ADVERTISEMENT

ರೈತರನ್ನು ಸಂಕಷ್ಟಕ್ಕೆ ದೂಡಿದ ಸರ್ಕಾರ: ಡಾ.ಎಚ್.ಡಿ.ರಂಗನಾಥ್‌ ಟೀಕೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2022, 20:26 IST
Last Updated 21 ಮಾರ್ಚ್ 2022, 20:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ರೈತರ ಆದಾಯವನ್ನು ದ್ವಿಗುಣಗೊಳಿಸುವ ಭರವಸೆ ನೀಡಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದರೆ, ಬೆಂಬಲ ಬೆಲೆಯಡಿ ರಾಗಿ ಖರೀದಿಯನ್ನು ಸ್ಥಗಿತಗೊಳಿಸುವ ಮೂಲಕ ಸರ್ಕಾರ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ’ ಎಂದು ಕಾಂಗ್ರೆಸ್‌ ಸದಸ್ಯ ಡಾ.ಎಚ್.ಡಿ.ರಂಗನಾಥ್‌ ಟೀಕಿಸಿದರು.

ವಿಧಾನಸಭೆಯಲ್ಲಿ ಅನುದಾನ ಬೇಡಿಕೆ ಮೇಲಿನ ಚರ್ಚೆಯಲ್ಲಿ ಸೋಮವಾರ ಮಾತನಾಡಿದ ಅವರು, ‘ಈ ರಾಜ್ಯದಲ್ಲಿ 19 ಲಕ್ಷ ಟನ್‌ ರಾಗಿ ಬೆಳೆಯಲಾಗುತ್ತಿದೆ. ಸರ್ಕಾರ ಬೆಂಬಲ ಬೆಲೆ ನೀಡಿ ರಾಗಿ ಖರೀದಿಸಲಿದೆ ಎಂದು ರೈತರು ಭರವಸೆ ಇಟ್ಟುಕೊಂಡಿದ್ದಾರೆ. ರಾಗಿ ಖರೀದಿಗೆ ಸರ್ಕಾರ ಇನ್ನಾದರೂ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

‘ದೇಶದ ಮಾನವ ಅಭಿವೃದ್ಧಿ ಸೂಚ್ಯಂಕದ ಪ್ರಕಾರ ರೈತ ಕುಟುಂಬದ ತಲಾ ವರಮಾನ ವರ್ಷಕ್ಕೆ ₹ 96 ಸಾವಿರ ಮಾತ್ರ. ಅಂದರೆ ಇಡೀ ಕುಟುಂಬಕ್ಕೆ ತಿಂಗಳಿಗೆ ₹ 8 ಸಾವಿರವೂ ಸಿಗುತ್ತಿಲ್ಲ. ಕೃಷಿಕರ ₹ 100 ದುಡಿಮೆಯಲ್ಲಿ ಕೃಷಿ ಕೂಲಿ ವಚ್ಚ ಶೇ 20 ದಾಟಬಾರದು. ಆದರೆ, ಪ್ರಸ್ತುತ ಕೃಷಿಕರು ಕೂಲಿ ನೀಡುವುದಕ್ಕಾಗಿ ಶೇ 43 ರಷ್ಟು ಮೊತ್ತವನ್ನು ವಿನಿಯೋಗಿಸುವ ಪರಿಸ್ಥಿತಿ ಇದೆ. ದೇಶದಲ್ಲಿ ರೈತರ ಸಾಲ ₹ 18 ಲಕ್ಷ ಕೋಟಿಗೆ ಹೆಚ್ಚಾಗಿದೆ. ಇದು ಶ್ರೇಯಸ್ಕರವಲ್ಲ’ ಎಂದರು.

