ADVERTISEMENT

ಕಾಲ ಕೂಡಿ ಬಂದಾಗ ಸಚಿವನಾಗುವೆ: ಮಹೇಶ ಕುಮಠಳ್ಳಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 9:21 IST
Last Updated 13 ಜನವರಿ 2021, 9:21 IST
ಅಥಣಿ ಶಾಸಕ ಮಹೇಶ ಕುಮಠಳ್ಳಿ
ಅಥಣಿ ಶಾಸಕ ಮಹೇಶ ಕುಮಠಳ್ಳಿ   

ಬೆಳಗಾವಿ: ‘ಕಾಲ ಕೂಡಿ ಬಂದಾಗ ನನಗೂ ಸಚಿವ ಸ್ಥಾನ ಸಿಗುತ್ತದೆ’ ಎಂದು ಅಥಣಿ ಶಾಸಕ ಮಹೇಶ ಕುಮಠಳ್ಳಿ ಹೇಳಿದರು.

ಇಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನನ್ನನ್ನು ಸಚಿವರನ್ನಾಗಿ ಮಾಡದಿರುವುದಕ್ಕೆ ಏನು ಸಮಸ್ಯೆ ಇದೆಯೋ ಗೊತ್ತಿಲ್ಲ. ಅದಕ್ಕೆ ಅವರ (ಮುಖ್ಯಮಂತ್ರಿ) ಬಳಿಯೂ ಉತ್ತರವಿಲ್ಲ. ಸಚಿವ ಸ್ಥಾನದ ಭರವಸೆ ಕೊಟ್ಟಿದ್ದರು. ಈಗ ಏನೋ ತೊಂದರೆ ಆಗಿರಬಹುದು. ಹಾಗೆಂದು ಪಕ್ಷಕ್ಕೆ ಮುಜುಗರ ಆಗುವಂತಹ ಹೇಳಿಕೆ ನೀಡುವುದಿಲ್ಲ’ ಎಂದರು.

‘ನನ್ನ ಕ್ಷೇತ್ರದ ಅಭಿವೃದ್ಧಿಗೆ ಗಮನಹರಿಸಿದ್ದೇನೆ. ಸಚಿವ ಸ್ಥಾನ ಸಿಗದಿರಬಹುದು. ಆದರೆ, ನನ್ನ ಕ್ಷೇತ್ರಕ್ಕೆ ಬೇಕಾದ ಕೆಲಸ ಮಾಡಿಕೊಡುತ್ತಿದ್ದಾರೆ. ಮುಂದೆ ಸಚಿವರನ್ನಾಗಿಯೂ ಮಾಡಬಹುದು ಎನ್ನುವ ವಿಶ್ವಾಸವಿದೆ. ಗೆದ್ದ 12 ಶಾಸಕರ ಪೈಕಿ 11 ಶಾಸಕರಿಗೆ ಸಚಿವ ಸ್ಥಾನ ನೀಡಿದ್ದಾರೆ. ಹೀಗಾಗಿ, ನಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂದು ಹೇಳುವುದಕ್ಕೆ ಬರುವುದಿಲ್ಲ. ನನ್ನ ಕ್ಷೇತ್ರದವರೇ ಉಪ ಮುಖ್ಯಮಂತ್ರಿ ಆಗಿರುವುದಕ್ಕೆ ಸಂತೋಷವಿದೆ. ಕ್ಷೇತ್ರದ ಜನರಿಗೂ ಪರಿಸ್ಥಿತಿ ಗೊತ್ತಿದೆ’ ಎಂದರು.

ADVERTISEMENT

‘ನನ್ನನ್ನು ಸಚಿವರನ್ನಾಗಿ ಮಾಡಲಾಗುವುದು ಎಂದು ಉಪ ಚುನಾವಣೆ ವೇಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿ ಎಲ್ಲರೂ ಮಾತನಾಡಿದ್ದರು. ನೀವು ಸಚಿವರನ್ನು ಆಯ್ಕೆ ಮಾಡುತ್ತಿದ್ದೀರಿ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಪ್ರಚಾರದ ವೇಳೆ ಜನರಿಗೆ ತಿಳಿಸಿದ್ದರು. ಆದರೆ, ಸಾಧ್ಯವಾಗಿಲ್ಲ. ಮುಖ್ಯಮಂತ್ರಿಗೂ ಕೆಲ ಸಮಸ್ಯೆಗಳು ಇರುತ್ತವೆ. ಎಲ್ಲರನ್ನೂ ಒಗ್ಗೂಡಿಸಿ ಕರೆದೊಯ್ಯಬೇಕಿರುತ್ತದೆ. ಸಚಿವ ಸ್ಥಾನದ ಬಗ್ಗೆ ತಲೆಕೆಡಿಸಿಕೊಳ್ಳದೆ, ಬಿಜೆಪಿಗೆ ಬಂದ ಮೇಲೆ ಪಕ್ಷ ಕಟ್ಟುವ ಕಾರ್ಯದಲ್ಲಿ ತೊಡಗಿದ್ದೇನೆ’ ಎಂದರು.

ಪಕ್ಷ ಬಿಟ್ಟು ಹೋದವರು ಮತ್ತೆ ಕಾಂಗ್ರೆಸ್‌ಗೆ ವಾಪಸಾಗಲಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಅವರ ಭಾವನೆ ಏನಿದೆಯೋ ಗೊತ್ತಿಲ್ಲ. ಆದರೆ, ಒಂದು ಪಕ್ಷ ಬಿಟ್ಟು ಬರುವುದು ಸಣ್ಣ ಮಾತಲ್ಲ. ಅದು ದೊಡ್ಡ ರಾಜಕೀಯ ವಿದ್ಯಮಾನ’ ಎಂದು ಹೇಳಿದರು.

ಮಾತುಕತೆ: ಜಿಲ್ಲಾ ಕ್ರೀಡಾಂಗಣದಲ್ಲಿ ಜನಸೇವಕ ಸಮಾವೇಶದ ಸಮಾರೋಪ ಸಮಾರಂಭದ ಸಿದ್ಧತೆ ವೀಕ್ಷಿಸಲು ಬಂದಿದ್ದ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರೊಂದಿಗೆ ಮಹೇಶ ಕುಮಠಳ್ಳಿ ಕೆಲಕಾಲ ಗೋಪ್ಯ ಮಾತುಕತೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.