ADVERTISEMENT

ಉಪಚುನಾವಣೆ: ಮುಖಂಡರ ಸಂಧಾನ ಯತ್ನ ವಿಫಲ

ಬಿಜೆಪಿ ಬಂಡಾಯ ಅಭ್ಯರ್ಥಿಯಿಂದ ಸೋಮವಾರ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 10:48 IST
Last Updated 1 ಡಿಸೆಂಬರ್ 2019, 10:48 IST
ಸಂಧಾನ ವಿಫಲವಾದ ನಂತರ ಸಂಸದ ವೈ.ದೇವೇಂದ್ರಪ್ಪ, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ, ಮುಖಂಡ ಆನಂದ್‌ ಸಿಂಗ್‌ ಹಾಗೂ ಇತರೆ ನಾಯಕರು ಅಸಹಾಯಕರಾಗಿ ವಾಪಸಾದರು
ಸಂಧಾನ ವಿಫಲವಾದ ನಂತರ ಸಂಸದ ವೈ.ದೇವೇಂದ್ರಪ್ಪ, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ, ಮುಖಂಡ ಆನಂದ್‌ ಸಿಂಗ್‌ ಹಾಗೂ ಇತರೆ ನಾಯಕರು ಅಸಹಾಯಕರಾಗಿ ವಾಪಸಾದರು   

ಹೊಸಪೇಟೆ: ವಿಜಯನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಆನಂದ್‌ ಸಿಂಗ್‌ ಅವರಿಗೆ ಟಿಕೆಟ್‌ ನೀಡಿರುವುದಕ್ಕೆ ಮುನಿಸಿಕೊಂಡಿರುವ ಬಿಜೆಪಿ ಮುಖಂಡ ಕವಿರಾಜ ಅರಸ್‌ ಅವರ ಮನವೊಲಿಕೆ ಪ್ರಯತ್ನ ಶನಿವಾರ ವಿಫಲಗೊಂಡಿದೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ, ಸಂಸದರಾದ ವೈ. ದೇವೇಂದ್ರಪ್ಪ, ಕರಡಿ ಸಂಗಣ್ಣ, ಆನಂದ್‌ ಸಿಂಗ್‌ ಹಾಗೂ ಇತರೆ ಮುಖಂಡರು ಕವಿರಾಜ ಅವರ ಮನವೊಲಿಸಲು ಅವರ ಮನೆಗೆ ಹೋಗಿದ್ದರು. ಬೆಳಿಗ್ಗೆಯಿಂದ ಮಧ್ಯಾಹ್ನ 1ರ ವರೆಗೆ ನಡೆಸಿದ ಸಂಧಾನ ಯಶಸ್ವಿಯಾಗದ ಕಾರಣ ನಾಯಕರು ಬರಿಗೈಯಲ್ಲಿ ವಾಪಸಾದರು.

‘ಪಕ್ಷದ ಯಾವುದೇ ಕಾರ್ಯಕರ್ತನಿಗೆ ಟಿಕೆಟ್‌ ಕೊಡಿ ನನ್ನ ಅಭ್ಯಂತರವಿಲ್ಲ. ಆದರೆ, ಆನಂದ್‌ ಸಿಂಗ್‌ ಅವರಿಗೆ ಟಿಕೆಟ್‌ ಕೊಟ್ಟಿರುವುದಕ್ಕೆ ಬೇಸರವಿದೆ. ಅನೇಕ ವರ್ಷಗಳಿಂದ ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿ, ಪಕ್ಷಾಂತರ ಮಾಡಿದವರನ್ನು ಮಣೆ ಹಾಕುತ್ತಿರುವುದು ಎಷ್ಟು ಸರಿ. ನ. 18ರಂದು ಬಂಡಾಯ ಅಭ್ಯರ್ಥಿಯಾಗಿ ಚುನಾವಣೆಗೆ ನಾಮಪತ್ರ ಸಲ್ಲಿಸುವುದು ಶತಃಸಿದ್ಧ’ ಎಂದು ಅರಸ್‌ ಅವರು ಮುಖಂಡರಿಗೆ ಖಂಡತುಂಡವಾಗಿ ಹೇಳಿದರು.

ADVERTISEMENT

‘ಆನಂದ್‌ ಸಿಂಗ್‌ ಮತ್ತು ನಾನು ಸಹೋದರರಿದ್ದಂತೆ. ವೈಯಕ್ತಿಕವಾಗಿ ಅವರ ಬಗ್ಗೆ ನನಗೆ ಗೌರವವಿದೆ. ಚುನಾವಣೆಯಲ್ಲಿ ಸಹಕರಿಸುವಂತೆ ನನಗೆ ಹೇಳುವ ಬದಲು ಇದೇ ಮಾತನ್ನು ಸಿಂಗ್‌ ಅವರಿಗೆ ಹೇಳಬಹುದಲ್ಲ. ನಾನಾಗಲಿ ಅಥವಾ ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್‌ ಕೊಡಿ. ಅವರ ಗೆಲುವಿಗೆ ಆನಂದ್‌ ಸಿಂಗ್‌ ಸಹಕರಿಸಲಿ’ ಎಂದು ಹೇಳಿ ಆನಂದ್‌ ಸಿಂಗ್‌ ಅವರ ಕಾಲು ಹಿಡಿಯಲು ಹೋದರು.

ರವಿಕುಮಾರ ಪ್ರತಿಕ್ರಿಯಿಸಿ, ‘ಸಣ್ಣಪುಟ್ಟ ಗೊಂದಲಗಳಿವೆ. ಆದಷ್ಟು ಶೀಘ್ರ ಅವುಗಳನ್ನು ಬಗೆಹರಿಸಿಕೊಂಡು ಚುನಾವಣೆಯಲ್ಲಿ ಗೆಲ್ಲಲ್ಲು ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ’ ಎಂದು ಹೇಳಿದರು.

ಶುಕ್ರವಾರ ನಡೆದ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಗದ್ದಲ ಸೃಷ್ಟಿಸಿದ ಬಿಜೆಪಿ ಮುಖಂಡರು, ಕಾರ್ಯಕರ್ತರು ರವಿಕುಮಾರ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಇದರಿಂದಾಗಿ ಸಭೆ ರದ್ದುಗೊಂಡಿತ್ತು. ಮುನಿಸಿಕೊಂಡಿರುವ ಪಕ್ಷದ ಮುಖಂಡರನ್ನು ಸಮಾಧಾನಗೊಳಿಸಿ, ವಿಶ್ವಾಸಕ್ಕೆ ತೆಗೆದುಕೊಳ್ಳಲು ರವಿಕುಮಾರ ಅವರು ಒಬ್ಬೊಬ್ಬರೇ ಮುಖಂಡರ ಮನೆಗೆ ಹೋಗಿ ಪ್ರತ್ಯೇಕವಾಗಿ ಭೇಟಿ ಮಾಡುತ್ತಿದ್ದಾರೆ. ಆದರೆ, ಅವರು ಅದರಲ್ಲಿ ಯಶಸ್ವಿಯಾಗಿಲ್ಲ. ಎಲ್ಲಾ ಮುಖಂಡರು ಅವರ ನಿಲುವಿಗೆ ಅಂಟಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.