೆ ಕೆಲಕಾಲ ಮಾತಿನ ಸಮರ ನಡೆಯಿತು. ‘ಮನಸೋಇಚ್ಛೆ ವಿಶ್ವವಿದ್ಯಾಲಯಗಳನ್ನು ಆರಂಭಿಸಿ, ಖಾಸಗಿ ವಿಶ್ವವಿದ್ಯಾಲಯಗಳಿಗೆ ಅವಕಾಶ ನೀಡಿ ಉನ್ನತ ಶಿಕ್ಷಣ ಕ್ಷೇತ್ರವನ್ನು ಹಾಳು ಮಾಡಿದವರು ನೀವು’ ಎಂದು ಸುಧಾಕರ್ ತಿರುಗೇಟು ಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.