ADVERTISEMENT

ಯಡಿಯೂರಪ್ಪ ಒಬ್ಬ ಹಿಟ್ಲರ್, ಮರಾಠರ ಏಜೆಂಟ್: ವಾಟಾಳ್ ನಾಗರಾಜ್

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2020, 7:06 IST
Last Updated 5 ಡಿಸೆಂಬರ್ 2020, 7:06 IST
ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.   

ಬೆಂಗಳೂರು: ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಬ್ಬ ಹಿಟ್ಲರ್. ಅವರು ಮರಾಠರ ಏಜೆಂಟ್ ನಂತೆ ವರ್ತಿಸುತ್ತಿದ್ದಾರೆ’ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ದೂರಿದರು.

‘ಕನ್ನಡ ಪರ ಹೋರಾಟಗಾರರನ್ನು ಬಂಧಿಸುವ ಮೂಲಕ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ಪೊಲೀಸ್ ಬಲ ಬಳಸಿ ಸುಮಾರು 30 ಸಾವಿರ ಕನ್ನಡಪರ ಹೋರಾಟಗಾರರನ್ನು ವಶಕ್ಕೆ ಪಡೆದಿದ್ದಾರೆ. ಪ್ರಾಧಿಕಾರ ರದ್ದು ಮಾಡುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದರು.

‘ನನಗೆ ಬೆದರಿಕೆ ಕರೆಗಳು ಬರುತ್ತಿವೆ. ಆದರೆ ಇದಕ್ಕೆಲ್ಲ ನಾನು ಹೆದರುವುದಿಲ್ಲ. ಮರಾಠ ಪ್ರಾಧಿಕಾರ ರಚನೆ ಸಂಬಂಧ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಜೆಡಿಎಸ್ ವರಿಷ್ಠ ಎಚ್.ಡಿ. ಕುಮಾರಸ್ವಾಮಿ ಮೌನ ಮುರಿಯಬೇಕು. ಇದನ್ನು ವಿರೋಧಿಸಬೇಕು’ ಎಂದರು.

ADVERTISEMENT

‘ಪರಭಾಷಿಕ ಐಜಿ, ಡಿಜಿಯನ್ನು ತಕ್ಷಣವೇ ವರ್ಗಾವಣೆ ಮಾಡಬೇಕು’ ಎಂದು ಆಗ್ರಹಿಸಿದರು.

‘ಶಾಸಕ ಬಸನಗೌಡ ಪಾಟೀಲ ಯತ್ನಾಳ ಮೂರ್ಖ. ಅವನಿಗೆ ಹೆಚ್ಚು ಪ್ರಚಾರ ನೀಡಬೇಡಿ’ ಎಂದರು.

ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದ, ‘ನನ್ನ 30 ವರ್ಷಗಳ ಹೋರಾಟದ ಜೀವನದಲ್ಲಿ ಪ್ರತಿಭಟನೆಯನ್ನು ಈ ರೀತಿ ಹತ್ತಿಕ್ಕುವುದನ್ನು ನೋಡಿರಲಿಲ್ಲ. ಕಾವೇರಿ ಹೋರಾಟ, ಗೋಕಾಕ ಚಳವಳಿ ಸೇರಿದಂತೆ ಹಲವು ಕನ್ನಡಪರ ಹೋರಾಟದಲ್ಲಿ ಪಾಲ್ಗೊಂಡಿದ್ದೆ. ಆದರೆ ಈ ರೀತಿ ಯಾವ ಸರ್ಕಾರವೂ ನಡೆದುಕೊಂಡಿರಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಾಟಾಳ್ ನಾಗರಾಜ, ಸಾ.ರಾ. ಗೋವಿಂದ ಸೇರಿದಂತೆ ಹಲವು ಕಾರ್ಯಕರ್ತರನ್ನು ಪೊಲೀಸರು ಟೌನ್ ಹಾಲ್ ಬಳಿ ವಶಕ್ಕೆ ಪಡೆದರು.
ಪ್ರತಿಭಟನಕಾರರಿಗಿಂತ ಪೊಲೀಸರ ಸಂಖ್ಯೆಯೇ ಹೆಚ್ಚಿತ್ತು.
ಪ್ರತಿಭಟನೆಗೆ ಮುಂದಾದ ಜಯ ಕರ್ನಾಟಕ, ಕನ್ನಡ ಸೇನೆ, ಭೀಮ್ ಆರ್ಮಿಯ ಕಾರ್ಯಕರ್ತರನ್ನೂ ಪೊಲೀಸರು ವಶಕ್ಕೆ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.