ADVERTISEMENT

ವರದಿ ಅಂಗೀಕರಿಸಿ, ಶಿಫಾರಸು ಜಾರಿಯಾಗಲೇಬೇಕು: ಕಾಂಗ್ರೆಸ್ OBC ನಾಯಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 14:27 IST
Last Updated 16 ಏಪ್ರಿಲ್ 2025, 14:27 IST
   

ಬೆಂಗಳೂರು: ‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಸರ್ಕಾರ ಅಂಗೀಕರಿಸಿ, ಶಿಫಾರಸುಗಳನ್ನು ಜಾರಿ ಮಾಡಲೇಬೇಕು’ ಎಂದು ಕಾಂಗ್ರೆಸ್‌ನ ಹಿಂದುಳಿದ ವರ್ಗದ ನಾಯಕರು ಒಕ್ಕೊರಲಿನಿಂದ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ‘ಗ್ಯಾರಂಟಿ’ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ, ವಿಧಾನ ಪರಿಷತ್‌ ಸದಸ್ಯರಾದ ಎಂ.ಆರ್. ಸೀತಾರಾಂ, ಉಮಾಶ್ರೀ, ಎಂ. ನಾಗರಾಜ ಯಾದವ್ ಮತ್ತಿತರರು ‘ವರದಿ ವೈಜ್ಞಾನಿಕವಾಗಿದೆ’ ಎಂದು ಸಮರ್ಥಿಸಿದರು.

ಎಚ್.ಎಂ. ರೇವಣ್ಣ ಮಾತನಾಡಿ, ‘ಇದು ಸರ್ವ ಜನಾಂಗವನ್ನು ಒಳಗೊಂಡಂತೆ ರಾಜ್ಯದಲ್ಲಿ ಮನೆ ಮನೆಗೆ ಭೇಟಿ ನೀಡಿ ಹಿಂದುಳಿದ ವರ್ಗಗಳಿಗೆ ಸಂಬಂಧಪಟ್ಟಂತೆ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ, ರಾಜಕೀಯ ಹಾಗೂ ಇತರ ಕ್ಷೇತ್ರಗಳಿಗೆ ಅನ್ವಯಿಸಿ ನಡೆಸಿದ ಸಮೀಕ್ಷೆ. ಈ ಕ್ಷೇತ್ರಗಳಿಗೆ ಮಾಹಿತಿ ಪಡೆಯುವ ಪ್ರಯತ್ನದಲ್ಲಿ ಜಾತಿಯೂ ಒಂದು ಅಂಶ. ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಎಲ್ಲ ವರ್ಗದವರಿಗೆ ಎಲ್ಲ ಕಾಲದಲ್ಲಿಯೂ ನೀಡುವುದು ಕಾಂಗ್ರೆಸ್ ಸರ್ಕಾರದ ಅತಿ ದೊಡ್ಡ ಆಕಾಂಕ್ಷೆಯಾಗಿದೆ’ ಎಂದರು.

ADVERTISEMENT

‘ವರದಿಯು ಒಂದು ಜನಾಂಗಕ್ಕೆ ಸೀಮಿತವಲ್ಲ. ಎಲ್ಲರ ಅಭ್ಯುದಯಕ್ಕೆ ಮಾಡಿರುವಂಥದ್ದು. ಶೇ 98ರಷ್ಟು ಜನರು ಸಮೀಕ್ಷೆಯಲ್ಲಿ ಮಾಹಿತಿ ನೀಡಿದ್ದಾರೆ. ವರದಿಯನ್ನು ಸಂಪೂರ್ಣವಾಗಿ ನೋಡಿ, ಪರಿಶೀಲಿಸದೆ ಅವೈಜ್ಞಾನಿಕ ಎನ್ನುವುದು ಸರಿಯಲ್ಲ. ಅಲ್ಲದೆ, ಸಣ್ಣಪುಟ್ಟ ತಪ್ಪುಗಳಿದ್ದರೆ ಸರಿಪಡಿಸಲು ಅವಕಾಶವಿದೆ’ ಎಂದರು. 

ಎಂ.ಆರ್. ಸೀತಾರಾಂ ಮಾತನಾಡಿ, ‘ಗುರುವಾರ (ಏಪ್ರಿಲ್‌ 17) ನಡೆಯಲಿರುವ ಸಚಿವ ಸಂಪುಟ ಸಭೆಯ ಮುಂದೆ ಈ ವರದಿ ಚರ್ಚೆಗೆ ಬರಲಿದೆ. ವರದಿಯನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಎಲ್ಲ ಸಚಿವರು ಚರ್ಚೆ ಮಾಡಲಿ’ ಎಂದರು.

ಉಮಾಶ್ರೀ ಮಾತನಾಡಿ, ‘ಯೋಜನೆಗಳನ್ನು ರೂಪಿಸಲು ಈ ವರದಿ ಭದ್ರ ಬುನಾದಿ ಆಗಲಿದೆ. ಆ ಮೂಲಕ, ಜನರಿಗೆ ಗುಣಾತ್ಮಕ ಬದುಕು ನೀಡಲು ಸಾಧ್ಯ. ಈ ಬಗ್ಗೆ ಭಾವನಾತ್ಮಕವಾಗಿ ಯಾರೂ ಮಾತನಾಡಿ ಜನರನ್ನು ದಾರಿ ತಪ್ಪಿಸುವುದು ಬೇಡ. ಸಚಿವ ಸಂಪುಟ ಸಭೆ ಈ ವರದಿಯನ್ನು ಒಪ್ಪಲೇಬೇಕು’ ಎಂದರು.

‘ತಪ್ಪಿದ್ದರೆ ಸರಿಪಡಿಸಿಕೊಳ್ಳಬಹುದು. ಬಿಟ್ಟು ಹೋದ ಜಾತಿಗಳನ್ನು ಸೇರಿಸಬೇಕು. ಬಹಳಷ್ಟು ಜನ ಇನ್ನೂ ಬಡವರಾಗಿಯೇ ಇದ್ದಾರೆ. ಅಂಥವರ ಕಡೆಗೆ ಗಮನಹರಿಸಲು ಈ ವರದಿ ಸಹಾಯಕವಾಗಲಿದೆ. ವರದಿಯಲ್ಲಿರುವ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಬೇಕು’ ಎಂದು ಆಗ್ರಹಿಸಿದರು. ‘ವರದಿಯನ್ನು ನಾವೆಲ್ಲರೂ ಒಪ್ಪುತ್ತೇವೆ. ಸಚಿವ ಸಂಪುಟ ಸಭೆಯೂ ಒಪ್ಪಬೇಕು’ ಎಂದು ನಾಗರಾಜ ಯಾದವ್ ಹೇಳಿದರು.

ಅಖಿಲ ಕರ್ನಾಟಕ ಗಾಣಿಗ ಸಂಘದ ಅಧ್ಯಕ್ಷ ರಾಜಶೇಖರ್, ಮಾಜಿ ಮೇಯರ್‌ಗಳಾದ ಪಿ.ಆರ್. ರಮೇಶ್, ಡಿ. ವೆಂಕಟೇಶ್ ಮೂರ್ತಿ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.