ADVERTISEMENT

ಎಂಟಿಬಿ ₹1,223 ಕೋಟಿ ಮೌಲ್ಯದ ಒಡೆಯ

18 ತಿಂಗಳಲ್ಲಿ ಸಂಪತ್ತು ₹150 ಕೋಟಿ ವೃದ್ಧಿ: ಆಗಸ್ಟ್‌ 2ರಿಂದ 7ರ ನಡುವೆ 53 ಠೇವಣಿಗಳು!

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2019, 23:37 IST
Last Updated 15 ನವೆಂಬರ್ 2019, 23:37 IST
ಎಂ.ಟಿ.ಬಿ. ನಾಗರಾಜ್‌
ಎಂ.ಟಿ.ಬಿ. ನಾಗರಾಜ್‌   

ಬೆಂಗಳೂರು: ಹೊಸಕೋಟೆ ಕ್ಷೇತ್ರದಿಂದ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಅನರ್ಹ ಶಾಸಕ ಎಂ.ಟಿ.ಬಿ.ನಾಗರಾಜ್‌ ಅವರ ಆಸ್ತಿ 18 ತಿಂಗಳಲ್ಲಿ ₹ 150 ಕೋಟಿಯಷ್ಟು ಹೆಚ್ಚಳವಾಗಿದ್ದು, ಸದ್ಯ ₹ 1,223 ಕೋಟಿ ಆಸ್ತಿಯ ಒಡೆಯ.

ಚುನಾವಣಾ ಅಧಿಕಾರಿಯವರಿಗೆ ಸಲ್ಲಿಸಿರುವ ಪ್ರಮಾಣಪತ್ರದಿಂದ ಈ ಮಾಹಿತಿ ಬಹಿರಂಗವಾಗಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ₹1,015 ಕೋಟಿ ಆಸ್ತಿ ಘೋಷಿಸಿಕೊಂಡಿದ್ದರು. ಕುತೂಹಲದ ಸಂಗತಿಯೆಂದರೆ ಈ ವರ್ಷದ ಆಗಸ್ಟ್‌ 2ರಿಂದ 7ರ ನಡುವೆ ವಿವಿಧ ಬ್ಯಾಂಕ್‌ ಖಾತೆಗಳಲ್ಲಿ 53 ಠೇವಣಿಗಳನ್ನು ಇರಿಸಿದ್ದಾರೆ. ಪ್ರತಿ ಠೇವಣಿ ₹90 ಲಕ್ಷಕ್ಕಿಂತ ಅಧಿಕವಾಗಿದೆ. ಈ ಠೇವಣಿಯ ಒಟ್ಟು ಮೊತ್ತ ₹ 48.76 ಕೋಟಿಯಷ್ಟಾಗುತ್ತದೆ.

ಜುಲೈ ತಿಂಗಳಲ್ಲಿ ಇನ್ನೊಂದು ಠೇವಣಿ ಮಾಡಿದ್ದು, ಅದರ ಮೊತ್ತ ₹ 1.06 ಕೋಟಿ. ಇದೇ ಅವಧಿಯಲ್ಲಿ ಶಾಸಕರು ಬಂಡಾಯ ಎದ್ದು ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ADVERTISEMENT

ನಿಶ್ಚಿತ ಠೇವಣಿಯಲ್ಲಿ ₹134.56 ಕೋಟಿ ಇದ್ದು, ಪತ್ನಿಯ ಬಳಿ ₹32.40 ಕೋಟಿ ಇದೆ. 193 ಬ್ಯಾಂಕ್‌ ಖಾತೆಗಳನ್ನು ಹೊಂದಿದ್ದಾರೆ.ಅವರ ಸ್ಥಿರಾಸ್ತಿಗಳ ಪೈಕಿ ಕಲ್ಯಾಣ ಮಂಟಪಗಳು, ಶಿಕ್ಷಣ ಸಂಸ್ಥೆ, ಇಂದಿರಾ ನಗರ, ಮಗರತ್‌ ರಸ್ತೆ, ರಿಚ್ಮಂಡ್‌ ರಸ್ತೆಗಳಲ್ಲಿ ವಾಣಿಜ್ಯ ಸಂಕೀರ್ಣಗಳು ಸೇರಿವೆ. ವೈಟ್‌ಫೀಲ್ಡ್‌, ಕೆ.ಆರ್‌.ಪುರಂ, ಹೊಸಕೋಟೆ, ಮಹದೇವಪುರ, ಪುತ್ತೂರು, ಕೊಟ್ಟೂರಿನಲ್ಲಿ 93 ಕೃಷಿಯೇತರ ನಿವೇಶನ ಹೊಂದಿದ್ದಾರೆ. ₹2.54 ಕೋಟಿ ಮೌಲ್ಯದ ಐಷಾರಾಮಿ ಕಾರುಗಳನ್ನು ಹೊಂದಿದ್ದು, ಅದರಲ್ಲಿ ಪ್ರಡೊ, ಫಾರ್ಚುನರ್‌, ಬೆಂಜ್‌, ಬೊಲೇರೊ, ಲ್ಯಾಂಡ್‌ ರೋವರ್‌, ಹುಂಡೈ ಐ10 ಸೇರಿದೆ. ಅವರ ಪತ್ನಿಯ ಬಳಿ ₹1.72 ಕೋಟಿಯ ಪೋರ್ಶೆ ಕಾರು ಇದೆ.

ಚರಾಸ್ತಿ ₹419.28 ಕೋಟಿ

*ನಾಗರಾಜ್‌ ಅವರ ಚರಾಸ್ತಿ ₹419.28 ಕೋಟಿ, ಅವರ ಪತ್ನಿಯ ಆಸ್ತಿ ಮೌಲ್ಯ ₹167.34 ಕೋಟಿ.

*ಎಂಟಿಬಿ ಸ್ವಯಾರ್ಜಿತಸ್ಥಿರಾಸ್ತಿಯ ಮೌಲ್ಯ ₹417.11 ಕೋಟಿ ಇದ್ದು, ಪಿತ್ರಾರ್ಜಿತ ಆಸ್ತಿಯ ಮೌಲ್ಯ ₹2.64 ಕೋಟಿ

*ಪತ್ನಿಯ ಸ್ವಯಾರ್ಜಿತ ಆಸ್ತಿ ಮೌಲ್ಯ ₹189.14 ಕೋಟಿ

*ಪಿತ್ರಾರ್ಜಿತ ಆಸ್ತಿಯ ಮೌಲ್ಯ ₹27.50 ಲಕ್ಷ.

*ನಾಗರಾಜ್‌ ₹29.90 ಕೋಟಿ ಸಾಲ ಹೊಂದಿದ್ದು, ಅವರ ಪತ್ನಿಗೆ ನೀಡಿದ್ದು ₹1.57 ಕೋಟಿ ಸಾಲ

*ನಾಗರಾಜ್‌ ಹೆಸರಲ್ಲಿ 57 ಎಕರೆ ಕೃಷಿ ಭೂಮಿ. ಅವರ ಪತ್ನಿ ಹೆಸರಲ್ಲಿ 4 ಎಕರೆ

*₹2.23 ಕೋಟಿ ಮೌಲ್ಯದ ಆಭರಣ ಹಾಗೂ ಪತ್ನಿಯ ಬಳಿ ₹1.48 ಕೋಟಿ ಮೌಲ್ಯದ ಆಭರಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.