ADVERTISEMENT

‘ಆಹಾರ ಕಲಬೆರಕೆ ತಡೆಗೆ ಮೂರು ಲ್ಯಾಬ್ ಶೀಘ್ರ’
ಆಹಾರ ಪದಾರ್ಥಗಳ ಕಲಬೆರಕೆ ತಡೆಯುವ ನಿಟ್ಟಿನಲ್ಲಿ ಇನ್ನು ಮೂರು ತಿಂಗಳಲ್ಲಿ ಬೆಂಗಳೂರು, ಮೈಸೂರು ಮತ್ತು ಬೆಳಗಾವಿಯಲ್ಲಿ ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದ (ಎನ್ಎಬಿಎಲ್‌) ಮಾನ್ಯತೆ ಪಡೆದ ಪ್ರಯೋಗಾಲಯಗಳು (ಲ್ಯಾಬ್‌) ಆರಂಭವಾಗಲಿವೆ ಎಂದು ಆರೋಗ್ಯ ಸಚಿವಡಾ. ಕೆ. ಸುಧಾಕರ್‌ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಸೋಮವಾರ ಕಾಂಗ್ರೆಸ್‌ನ ಡಾ.ಡಿ. ತಿಮ್ಮಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಎನ್‌ಎಬಿಎಲ್‌ ಮಾನ್ಯತೆ ಇಲ್ಲದ ಕಾರಣ ಈ ನಾಲ್ಕು ವಿಭಾಗೀಯ ಆಹಾರ ಪ್ರಯೋಗಾಲಯಗಳನ್ನು 2020ರ ಡಿಸೆಂಬರ್‌ನಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ರದ್ದು ಪಡಿಸಿತ್ತು. ಕಲಬುರಗಿಯ ಪ್ರಯೋಗಾಲಯ ಆರಂಭವಾಗಲು ಸಾಕಷ್ಟು ಸಮಯ ಬೇಕಾಗುತ್ತದೆ’ ಎಂದು ವಿವರಿಸಿದರು.

ಹುಣ್ಣಿಮೆಯಂದು ಕೈವಾರ ತಾತಯ್ಯ ಜಯಂತಿ
ಬೆಂಗಳೂರು: ‘ಕೈವಾರದ ಯೋಗಿ ನಾರೇಯಣ ತಾತಯ್ಯ ಅವರ ಜಯಂತ್ಯುತ್ಸವವನ್ನು ಮುಂದಿನ ವರ್ಷದಿಂದ ಫಲ್ಗುಣ ಮಾಸದ ಹುಣ್ಣಿಮೆಯಂದೇ ಆಚರಿಸಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್‌ ಕುಮಾರ್‌ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ ಅವರು ಈ ಬಗ್ಗೆ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಬಜೆಟ್‌ನಲ್ಲಿ ಮುಖ್ಯಮಂತ್ರಿ ಅವರು ಕೈವಾರ ತಾತಯ್ಯ ಜಯಂತಿಯನ್ನು ಮಾರ್ಚ್‌ 27ರಂದು ಆಚರಿಸುವು ದಾಗಿ ಪ್ರಕಟಿಸಿದರು. ಆದರೆ, ಸಮುದಾಯದ ಮುಖಂಡರು ಈ ದಿನಾಂಕವನ್ನು ಮಾರ್ಚ್‌ 18ಕ್ಕೆ ಬದಲಾಯಿಸಬೇಕು ಎಂದು ಕೋರಿದ್ದಾರೆ. ಈಗಾಗಲೇ ತಡವಾಗಿರುವುದರಿಂದ ಈ ವರ್ಷ ಮಾತ್ರ ಮಾರ್ಚ್‌ 27ರಂದು ಜಯಂತಿ ಆಚರಿಸಲಾಗುವುದು. ಮುಂದಿನ ವರ್ಷದಿಂದ ಹುಣ್ಣಿಮೆಯಂದೇ ಆಚರಿಸಲಾಗುವುದು’ ಎಂದು ತಿಳಿಸಿದರು.

‘ನಾಲ್ಕು ತಿಂಗಳಲ್ಲಿ 400 ಪಶುವೈದ್ಯಾಧಿಕಾರಿಗಳ ನೇಮಕ’
ಬೆಂಗಳೂರು:
‘ರಾಜ್ಯದಲ್ಲಿ 400 ಪಶು ವೈದ್ಯಾಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಕ್ರಮಕೈಗೊಳ್ಳಲಾಗಿದೆ. ನೇಮಕಾತಿ ಪ್ರಕ್ರಿಯೆಯು ನಾಲ್ಕು ತಿಂಗಳ ಒಳಗೆ ಪೂರ್ಣಗೊಳ್ಳಲಿದೆ’ ಎಂದು ಪಶುಸಂಗೋಪನಾ ಸಚಿವ ಪ್ರಭು ಬಿ.ಚವ್ಹಾಣ್‌ ತಿಳಿಸಿದರು.

ವಿಧಾನಸಭೆಯಲ್ಲಿ ಸೋಮವಾರ ಬಿಜೆಪಿಯ ಲಾಲಾಜಿ ಆರ್‌.ಮೆಂಡನ್‌ ಅವರ ಪ್ರಶ್ನೆಗೆ ಅವರು ಉತ್ತರಿಸಿದರು.

