ADVERTISEMENT

ಕಾರಾಗೃಹಗಳಲ್ಲಿ ಜಾಮರ್‌ಗಳು ನಿಷ್ಕ್ರಿಯ

ಸಾರ್ವಜನಿಕ ಲೆಕ್ಕಪತ್ರ ಸಮಿತಿ ತೀವ್ರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2020, 20:46 IST
Last Updated 10 ಮಾರ್ಚ್ 2020, 20:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದ ವಿವಿಧ ಕಾರಾಗೃಹದಲ್ಲಿ ಅಳವಡಿಸಿದ್ದ 34 ಮೊಬೈಲ್‌ ಜಾಮರ್‌ಗಳು ಕಾರ್ಯನಿರ್ವಹಿಸುತ್ತಿಲ್ಲ ಹಾಗೂ ಸಿಸಿಟಿವಿ ಕ್ಯಾಮೆರಾಗಳು ಕೆಟ್ಟಿವೆ ಎಂದು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಭಾರತ ಲೆಕ್ಕನಿಯಂತ್ರಕರು ಹಾಗೂ ಮಹಾಲೆಕ್ಕಪರಿಶೋಧಕರ 2014–15ನೇ ಸಾಲಿನ ವರದಿಯಲ್ಲಿನ ಕಾರಾಗೃಹ ಇಲಾಖೆಯಲ್ಲಿನ ಆಂತರಿಕ ನಿಯಂತ್ರಣ ವ್ಯವಸ್ಥೆಯ ಅನುಪಾಲನಾ ವರದಿಯನ್ನು ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಲಾಯಿತು.

ಬೆಂಗಳೂರಿನಲ್ಲಿ 19, ಮೈಸೂರಿನಲ್ಲಿ 4 ಹಾಗೂ ಕಲಬುರ್ಗಿಯಲ್ಲಿ 10 ಜಾಮರ್‌ಗಳು ಕೆಲಸ ನಿರ್ವಹಿಸುತ್ತಿಲ್ಲ. ಈ ಉಪಕರಣಗಳನ್ನು ತುರ್ತಾಗಿ ದುರಸ್ತಿಪಡಿಸಬೇಕು ಎಂದು ಸಮಿತಿ ಸೂಚಿಸಿದೆ.

ADVERTISEMENT

‘ಆರು ಜಿಲ್ಲಾ ಕೇಂದ್ರ ಕಾರಾಗೃಹಗಳಲ್ಲಿ ಹಾಗೂ ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ₹28.28 ಕೋಟಿ ವೆಚ್ಚದಲ್ಲಿ 66 ಮೊಬೈಲ್‌ ಜಾಮರ್‌ಗಳನ್ನು ಅಳವಡಿಸಲಾಗಿತ್ತು. ಇವುಗಳ ಕಾರ್ಯನಿರ್ವಹಣೆ ಸಮರ್ಪಕವಾಗಿಲ್ಲ. ಕೈದಿಗಳು ಅಕ್ರಮವಾಗಿ ಮೊಬೈಲ್‌ ಉಪಯೋಗಿಸುವ ಸಮಸ್ಯೆಗೆ ಜಾಮರ್‌ಗಳ ಅಳವಡಿಕೆ ಪರಿಹಾರ ಅಲ್ಲ. ಹೀಗಾಗಿ, ಈ ವೆಚ್ಚ ನಿಷ್ಫಲ’ ಎಂದು ಸಮಿತಿ ತಿಳಿಸಿದೆ.

ಕಾರಾಗೃಹಗಳಲ್ಲಿ ಮೊಬೈಲ್‌ಗಳು, ಸಿಮ್‌ ಕಾರ್ಡ್‌ಗಳು ಹಾಗೂ ಮಾದಕ ವಸ್ತುಗಳು ಅಪಾರ ಪ್ರಮಾಣದಲ್ಲಿ ಪತ್ತೆಯಾಗಿರುವುದಕ್ಕೆ ಸಮಿತಿ ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದು, ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳು/ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಶಿಫಾರಸು ಮಾಡಿದೆ.

ಕಾರಾಗೃಹಗಳಲ್ಲಿ ಮಾದಕ ವಸ್ತುಗಳನ್ನು ಹಾಗೂ ಮಾದಕ ವ್ಯಸನಿಗಳನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಬೇಕು ಎಂದು 2010ರಲ್ಲೇ ಸೂಚಿಸಲಾಗಿತ್ತು. ಆದರೆ, ಸೂಚನೆಯನ್ನು ಇಲಾಖೆಯ ಅಧಿಕಾರಿಗಳು ಪಾಲಿಸಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಸೂಚಿಸಿದೆ.

ಇತರ ಶಿಫಾರಸುಗಳು

*ವಿಚಾರಣಾಧೀನ ಕೈದಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ವಿಪರೀತ ವಿಳಂಬ ಉಂಟಾಗುತ್ತಿದೆ. ಅದಕ್ಕಾಗಿ ಪ್ರತ್ಯೇಕ ಬೆಂಗಾವಲು ಪಡೆ ಇಲ್ಲ. ಈ ಉದ್ದೇಶಕ್ಕೆ ಅಗತ್ಯ ಸಿಬ್ಬಂದಿ ನೇಮಕ ಮಾಡಬೇಕು.

*ಕಾರಾಗೃಹಗಳಲ್ಲಿ ಕೈದಿಗಳು ಪರಾರಿಯಾಗಲು ಅಲ್ಲಿನ ಸಿಬ್ಬಂದಿಯ ನೆರವು ಕಾರಣ. ಕರ್ತವ್ಯಲೋಪ ಎಸಗಿದ ಸಿಬ್ಬಂದಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.