ವಿಧಾನಸೌಧ
ಬೆಂಗಳೂರು: ವಿಧಾನ ಮಂಡಲದ ಅಧಿವೇಶನ ಮಾರ್ಚ್ 3ರಿಂದ ಆರಂಭವಾಗಲಿದ್ದು, ಮಧ್ಯಾಹ್ನದ ಭೋಜನದ ನಂತರ ವಿಧಾನಸಭೆ ಕಲಾಪಕ್ಕೆ ಶಾಸಕರು ಗೈರಾಗುವುದನ್ನು ತಪ್ಪಿಸಲು ಮೊಗಸಾಲೆಯಲ್ಲಿಯೇ ‘ಸುಖಾಸೀನ ಕುರ್ಚಿ’ಗಳನ್ನು ಅಳವಡಿಸಲು ಸಭಾಧ್ಯಕ್ಷ ಯು.ಟಿ. ಖಾದರ್ ನಿರ್ಧರಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಖಾದರ್, ‘ಭೋಜನದ ಬಳಿಕ ಕೆಲ ಹೊತ್ತು ನಿದ್ದೆಗೆ ಜಾರುವ ಅಭ್ಯಾಸ ಹೊಂದಿರುವ ಶಾಸಕರು, ಆ ನೆಪದಲ್ಲಿ ಕಲಾಪಕ್ಕೆ ಗೈರಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಬಾಡಿಗೆಗೆ ಸುಖಾಸೀನ ಕುರ್ಚಿಗಳನ್ನು ಪಡೆದು ಅಳವಡಿಸುವ ಉದ್ದೇಶವಿದೆ’ ಎಂದರು.
‘ಮಧ್ಯಾಹ್ನ ಊಟ ಮುಗಿಸಿದ ಬಳಿಕ ನಿದ್ದೆ ಮಾಡಲು ಸಮಯಾವಕಾಶ ನೀಡುವಂತೆ ಕೆಲವು ಹಿರಿಯ ಶಾಸಕರು ಮನವಿ ಮಾಡಿದ್ದಾರೆ. ಆ ಕಾರಣಕ್ಕೆ ವಿಧಾನಸೌಧದಿಂದ ಹೊರಗೆ ಹೋಗುವ ಶಾಸಕರು ಮರಳಿ ಬರುವ ಸಾಧ್ಯತೆ ಇಲ್ಲ. ಸುಖಾಸೀನ ಕುರ್ಚಿ ಒದಗಿಸಿದರೆ ಶಾಸಕರಿಗೆ ಅನುಕೂಲ ಮಾಡಿಕೊಡಬಹುದು’ ಎಂದೂ ಹೇಳಿದರು.
‘ಮೊಗಸಾಲೆಯಲ್ಲಿ ಕನಿಷ್ಠ 15 ಸುಖಾಸೀನ ಕುರ್ಚಿಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಕಲಾಪದ ಸಮಯದಲ್ಲಿ ಮಾತ್ರ ಈ ಕುರ್ಚಿಗಳು ಉಪಯೋಗಕ್ಕೆ ಬರುತ್ತವೆ. ಹೀಗಾಗಿ ಅವುಗಳನ್ನು ಖರೀದಿಸಿ ಹಣ ವ್ಯರ್ಥ ಮಾಡುವ ಬದಲು ಬಾಡಿಗೆಗೆ ಪಡೆಯಲು ನಿರ್ಧರಿಸಿದ್ದೇನೆ’ ಎಂದರು.
‘ಅಧಿವೇಶನದ ಸಂದರ್ಭದಲ್ಲಿ ಶಾಸಕರು ಎದುರಿಸುತ್ತಿರುವ ಕೆಲವು ಸಮಸ್ಯೆಗಳನ್ನು ಪರಿಗಣಿಸಿ ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಊಟ, ಚಹಾ-ಕಾಫಿ ಮತ್ತು ತಿಂಡಿಗಳ ವ್ಯವಸ್ಥೆ ಮಾಡಲಾಗಿದೆ. 2024ರ ಜುಲೈನಲ್ಲಿ ನಡೆದ ವಿಧಾನಮಂಡಲದ ಅಧಿವೇಶನಗಳಲ್ಲಿಯೂ ಸುಖಾಸೀನ ಕುರ್ಚಿಗಳನ್ನು ಅಳವಡಿಸಲಾಗಿತ್ತು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.