ADVERTISEMENT

ಸಂತೋಷ್ ಪಾಟೀಲ ಆತ್ಮಹತ್ಯೆ: ರಮೇಶ ಜಾರಕಿಹೊಳಿ ಜೊತೆ ಗುತ್ತಿಗೆದಾರರ ಗೋಪ್ಯ ಮಾತುಕತೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2022, 12:39 IST
Last Updated 18 ಏಪ್ರಿಲ್ 2022, 12:39 IST
ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ   

ಬೆಳಗಾವಿ: ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ಕಮಿಷನ್ ಅರೋಪ ಮಾಡಿ ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ ಸಂತೋಷ್ ಪಾಟೀಲ ಅವರ ಬಳಿ ಉಪ ಗುತ್ತಿಗೆ ಪಡೆದಿದ್ದರು ಎನ್ನಲಾದ 12 ಮಂದಿಯಲ್ಲಿ ಐವರು ಗೋಕಾಕದಲ್ಲಿ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಸೋಮವಾರ ಭೇಟಿಯಾಗಿ ಗೋಪ್ಯ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ತಾವು ಕಾಮಗಾರಿ ನಿರ್ವಹಿಸಿರುವ ಹಿಂಡಲಗಾ ವ್ಯಾಪ್ತಿಯ ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗೇಶ ಮನ್ನೋಳಕರ ಅವರೊಂದಿಗೆ ಗುತ್ತಿಗೆದಾರರು ರಮೇಶ ಅವರನ್ನು ಭೇಟಿಯಾಗಿದ್ದಾರೆ. ಎಷ್ಟೆಷ್ಟು ಹಣ ಹಾಕಿದ್ದೇವೆ, ಯಾವ್ಯಾವ ಕೆಲಸ ಮಾಡಿದ್ದೇವೆ ಎಂಬ ಮಾಹಿತಿ ನೀಡಿದ ಅವರು, ಸರ್ಕಾರದಿಂದ ತಮಗೆ ಬರಬೇಕಾದ ಬಿಲ್‌ ಕೊಡಿಸುವಂತೆ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಹಿಂಡಲಗಾ ಗ್ರಾಮದಲ್ಲಿ ರಸ್ತೆ, ಚರಂಡಿ ಮೊದಲಾದ ಕೆಲಸ ಮಾಡುವಂತೆ ಸಂತೋಷ್ ಹಾಗೂ ಗ್ರಾ.ಪಂ. ಅಧ್ಯಕ್ಷ ನಾಗೇಶ ಇಬ್ಬರೂ ಸೇರಿ ನಮಗೆ ತಿಳಿಸಿದ್ದರು. ಒಟ್ಟು 12 ಮಂದಿ ವಿವಿಧೆಡೆ ಕೆಲಸ ಮಾಡಿದ್ದೇವೆ. ಕಾರ್ಯಾದೇಶದ ಪ್ರತಿ ಕೇಳಿದಾಗ, ನನ್ನ ಬಳಿ ಇದೆ, ನೀವೇನೂ ಕಾಳಜಿ ಮಾಡಬೇಡಿ ಕಾಮಗಾರಿ ನಡೆಸಿ ಎಂದು ಸಂತೋಷ್‌ ತಿಳಿಸಿದ್ದರು. ಅವರ ಮಾತನ್ನು ನಂಬಿ ನಾವು ಕೆಲಸ ನಿರ್ವಹಿಸಿದ್ದೇವೆ’ ಎಂದು ಉಪ ಗುತ್ತಿಗೆ ಪಡೆದಿದ್ದ ರಾಜು ಜಾಧವ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ADVERTISEMENT

‘ಆ ವೇಳೆ ಗ್ರಾಮದಲ್ಲಿ ಲಕ್ಷ್ಮೀದೇವಿ ಜಾತ್ರೆ ಇತ್ತು. ಜಾತ್ರೆ ಆರಂಭ ಅಗುವುದರೊಳಗೆ ಕೆಲಸ ಮಾಡಿ ಮುಗಿಸುವಂತೆ ನಮ್ಮ ಬೆನ್ನು ಬಿದ್ದಿದ್ದರು. ನಾವ್ಯಾರೂ ಕೆ.ಎಸ್. ಈಶ್ವರಪ್ಪ ಅವರನ್ನು ಭೇಟಿಯಾಗಿಲ್ಲ. ಅವರು ಶೇ 40ರಷ್ಟು ಕಮಿಷನ್‌ ಕೇಳಿರುವ ವಿಚಾರ ನಮಗೆ ಗೊತ್ತಿಲ್ಲ. ನಾನೊಬ್ಬನೆ ಹಿಂಡಲಗಾದ ಕಲ್ಮೇಶ್ವರ ನಗರದಲ್ಲಿ ₹27ಲಕ್ಷ ವೆಚ್ಚದಲ್ಲಿ ಕಾಮಗಾರಿ ಮಾಡಿದ್ದೇನೆ. ನನ್ನಂತೆಯೇ 12 ಮಂದಿ ಗುತ್ತಿಗೆದಾರರು ಕೆಲಸ ನಿರ್ವಹಿಸಿದ್ದಾರೆ. ನಮ್ಮ ಸ್ವಂತ ಹಣ ಹಾಕಿದ್ದೇವೆ. ಸಂತೋಷ್ ಹಣ ನೀಡಿಲ್ಲ. ನಮಗೆ ಕೊಡಬೇಕಾಗಿದ್ದೆಲ್ಲವನ್ನೂ ಸೇರಿಸಿ ₹ 4 ಕೋಟಿ ಬಿಲ್‌ ಬರಬೇಕು ಎಂದು ಸಂತೋಷ್ ಹೇಳಿರಬಹುದು’ ಎಂದು ಪ್ರತಿಕ್ರಿಯಿಸಿದರು.

‘ಸಂತೋಷ್ ಪ್ರಕರಣದಲ್ಲಿ ಮಹಾನಾಯಕನ ಷಡ್ಯಂತ್ರವಿದ್ದು, ಆ ಬಗ್ಗೆ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ದಾಖಲೆ ಬಿಡುಗಡೆ ಮಾಡುತ್ತೇನೆ’ ಎಂದಿದ್ದ ಶಾಸಕ ರಮೇಶ ಜಾರಕಿಹೊಳಿ ಹಿಂದೆ ಸರಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.