ಬಿ.ವೈ. ವಿಜಯೇಂದ್ರ
ಬೆಂಗಳೂರು: 'ಲೋಕಾಯುಕ್ತದ ತನಿಖೆಯ ದಿಕ್ಕು ಅನುಮಾನ ಮೂಡಿಸಿರುವ ನಡುವೆ ಜಾರಿ ನಿರ್ದೇಶನಾಲಯದಿಂದ ಹೊರಬಂದಿರುವ ವರದಿ ಮುಖ್ಯಮಂತ್ರಿಗಳ ಮುಖವಾಡ ಬಯಲು ಮಾಡಿದೆ. ಇಷ್ಟಾಗಿಯೂ ತಮ್ಮ ಭಂಡತನ ಮುಂದುವರಿಸಲು ನಿರ್ಧರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದೆಹಲಿಯ ಹಿಂದಿನ ಸಿಎಂ ಕೇಜ್ರಿವಾಲ್‌ರಂತೆ 'ಜೈಲಿಗೆ ಹೋದರೂ ಮುಖ್ಯಮಂತ್ರಿ ಗಾದಿ ಬಿಡುವುದಿಲ್ಲ' ಎಂಬ ಶಪಥ ಕೈಗೊಂಡಂತಿದೆ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ.ಪಾರ್ವತಿ ಅವರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು (ಮುಡಾ) 14 ಬದಲಿ ನಿವೇಶನಗಳನ್ನು ಹಂಚಿಕೆ ಮಾಡುವಲ್ಲಿ ಹಲವು ಅಕ್ರಮಗಳು ನಡೆದಿವೆ. ಅಷ್ಟೇ ಅಲ್ಲದೆ, ಮುಡಾದಲ್ಲಿ ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ನಿಯಮಬಾಹಿರವಾಗಿ ಹಂಚಿಕೆ ಮಾಡಲಾಗಿದೆ' ಎಂದು ಜಾರಿ ನಿರ್ದೇಶನಾಲಯವು (ಇ.ಡಿ) ಹೇಳಿದೆ.
ಈ ವರದಿಯನ್ನು ಉಲ್ಲೇಖಿಸಿ ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
'ನಿಶಕ್ತ ಕಾಂಗ್ರೆಸ್ ಹೈಕಮಾಂಡ್, ಸಿದ್ದರಾಮಯ್ಯನವರ ಮುಂದೆ ಮಂಡಿಯೂರಿ ಕುಳಿತಿರುವುದು ಕರ್ನಾಟಕದ ದೌರ್ಭಾಗ್ಯವಲ್ಲದೇ ಬೇರೇನೂ ಅಲ್ಲ' ಎಂದು ಅವರು ಹೇಳಿದ್ದಾರೆ.
'ಮುಡಾ ಅಕ್ರಮದಲ್ಲಿ ಮುಖ್ಯಮಂತ್ರಿಗಳ ಕುಟುಂಬಕ್ಕೆ ದೊರೆತಿದ್ದ 14 ನಿವೇಶನಗಳು ಹಾಗೂ ಸಾವಿರಾರು ನಿವೇಶನಗಳ ಲೂಟಿಕೋರತನದ ಹಗರಣದ ಹಿನ್ನಲೆ ಈ ಹಿಂದೆಯೂ ದಾಖಲೆಗಳ ಆಧಾರದ ಮೇಲೆ ಸಿದ್ದರಾಮಯ್ಯನವರ ಪಾತ್ರವನ್ನು ಸಾಕ್ಷೀಕರಿಸುತ್ತಿತ್ತು. ಇದರ ಆಧಾರದ ಮೇಲೆ ಉಚ್ಛ ನ್ಯಾಯಾಲಯ ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿಯ ನಿರ್ಧಾರವನ್ನು ಎತ್ತಿ ಹಿಡಿದು ತನಿಖೆಗೆ ಮುಕ್ತ ಅವಕಾಶ ಕಲ್ಪಿಸಿ ಕೊಟ್ಟಿತ್ತು' ಎಂದು ಅವರು ಹೇಳಿದ್ದಾರೆ.
'ಮುಡಾಗೆ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿರುವುದನ್ನು ಅಂದಿನ ಜಿಲ್ಲಾಧಿಕಾರಿಗಳೇ ಸರ್ಕಾರಕ್ಕೆ ಪತ್ರ ಬರೆದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ದಾಖಲಾದ ದೂರನ್ನು ಆಧರಿಸಿ ಜಾರಿ ನಿರ್ದೇಶನಾಲಯವು (ಇ.ಡಿ)ನಡೆಸುತ್ತಿರುವ ತನಿಖೆ ವಾಸ್ತವ ಸ್ಥಿತಿಯ ಮೇಲೆ ಬೆಳಕು ಚೆಲ್ಲುತ್ತಿದೆ. ಇದರ ವಾಸನೆಯನ್ನು ಅರಿತೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಂಗ್ರೆಸ್ ಹೈಕಮಾಂಡ್ ಬೆದರಿಸಲು ಹಾಸನದಲ್ಲಿ ಸ್ವಾಭಿಮಾನಿ ಸಮಾವೇಶ ನಡೆಸಲು ಹೊರಟಿದ್ದರು. ಕಾಂಗ್ರೆಸ್ ವರಿಷ್ಠರಿಗೂ ಮುಖ್ಯಮಂತ್ರಿಗಳು ಭಂಡತನದಿಂದ ಅಧಿಕಾರದಲ್ಲಿ ಮುಂದುವರೆಯುವುದು ಬೇಕಿಲ್ಲ. ಈ ಕಾರಣಕ್ಕಾಗಿಯೇ ಹಾಸನದ ಸಿದ್ದರಾಮಯ್ಯನವರ ಸ್ವಪ್ರತಿಷ್ಠೆಯ ಸ್ವಾಭಿಮಾನಿ ಸಮಾವೇಶಕ್ಕೆ ಕಡಿವಾಣ ಹಾಕಿದ್ದಾರೆ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.