ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್
(ಸಂಗ್ರಹ ಚಿತ್ರ)
ಬೆಂಗಳೂರು: ರಾಜ್ಯದ ದುರ್ಗಮ ಮತ್ತು ಸಂಪರ್ಕ ರಹಿತ ಪ್ರದೇಶಗಳ ಜನರಿಗೆ ಸಂಚಾರಿ ಆರೋಗ್ಯ ಘಟಕಗಳ ಮೂಲಕ ಪ್ರಾಥಮಿಕ ಆರೋಗ್ಯ ಆರೈಕೆ ಸೇವೆ ಒದಗಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
‘ಈ ಯೋಜನೆಗೆ ₹15.97 ಕೋಟಿಯನ್ನು ಒದಗಿಸಲು ಒಪ್ಪಿಗೆ ನೀಡಲಾಗಿದೆ. ಬಹುತೇಕ ಸಂಪರ್ಕರಹಿತ ಮತ್ತು ದುರ್ಗಮ ಪ್ರದೇಶಗಳಲ್ಲಿ ಆರೋಗ್ಯ ಸೇವೆಯ ಕೊರತೆ ಇದೆ. ಅದನ್ನು ನೀಗಿಸಲು ಸಂಚಾರಿ ಆರೋಗ್ಯ ಘಟಕಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ’ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.
ಮಾವು ಬೆಳೆಗಾರರಿಗೆ ಹೆಚ್ಚಿನ ಪರಿಹಾರ ಒದಗಿಸುವಂತೆ ಒತ್ತಾಯಿಸಲು ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಲು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮತ್ತು ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು ಎಂದು ಪಾಟೀಲ ತಿಳಿಸಿದರು.
ಮಾವು ಬೆಳೆಗಾರರ ಸಂಕಷ್ಟದ ವಿಚಾರವಾಗಿ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಕೋಲಾರ ಮತ್ತು ಬೆಂಗಳೂರು ಗ್ರಾಮೀಣ ಭಾಗದ ಸಚಿವರು ಚರ್ಚೆಯಲ್ಲಿ ಭಾಗವಹಿಸಿದ್ದರು. ಆಂಧ್ರದ ಚಿತ್ತೂರು ಭಾಗದಲ್ಲಿ ರಾಜ್ಯದ ಮಾವಿನ ಹಣ್ಣುಗಳ ಪ್ರವೇಶಕ್ಕೆ ಅವಕಾಶ ನೀಡದ ವಿಚಾರವನ್ನು ಸಚಿವ ಕೆ.ಎಚ್.ಮುನಿಯಪ್ಪ ಪ್ರಸ್ತಾಪಿಸಿದರು ಎಂದು ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲೆ ನಂದಿಬೆಟ್ಟದಲ್ಲಿ ಜುಲೈ 16 ಅಥವಾ 17ರಂದು ಸಚಿವ ಸಂಪುಟ ನಡೆಸಲಾಗುವುದು. ಆ ಭಾಗಕ್ಕೆ ಸಂಬಂಧಿಸಿದಂತೆ ಕೆಲವು ಇಲಾಖೆಗಳಿಂದ ಪ್ರಸ್ತಾವನೆಗಳು ಬಂದಿರಲಿಲ್ಲ. ಆ ಪ್ರದೇಶಕ್ಕೆ ಪರಿಣಾಮಕಾರಿ ಕೆಲಸಗಳು ಆಗಬೇಕು ಎಂಬ ಉದ್ದೇಶದಿಂದ ಮತ್ತು ಕೆಲವು ಸಚಿವರ ಕೋರಿಕೆ ಮೇರೆಗೆ ನಂದಿಬೆಟ್ಟದಲ್ಲಿ ನಡೆಯಬೇಕಿದ್ದ ಸಂಪುಟ ಸಭೆ ಮುಂದೂಡಲಾಗಿತ್ತು ಎಂದರು.
ಪ್ರಮುಖ ತೀರ್ಮಾನಗಳು:
* ಕರ್ನಾಟಕ ನೋಂದಣಿ ಸಂಘಗಳ ಕಾಯ್ದೆ 1960ರ ಪ್ರಕಾರ ಸಂಘಗಳಾಗಿ ನೋಂದಾಯಿಸಲ್ಪಟ್ಟ ಆರೋಗ್ಯ ರಕ್ಷಾ ಸಮಿತಿಗಳು ಆಡಳಿತ ಮತ್ತು ಸಾಮಾನ್ಯ ಸಭೆಯ ಸದಸ್ಯರನ್ನು ನಾಮ ನಿರ್ದೇಶನ ಮಾಡುವ ಅಧಿಕಾರದಲ್ಲಿ ಬದಲಾವಣೆ ಮಾಡಲು ಒಪ್ಪಿಗೆ
*ಪಾರ್ಶ್ವವಾಯು ಮತ್ತು ತಲೆಗೆ ತೀವ್ರ ಪೆಟ್ಟಾದ ರೋಗಿಗಳ ಆರೈಕೆಗಾಗಿ ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಹಬ್ ಮತ್ತು ಸ್ಪೋಕ್ ಚಿಕಿತ್ಸಾ ಮಾದರಿ ಅನುಷ್ಠಾನಕ್ಕೆ ₹12.87 ಕೋಟಿ ಪರಿಷ್ಕೃತ ಅಂದಾಜಿಗೆ ಅನುಮೋದನೆ
*ಬಸವಕಲ್ಯಾಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಅನುಭವ ಮಂಟಪದ ನಿರ್ಮಾಣ ಕಾಮಗಾರಿಯ ಪರಿಷ್ಕೃತ ಅಂದಾಜು ₹742 ಕೋಟಿಗೆ ಅನುಮೋದನೆ
*ರಾಯಚೂರು ಜಿಲ್ಲೆ ಲಿಂಗಸಗೂರು ತಾಲ್ಲೂಕು ಶಿಲಹಳ್ಳಿ ಗ್ರಾಮದ ಬಳಿ ಕೃಷ್ಣಾನದಿಯ ಉಪನದಿಗೆ ಅಡ್ಡಲಾಗಿ ಹೈಲೆವೆಲ್ ಮೈನರ್ ಸೇತುವೆ ನಿರ್ಮಾಣ ಮತ್ತು ಹುಬ್ಬಳ್ಳಿ ನಗರದ ರಾಜನಾಲಾ ತಡೆಗೋಡೆ ನಿರ್ಮಾಣಕ್ಕೆ ₹23.51 ಕೋಟಿಗೆ ಅನುಮೋದನೆ
*ಮಸ್ಕಿ ನಾಲಾದಿಂದ ಕನಕನಾಲಾ ಕಣಿವೆಗೆ ಪ್ರವಾಹದ ನೀರನ್ನು ತಿರುಗಿಸಲು ಮಸ್ಕಿನಾಲೆಯ ಮೇಲ್ಬಾಗದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಲು ಮತ್ತು ಕನಕನಾಲಾ ಆಧುನೀಕರಣ ಯೋಜನೆಗೆ ₹134.56 ಕೋಟಿಗೆ ಅನುಮೋದನೆ
*ಸಿಂಧನೂರು ತಾಲ್ಲೂಕು ಚನ್ನಬಸವೇಶ್ವರ ಏತ ನೀರಾವರಿ ಯೋಜನೆಯ ಜಾಕ್‌ವೆಲ್ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ವಿಯರ್ ನಿರ್ಮಾಣ ಮಾಡುವ ₹43.10 ಕೋಟಿ ವೆಚ್ಚದ ಕಾಮಗಾರಿಗೆ ಒಪ್ಪಿಗೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.