ADVERTISEMENT

ಬಿಜೆಪಿಯ ಬೆಳವಣಿಗೆ ಬೃಹನ್ನಾಟಕ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 21:44 IST
Last Updated 8 ಜೂನ್ 2021, 21:44 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳೆಲ್ಲವೂ ಬೃಹನ್ನಾಟಕ. ನೀನು ಚಿವುಟಿದಂತೆ ಮಾಡು, ನಾನು ಅತ್ತಂತೆ ಮಾಡುವೆ ಎನ್ನುವಂತಿದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದರು.

ಸುದ್ದಿಗಾರರ ಜೊತೆ ಮಂಗ ಳವಾರ ಮಾತನಾಡಿದ ಅವರು, ‘ಯಡಿಯೂರಪ್ಪ ಕಳಪೆ ಮುಖ್ಯ ಮಂತ್ರಿ. ಅವರ ‍ಪದಚ್ಯುತಿ ಕುರಿತು ಮೊದಲಿನಿಂದಲೂ ಬಿಜೆಪಿಯಲ್ಲಿ ಚರ್ಚೆ ನಡೆಯುತ್ತಿದೆ. ಕೊರೊನಾ ಸಂದರ್ಭದಲ್ಲಿ ಅವರನ್ನು ಕೆಳಗಿಳಿಸಿ ದರೆ, ಯಾರನ್ನು ಮಾಡಬೇಕು ಎಂಬ ಸಂಶಯ ಆ ಪಕ್ಷದ ವರಿಷ್ಠ ರನ್ನು ಕಾಡುತ್ತಿದೆ’ ಎಂದರು.

‘ವರಿಷ್ಠರು ಹೇಳಿದ ತಕ್ಷಣ ರಾಜೀನಾಮೆ ನೀಡುತ್ತೇನೆ ಎಂದು ಯಡಿಯೂರಪ್ಪ ಹೇಳಿರುವುದು ತಂತ್ರಗಾರಿಕೆಯ ಭಾಗ. ಮತ್ತೊಂ ದೆಡೆ ರೇಣುಕಾ ಚಾರ್ಯ ಮೂಲಕ ಅವರೇ ಶಾಸಕರ ಸಹಿ ಸಂಗ್ರಹ ಮಾಡಿಸುತ್ತಿದ್ದಾರೆ. ಒಂದು ಕಡೆ ಬೆದರಿಸುವ ಮತ್ತು ನನಗೆ ಶಕ್ತಿ ಇದೆ ಎಂದು ತೋರಿಸಲು ಹೊರಟಿದ್ದಾರೆ. ಇದು ಸ್ವಾಭಾವಿಕವಾದ ರಾಜಕೀಯ ಬೆಳವಣಿಗೆ ಅಲ್ಲ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಚುನಾವಣೆಯಾದರೆ ನಮ್ಮದೇ ಗೆಲುವು: ‘ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದರೆ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವ ವಾತಾವರಣ ನಿರ್ಮಾಣವಾಗಿದೆ. ಬಿಜೆಪಿ ಸರ್ಕಾರ ಎಲ್ಲ ರಂಗ ಗಳಲ್ಲಿಯೂ ವಿಫಲವಾಗಿದೆ’ ಎಂದು ಟೀಕಿಸಿದರು.

ಎಸಿಬಿ ನಿಷ್ಕ್ರಿಯ: ‘ಹಲವು ಸಚಿವರ ವಿರುದ್ಧ ಭ್ರಷ್ಟಾಚಾರದ ದೂರುಗಳನ್ನು ನೀಡಿದರೂ ತನಿಖಾ ಸಂಸ್ಥೆಗಳು ಕ್ರಮ ಕೈಗೊಳ್ಳುತ್ತಿಲ್ಲ. ಎಸಿಬಿಯಂತೂ ನಿಷ್ಕ್ರಿಯವಾಗಿದೆ. ಎಸಿಬಿಯ ಅಸ್ತಿತ್ವವನ್ನೇ ಇಲ್ಲವಾಗಿಸುವ ಪ್ರಯತ್ನವನ್ನು ಬಿಜೆಪಿಯವರು ಮಾಡುತ್ತಿದ್ದಾರೆ’ ಎಂದು ಸಿದ್ದರಾಮಯ್ಯ ಅವರು ದೂರಿದರು.

‘ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಒಲ್ಲದ ಕೂಸು’

ಬೆಂಗಳೂರು: ‘ಡಿ.ಕೆ.ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷರಾದ ಮೇಲೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೈಕಮಾಂಡ್‌ಗೆ ಬೇಡದ ಕೂಸಾಗಿದ್ದಾರೆ‘ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್ ಲೇವಡಿ ಮಾಡಿದ್ದಾರೆ.

’ಮೂಲೆಗುಂಪಾಗಿರುವ ಸಿದ್ದರಾಮಯ್ಯ ಅವರು ಎಐಸಿಸಿ ಮಾಜಿ ಅಧ್ಯಕ್ಷರಂತೆ ಹಗಲಿನಲ್ಲಿ ಒಂದು ರೀತಿ, ರಾತ್ರಿ ಮತ್ತೊಂದು ರೀತಿ ಮಾತನಾಡುತ್ತಾರೆ. ಕೋವಿಡ್‌ ಸಂದರ್ಭದಲ್ಲಿ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ‘ ಎಂದು ಅವರು ದೂರಿದ್ದಾರೆ.

‘ಮೊದಲು ಕೋವಿಡ್‌ ಲಸಿಕೆ ಬಗ್ಗೆ ಜನರಲ್ಲಿ ಭಯ, ಗೊಂದಲ ಹುಟ್ಟಿಸಿದ ಕಾಂಗ್ರೆಸ್‌ ನಾಯಕರು ಈಗ ಲಸಿಕೆ ಪಡೆಯಲು ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಸಿದ್ದರಾಮಯ್ಯ ಮೇಸ್ಟ್ರು ನಮಗೆ ಬೋಧನೆ ಮಾಡುವ ಬದಲು ರಾಜಸ್ಥಾನ ಮತ್ತು ಪಂಜಾಬ್‌ ಸರ್ಕಾರಗಳಿಗೆ ಲಸಿಕೆ ಹೇಗೆ ಬಳಸಬೇಕು ಮತ್ತು ಬಡವರಿಗೆ ಉಚಿತವಾಗಿ ಹೇಗೆ ನೀಡಬೇಕು ಎಂಬುದರ ಪಾಠ ಮಾಡಲಿ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.