ADVERTISEMENT

ಕರ್ನಾಟಕ ಬಂದ್: ಪ್ರವೀಣ್ ಶೆಟ್ಟಿಗೆ ಗೃಹಬಂಧನ, 180 ರೌಡಿಗಳು ಪೊಲೀಸರ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 7:21 IST
Last Updated 13 ಫೆಬ್ರುವರಿ 2020, 7:21 IST
ನಗರದ ಕೆಂಪೇಗೌಡ ಬಸ್ ನಿಲ್ದಾಣದಿಂದ ಬಸ್ಸುಗಳ ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲದೆ ಸಂಚಾರ ನಡೆಸಿದವು
ನಗರದ ಕೆಂಪೇಗೌಡ ಬಸ್ ನಿಲ್ದಾಣದಿಂದ ಬಸ್ಸುಗಳ ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲದೆ ಸಂಚಾರ ನಡೆಸಿದವು   

ಬೆಂಗಳೂರು: ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಗುರುವಾರ ಕರೆ ನೀಡಿರುವ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ಮೆಜೆಸ್ಟಿಕ್, ಕೆ. ಆರ್. ಮಾರುಕಟ್ಟೆ, ಸಂಗೊಳ್ಳಿ ರಾಯಣ್ಞ ರೈಲುನಿಲ್ದಾಣ ಮುಂತಾದ ಕಡೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ‌.

ಬಿಎಂಟಿಸಿ ಬಸ್‌ಗಳು ಎಂದಿನಂತೆ ಓಡಾಡುತ್ತಿವೆ. ಆದರೆ, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬಸ್ ಸಂಚಾರ ತಡೆಯಲು ಯತ್ನಿಸಿದರು. ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ.ಆನಂದ ರಾವ್ ವೃತ್ತದಲ್ಲಿ ಹೋಟೆಲ್‌ಗಳನ್ನು ಬಲವಂತವಾಗಿ ಬಂದ್ ಮಾಡಲು ಯತ್ನಿಸಿದರು. ಈ ವೇಳೆ ಪ್ರತಿಭಟನಾಕಾರರುಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ‌ ನಡೆಯಿತು.ವಿಷಯ ತಿಳಿದ ಕೂಡಲೆ ಹೆಚ್ಚಿನ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ.

ADVERTISEMENT

180 ಮಂದಿ ರೌಡಿಗಳು ವಶಕ್ಕೆ

ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರೌಡಿಶೀಟರ್‌‌ಗಳು ಸೇರಿ 180 ಮಂದಿಯನ್ನು ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಿಂದ ಉತ್ತರ ವಿಭಾಗದ ಪೊಲೀಸರು ಗುರುವಾರ ನಸುಕಿನಲ್ಲಿ ವಶಕ್ಕೆ ಪಡೆದಿದ್ದಾರೆ.

ನಸುಕಿನಲ್ಲಿ 4 ಗಂಟೆಯಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಬುಧವಾರ ರಾತ್ರಿ ಪೊಲೀಸ್ ಅಧಿಕಾರಿಗಳು ವಿಶೇಷ ಗಸ್ತು ನಡೆಸಿದ್ದಾರೆ. ಈ ವೇಳೆ, ಹಿಂದೆ ಕಾವೇರಿ ಹೋರಾಟ ಸೇರಿದಂತೆ ಹಲವು ಪ್ರತಿಭಟನೆಗಳಲ್ಲಿ ಭಾಗಿಯಾದವರು ಸೇರಿ ರೌಡಿಶೀಟರ್ ಗಳನ್ನು ವಶಕ್ಕೆ ಪಡೆಯಲಾಗಿದೆ.ವಶಕ್ಕೆ ಪಡೆದವರ ಪೈಕಿ ಕೆಲವರು ಶಂಕಾಸ್ಪದವಾಗಿ ತಿರುಗಾಡುತ್ತಿದ್ದರು ಎಂದು ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ತಿಳಿಸಿದರು.

ಪ್ರವೀಣ್ ಶೆಟ್ಟಿಗೆ ಗೃಹಬಂಧನ

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಪ್ರವೀಣ್ ಶೆಟ್ಟಿ (ಪ್ರವೀಣ್ ಶೆಟ್ಟಿ ಬಣ) ಅವರಿಗೆ ಪೊಲೀಸರು ಗೃಹ ಬಂಧನ ವಿಧಿಸಿದ್ದಾರೆ.ಕನ್ನಡಪರ ಸಂಘಟನೆಗಳಿಂದ ಪ್ರತಿಭಟನಾ ಕಾವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪ್ರವೀಣ್ ಶೆಟ್ಟಿ ಅವರ ಆರ್ ಟಿ ನಗರದ ನಿವಾಸದ ಮುಂದೆ ಪೋಲಿಸರನ್ನು ನಿಯೋಜಿಸಲಾಗಿದೆ.

ಬಂದ್‌ಗೆ ಪ್ರವೀಣ್ ಶೆಟ್ಟಿ ಬೆಂಬಲ‌ ನೀಡಿಲ್ಲ. ಹೀಗಿದ್ದರೂ ಒತ್ತಾಯ ಪೂರ್ವಕವಾಗಿ ಗೃಹ ಬಂಧನದಲ್ಲಿಡಲಾಗಿದೆ. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಮನೆಯಿಂದ ಹೊರ ಹೋಗದಂತೆ ಶೆಟ್ಟಿಗೆ ಸೂಚಿಸಲಾಗಿದೆ ಎನ್ನಲಾಗಿದೆ.

ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕರ್ನಾಟಕ ಶ್ರಮಜೀವಿ ಕಾರ್ಮಿಕ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಸಂಪತ್‌ ಕುಮಾರ್ ಮತ್ತು ಸುವರ್ಣ ಕರ್ನಾಟಕ ರಕ್ಷಣಾ ಸೇನೆಯ ರಾಜ್ಯ ಘಟಕದ ಅಧ್ಯಕ್ಷ.ಮಹಾದೇವಪುರದ ರಾಘವೇಂದ್ರ ಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪ್ರತಿಭಟನೆಗೆಹೆಚ್ಚಿನ ಸಂಖ್ಯೆಯಲ್ಲಿ ಬೈಕ್‌‌‍ಗಳಲ್ಲಿ ಕಾರ್ಯಕರ್ತರನ್ನು ಕರೆತರಲು ಈ ಇಬ್ಬರು ಮುಂದಾಗಿದ್ದರು ಎಂಬ ಕಾರಣಕ್ಕೆ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.