ADVERTISEMENT

ಕದನಕ್ಕೆ ವೇದಿಕೆಯಾದ ಸದನ: ಆಡಳಿತ–ವಿರೋಧ ಪಕ್ಷದ ಸದಸ್ಯರ ಮಧ್ಯೆ ಜಿದ್ದಾಜಿದ್ದಿ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2019, 20:15 IST
Last Updated 11 ಅಕ್ಟೋಬರ್ 2019, 20:15 IST
   

ಬೆಂಗಳೂರು: ‘ನೆರೆ ಸಂತ್ರಸ್ತರು ಪಡುತ್ತಿರುವ ದಯನೀಯ ಪರಿಸ್ಥಿತಿ ವಿವರಿಸಲು ಹೆಚ್ಚಿನ ಸಮಯ ಬೇಕು’ ಎಂದು ಸಿದ್ದರಾಮಯ್ಯ ಹಟ ಹಿಡಿದರೆ, ‘ಐದು ನಿಮಿಷ ಹೆಚ್ಚಿನ ಸಮಯ ಕೊಡಲಾರೆ’ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪಟ್ಟು ಹಾಕಿದ್ದರಿಂದಾಗಿ ಅರ್ಧಗಂಟೆಗೂ ಹೆಚ್ಚು ಹೊತ್ತು ವಿಧಾನಸಭೆ ಮಾತಿನ ಕದನಕಣವಾಗಿ ಮಾರ್ಪಟ್ಟಿತ್ತು.

ಕಾಗೇರಿ ಅವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಆಡಳಿತ ಪಕ್ಷದ ಸದಸ್ಯರು ಬೆಂಬಲ ಕೊಟ್ಟರೆ, ವಿರೋಧ ಪಕ್ಷದ ನಾಯಕನ ಬೆನ್ನಿಗೆ ಕಾಂಗ್ರೆಸ್ ಸದಸ್ಯರು ನಿಂತರು. ಏರು ಮಾತಿನ ಚಕಮಕಿ, ಭಾವೋದ್ವೇಗಗಳಿಗೆ ಸದನ ಸಾಕ್ಷಿಯಾಯಿತು.

‘ನೀವು ನಾಲ್ಕೈದು ಗಂಟೆ ಮಾತನಾಡಿದ್ದೀರಿ. ಇನ್ನು ಸಮಯ ಕೊಡುವುದಿಲ್ಲ. 12.15ಕ್ಕೆ ನಿಲ್ಲಿಸಲೇಬೇಕು’ ಎಂದು ಕಾಗೇರಿ ತಾಕೀತು ಮಾಡಿದರು.

ADVERTISEMENT

‘ನೀವು ಹೇಳಿದ್ದನ್ನೆಲ್ಲ ಕೇಳುವುದಕ್ಕೆ ಆಗುವುದಿಲ್ಲ. ಇಷ್ಟೇ ಸಮಯ ಮಾತನಾಡಬೇಕು ಎಂದು ನಿಗದಿ ಮಾಡುವಂತಿಲ್ಲ. ನಾನು ಮಾತನಾಡಿಯೇ ತೀರುವೆ’ ಎಂದು ಸಿದ್ದರಾಮಯ್ಯ ಎದುರುತ್ತರ ನೀಡಿದರು.

ಇದರಿಂದ ಸಿಟ್ಟಿಗೆದ್ದ ಯಡಿಯೂರಪ್ಪ, ‘ನೀವು ಮುಖ್ಯಮಂತ್ರಿ ಆಗಿದ್ದವರು. ಸಭಾಧ್ಯಕ್ಷರು ಹೇಳಿದ್ದನ್ನು ಕೇಳುವುದಿಲ್ಲ ಎಂದು ಹೇಳಿದರೆ ಹೇಗೆ? ಒಪ್ಪಲೇಬೇಕು’ ಎಂದು ಅಬ್ಬರಿಸಿದರು.

