
ಬೆಂಗಳೂರು: ವಿಧಾನಸಭೆಯ ಕಲಾಪ ಮಂಗಳವಾರ ಬೆಳಿಗ್ಗೆ ಆರಂಭವಾದ ವೇಳೆಯಲ್ಲಿ ಆಡಳಿತ ಪಕ್ಷದ ಕಡೆ ಮೊದಲ ಸಾಲು ಖಾಲಿ ಇರುವುದನ್ನು ಗಮನಿಸಿದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸಭಾಧ್ಯಕ್ಷ ಯು.ಟಿ. ಖಾದರ್ ಪ್ರಶ್ನೋತ್ತರ ಆರಂಭಿಸಲು ಮುಂದಾಗುತ್ತಿದ್ದಂತೆ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕಾದ ಸಚಿವರ ಪಟ್ಟಿ ಓದುವಂತೆ ಪಟ್ಟು ಹಿಡಿದರು.
ಸಭಾಧ್ಯಕ್ಷರು ಒಬ್ಬೊಬ್ಬರೇ ಸಚಿವರ ಹೆಸರು ಹೇಳುತ್ತಿದ್ದಂತೆ, ವಿರೋಧ ಪಕ್ಷದ ಸದಸ್ಯರು ಒಕ್ಕೊರಲಿನಿಂದ ‘ಸಚಿವರು ಇಲ್ಲ... ಇಲ್ಲ...’ ಎಂದು ಜೋರಾಗಿ ಕೂಗಿದರು. ಈ ವೇಳೆ ಮುಜುಗರಕ್ಕೀಡಾದ ಆಡಳಿತ ಪಕ್ಷದ ಸಾಲಿನಲ್ಲಿದ್ದ ಸಚಿವ ಜಿ. ಪರಮೇಶ್ವರ ನಸು ನಕ್ಕರು.
ಸಚಿವರು ಸದನಕ್ಕೆ ಬಾರದಿರುವುದಕ್ಕೆ ಬಿಜೆಪಿಯ ವಿ. ಸುನಿಲ್ ಕುಮಾರ್, ರಾಜ್ಯ ಸರ್ಕಾರವನ್ನು ‘ಇಲ್ಲಗಳ ಸರ್ಕಾರ’ ಎಂದು ಟೀಕಿಸಿದರು.
‘ಈ ಸರ್ಕಾರದಲ್ಲಿ ಯಾವುದೂ ಸರಿ ಇಲ್ಲ. ಅಭಿವೃದ್ಧಿಯೂ ಇಲ್ಲ, ಜನರ ಕೆಲಸಕ್ಕೆ ಹಣವೂ ಇಲ್ಲ, ಹೊಸ ಯೋಜನೆಗಳೂ ಇಲ್ಲ. ಕೊನೆಗೆ ಸದನದಲ್ಲಿ ಉತ್ತರಿಸಲು ಸಚಿವರೂ ಇಲ್ಲ. ಇದೊಂದು ಸಂಪೂರ್ಣ ನಿಷ್ಕ್ರಿಯ ಸರ್ಕಾರ’ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.