ಕಾಂಗ್ರೆಸ್‌ನ ಪ್ರಿಯಾಂಕ್ ಖರ್ಗೆ, ‘ಈ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ವೃಂದಕ್ಕೆ ಅಗತ್ಯ ಸಂಖ್ಯೆಯಷ್ಟು ಹುದ್ದೆ ಮೀಸಲಿಟ್ಟಿಲ್ಲ. ಈ ಪ್ರಕರಣದ ವಿಚಾರಣೆ ಹೈಕೋರ್ಟ್‌ನ ಕಲಬುರಗಿ ಪೀಠದಲ್ಲಿ ನಡೆಯುತ್ತಿದೆ’ ಎಂದು ಗಮನ ಸೆಳೆದರು.

ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ನೇಮಕಾತಿ ತಡ ಆಗಬಾರದು. ನೇಮಕಾತಿ ಪಟ್ಟಿ ಸಿದ್ಧವಾದ ಬಳಿಕವೂ ನೀವು ಅವರಿಗೆ ಆದೇಶ ನೀಡುವುದು ಯಾವಾಗ. ಈ ಪ್ರಕ್ರಿಯೆ ಯಾವಾಗ ಪೂರ್ಣಗೊಳ್ಳುತ್ತದೆ ಎಂದು ಸ್ಪಷ್ಟಪಡಿಸಬೇಕು. ’ ಎಂದು ಪ್ರಶ್ನಿಸಿದರು.

‘ನಾಲ್ಕು ವರ್ಷಗಳಿಂದ ಪಶುವೈದ್ಯಾಧಿಕಾರಿಗಳನೇಮಕ ಆಗಿರಲಿಲ್ಲ. ಈಗ ಈ ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ. ಎಲ್ಲ ಪ್ರಕ್ರಿಯೆಯನ್ನೂ ಕಾನೂನಿನ ಚೌಕಟ್ಟಿನಲ್ಲಿ ಪೂರ್ಣಗೊಳಿಸಿ ಮೂರು– ನಾಲ್ಕು ತಿಂಗಳ ಒಳಗೆ ನೇಮಕಾತಿ ಆದೇಶವನ್ನೂ ನೀಡಲಿದ್ದೇವೆ’ ಎಂದು ಸಚಿವರು ಭರವಸೆ ನೀಡಿದರು.

‘6 ತಿಂಗಳಲ್ಲಿ ನೀಗಲಿದೆ ಭೂಮಾಪಕರ ಕೊರತೆ’
ಬೆಂಗಳೂರು:‘ಅವಶ್ಯಕತೆಗೆ ಅನುಗುಣವಾಗಿ 3 ಸಾವಿರ ‘ಪರವಾನಗಿ ಭೂಮಾಪಕರ’ನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಭೂಮಾಪಕರ ಕೊರತೆಯು ಇನ್ನು ಆರು ತಿಂಗಳುಗಳ ಒಳಗೆ ನೀಗಲಿದೆ’ ಎಂದು ಕಂದಾಯ ಸಚಿವ ಆರ್‌.ಅಶೋಕ ವಿಧಾನಸಭೆಯಲ್ಲಿ ತಿಳಿಸಿದರು.

ಕಾಂಗ್ರೆಸ್‌ನ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಪ್ರಶ್ನೆಗೆ ಸೋಮವಾರ ಉತ್ತರಿಸಿದ ಸಚಿವರು, ‘ಭೂಮಾಪನ ನಡೆಸುವಂತೆ ಕೋರಿ ಸಲ್ಲಿಕೆಯಾಗಿ ರುವ ಅರ್ಜಿಗಳ ವಿಲೇವಾರಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಬಾಕಿ ಇರುವ ತಾಲ್ಲೂಕು ಗಳಿಗೆ ಬೇರೆ ತಾಲ್ಲೂಕುಗಳಿಂದ ಭೂಮಾಪಕರನ್ನು ನಿಯೋಜಿಸಲಿದ್ದೇವೆ ಎಂದು ತಿಳಿಸಿದರು.

ಬಿಜೆಪಿ ಸದಸ್ಯ ಕುಮಾರ್‌ ಬಂಗಾರಪ್ಪ, ‘ಇನಾಂ ರದ್ದತಿ ಅರ್ಜಿಗಳು ಹೆಚ್ಚಿನ ಪ್ರಮಾಣದಲ್ಲಿ ಬಾಕಿ ಇರುವ ಕಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭೂಮಾಪಕರನ್ನು ಒದಗಿಸಬೇಕು’ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.