‘ಇದೇನು ಸರ್ವಾಧಿಕಾರಿ ವ್ಯವಸ್ಥೆಯಾ? 70 ದಿನವಾದರೂ ಪರಿಹಾರ ಕೊಟ್ಟಿಲ್ಲ. ಅದನ್ನೆಲ್ಲಾ ಚರ್ಚೆ ಮಾಡುವುದು ಬೇಡವೇ? ಇವತ್ತೇ ಮುಗಿಸಬೇಕು ಎಂಬ ತುರ್ತು ಏನಿದೆ. ಮುಂದಿನ ವಾರವೂ ಕಲಾಪ ನಡೆಸಿ’ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

‘ಅತಿವೃಷ್ಟಿ ಕುರಿತ ಚರ್ಚೆ ಮುಗಿಸಿ. ಸಂಜೆಯೊಳಗೆ ಬಜೆಟ್‌ಗೆ ಅನುಮೋದನೆ ಪಡೆಯಬೇಕಿದೆ. ನೀವು ಮಾತು ಮುಗಿಸದೇ ಇದ್ದರೆ ನಿಮ್ಮ ಮಾತಿಗೆ ಕಡಿವಾಣ ಹಾಕಿ, ಕುಮಾರಸ್ವಾಮಿ ಅವರಿಗೆ ಮಾತನಾಡಲು ಸೂಚಿಸಬೇಕಾಗುತ್ತದೆ. ಐದು ನಿಮಿಷ ಕೂಡ ನಾನು ಅವಕಾಶ ಕೊಡುವುದಿಲ್ಲ’ ಎಂದು ಕಾಗೇರಿ ಏರಿದ ಧ್ವನಿಯಲ್ಲಿ ಹೇಳಿದರು.

ಮಧ್ಯ ಪ್ರವೇಶಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ‘ಮಾತನಾಡುವುದೇ ಸಾಧನೆಯಲ್ಲ. ಕೇಂದ್ರ ಸರ್ಕಾರ ಪರಿಹಾರ ಘೋಷಿಸಿದೆ. ನಿಮಗೆ ಭಾಷಣ ಮಾಡಿದ ದಾಖಲೆ ಬೇಕಾ? ಪರಿಹಾರ ಬೇಕಾ’ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

ಇದರಿಂದ ಆಕ್ರೋಶಗೊಂಡ ಸಿದ್ದರಾಮಯ್ಯ, ‘ಕೇಂದ್ರ ಸರ್ಕಾರ ನಮ್ಮ ದುಡ್ಡು ಕೊಡುತ್ತಿದೆ. ಏನು ಭಿಕ್ಷೆ ಕೊಟ್ಟಿದೆಯಾ ನಮಗೆ? ಚರ್ಚೆ ಮಾಡುವುದಕ್ಕೆ ಅವಕಾಶ ಇಲ್ಲ ಎಂದಾದರೆ ಅಧಿವೇಶನ ಕರೆಯುವುದು ಏಕೆ? ಅದನ್ನೇ ಬಿಟ್ಟುಬಿಡಿ. ನಿಮಗೆ ಬೇಕಾದಂತೆ ಮಾಡಿಕೊಳ್ಳಿ. ಪ್ರಜಾಪ್ರಭುತ್ವ ಕೊಲೆಯಾಗಲಿ ಬಿಡಿ’ ಎಂದು ಗರ್ಜಿಸಿದರು.

ಅದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್‌ನ ರಾಮಲಿಂಗಾರೆಡ್ಡಿ, ‘ಸಭಾಧ್ಯಕ್ಷರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ’ ಎಂದು ದೂರಿದರು.

ಮತ್ತೆ ಮಾತನಾಡಿದ ಸಿದ್ದರಾಮಯ್ಯ, ಸರ್ಕಾರದ ಅಭಿಪ್ರಾಯದಂತೆ ನಾವು ನಡೆಯುವುದಕ್ಕೆ ಆಗುವುದಿಲ್ಲ. ನೀವು ಹೇಳಿದಂತೆ ಕೇಳುವುದಿಲ್ಲ. ರೀ ಮಿಸ್ಟರ್ ಕಾಗೇರಿ. . . ನೀವು ಏನು ಬೇಕಾದರೂ ಮಾಡಿಕೊಳ್ಳಿ. ನಾನು ಮಾತು ಮುಂದುವರಿಸುವೆ’ ಎಂದರು.

ಇದರಿಂದಾಗಿ ಸದನದಲ್ಲಿ ಕೆಲಹೊತ್ತು ಕೋಲಾಹಲ ಸೃಷ್ಟಿಯಾಯಿತು.

ಮಧ್ಯಪ್ರವೇಶಿಸಿದ ಯಡಿಯೂರಪ್ಪ, ‘ಏನ್‌ ಮಾತನಾಡುತ್ತಿದ್ದೀರಿ. ಹಿರಿಯರಾದ ನಿಮಗೆ ಐದು ಗಂಟೆ ಅವಕಾಶ ಕೊಟ್ಟಿದ್ದೇವೆ. ಇನ್ನು ಕೊಡು
ವುದಕ್ಕೆ ಆಗುವುದಿಲ್ಲ. ಸಂಜೆಯವರೆಗೂ ಮಾತನಾಡುತ್ತೀರಾ? ನಿಲ್ಲಿಸಿ’ ಎಂದು ರೋಷಾವೇಶದಿಂದ ಹೇಳಿದರು.

ಎರಡೂ ಪಕ್ಷಗಳ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು. ನಮಗೆ ಇನ್ನೂ ಸಮಯ ಬೇಕು ಎಂದು ಕಾಂಗ್ರೆಸ್ ಸದಸ್ಯರು ಆಗ್ರಹಿಸಿದರು.

ಆಯ್ತು ಬಿಡಿ ಮಾತು ಮುಗಿಸುವೆ ಎಂದು ಹೇಳಿದ ಸಿದ್ದರಾಮಯ್ಯ ಮತ್ತೂ ಅರ್ಧಗಂಟೆ ಮಾತನಾಡಿ ಭಾಷಣ ಪೂರ್ಣಗೊಳಿಸಿದರು.

ಬುದ್ಧಿವಂತಿಕೆ ಪ್ರದರ್ಶನಕ್ಕೆ ಈ ಸ್ಥಾನ ಇಲ್ಲ: ಕಾಗೇರಿ ಕುಟುಕು
‘ಬುದ್ಧಿವಂತಿಕೆ ಪ್ರದರ್ಶನಕ್ಕೆ ಈ ಸ್ಥಾನ ಇಲ್ಲ. ನನ್ನ ಕರ್ತವ್ಯ ನಾನು ನಿಭಾಯಿಸುವೆ’ ಎಂದು ಹೇಳುವ ಮೂಲಕ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹಿಂದಿನ ಸಭಾಧ್ಯಕ್ಷ ಕೆ.ಆರ್. ರಮೇಶ್ ಕುಮಾರ್ ಅವರಿಗೆ ಕುಟುಕಿದರು.

‘ವಿರೋಧ ಪಕ್ಷದ ನಾಯಕರು ಮಾತನಾಡುವಾಗ ನಿರ್ಬಂಧ ವಿಧಿಸುವುದು ಸರಿಯಲ್ಲ. ಹಿಂದಿನ ಸಭಾಧ್ಯಕ್ಷರುಗಳ ನಡಾವಳಿಯನ್ನು
ನೋಡಿ’ ಎಂದು ರಮೇಶ್‌ ಕುಮಾರ್ ಸಲಹೆ ನೀಡಿದರು.

‘ಹಿಂದಿನ ಸಭಾಧ್ಯಕ್ಷರು ಏನೇನು ಮಾಡಿದ್ದಾರೆ. ಯಾರಿಗೆ ನಿರ್ಬಂಧ ವಿಧಿಸಿದ್ದಾರೆ ಎಂದೆಲ್ಲ ಗೊತ್ತಿದೆ. ನಾನು ಅನೇಕ ವರ್ಷಗಳಿಂದ ಸದನದಲ್ಲಿ ಇದ್ದೇನೆ. ನಿಯಮ 60 ರ ಅಡಿ ನಿರ್ಬಂಧಿಸಲು ಅವಕಾಶ ಇದೆ’ ಎಂದು ಕಾಗೇರಿ ಸಮರ್ಥಿಸಿಕೊಂಡರು.

‘ನನ್ನ ಅವಧಿಯಲ್ಲಿ ಎಲ್ಲರಿಗೂ ಸಮಾನ ಅವಕಾಶ ಕೊಟ್ಟಿದ್ದೆ. ನಿಯಮವನ್ನು ಹೇಳಿದೆ ಅಷ್ಟೆ’ ಎಂದು ರಮೇಶ್ ಕುಮಾರ್ ಹೇಳಿದರು.

‘ಹಿಂದಿನವರು ಎಂದು ಹೇಳಿದರೆ ನೀವು ಏಕೆ ಹೆಗಲ ಮುಟ್ಟಿ ನೋಡಿ
ಕೊಳ್ಳುತ್ತಿದ್ದೀರಿ’ ಎಂದು ಕಾಗೇರಿ ಮತ್ತೆ ಹಂಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.