ADVERTISEMENT

ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆ ಕರ್ನಾಟಕದಲ್ಲಿ ಕಾಶಿ ದರ್ಶನ್‌ ರೈಲು ರದ್ದು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಏಪ್ರಿಲ್ 2023, 14:53 IST
Last Updated 16 ಏಪ್ರಿಲ್ 2023, 14:53 IST
ಚಿತ್ರ ಕೃಪೆ :(Twitte/@TumakuruRailway)
ಚಿತ್ರ ಕೃಪೆ :(Twitte/@TumakuruRailway)   

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಯಾದ ಹಿನ್ನೆಲೆ ಭಾರತ್‌ ಗೌರವ್‌ ಕಾಶಿ ದರ್ಶನ್‌ ವಿಶೇಷ ರೈಲು ಸೇವೆಯನ್ನು ರದ್ದುಪಡಿಸುವಂತೆ ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆಗೆ ಚುನಾವಣಾ ಆಯೋಗ ಸೂಚಿಸಿದ್ದು, ಇದೀಗ ಇಲಾಖೆ ರೈಲು ಸೇವೆಯನ್ನು ರದ್ದು ಪಡಿಸಿದೆ.

ಕರ್ನಾಟಕದಲ್ಲಿನ ಹಿಂದೂ ಯಾತ್ರಾರ್ಥಿಗಳಿಗೆ ವಾರಾಣಾಸಿ–ಅಯೋಧ್ಯೆ–ಪ್ರಯಾಗರಾಜ್‌ಗೆ ಹೋಗಲು ಅನುಕೂಲವಾಗುವಂತೆ ವಿಶೇಷ ರೈಲು ಸೇವೆ ಒದಗಿಸಲು ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆಗೆ ನಿರ್ಧರಿಸಿತ್ತು. ಏಪ್ರಿಲ್‌ 14 ಮತ್ತು 28ರಂದು ಎರಡು ಟ್ರಿಪ್‌ಗಳಲ್ಲಿ ರೈಲು ಸೇವೆ ಒದಗಿಸಲು ನಿರ್ಧರಿಸಿದ ಇಲಾಖೆ, ಮಾರ್ಚ್ 25ರಿಂದಲೇ IRCTC ಪೋರ್ಟಲ್‌ನಲ್ಲಿ ಆನ್‌ಲೈನ್ ಬುಕಿಂಗ್ ಅನ್ನು ಪ್ರಾರಂಭಿಸಿತ್ತು.

ಮಾರ್ಚ್‌ 29ರಂದು ರಾಜ್ಯ ವಿಧಾನಸಭಾ ಚುನಾವಣೆಗೆ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದ ಚುನಾವಣಾ ಆಯೋಗ ಮಾದರಿ ನೀತಿ ಸಂಹಿತೆಯನ್ನು ಘೋಷಿಸಿದೆ. ಚುನಾವಣಾ ಮಾದರಿ ಸಂಹಿತೆ ಘೋಷಣೆಯಾಗುತ್ತಿದ್ದಂತೆ ವಿಶೇಷ ರೈಲುಗಳ ಕಾರ್ಯಾಚರಣೆಗಳ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿದ್ದವು. ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆ ಚುನಾವಣಾ ಆಯೋಗವನ್ನು ಸಂಪರ್ಕಿಸಿದ್ದು, ‘ಬುಂಕಿಂಗ್‌ ಅನ್ನು ತಕ್ಷಣ ನಿಲ್ಲಿಸಿ , ಕಾಶಿ ದರ್ಶನ್‌ ವಿಶೇಷ ರೈಲು ಸೇವೆಯನ್ನು ರದ್ದುಪಡಿಸುವಂತೆ‘ ತಿಳಿಸಿದೆ.

ADVERTISEMENT

ಚುನಾವಣಾ ಆಯೋಗದ ನಿರ್ದೇಶನದಂತೆ ಏಪ್ರಿಲ್‌ ತಿಂಗಳಲ್ಲಿ ನಿಗದಿಪಡಿಸಲಾಗಿದ್ದ ರೈಲು ಸೇವೆಯನ್ನು ರದ್ದುಪಡಿಸಲಾಗಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಬುಕ್ಕಿಂಗ್‌ ಆದ ಹಣ ಮರುಪಾವತಿಯಾಗುತ್ತದಯೇ ಅಥವಾ ಪ್ರಯಾಣವನ್ನು ಮುಂದಿನ ತಿಂಗಳಿಗೆ ಮುಂದೂಡಿದೆಯಾ ಎಂಬುವುದರ ಬಗ್ಗೆ ಇಲಾಖೆ ಸ್ಪಷ್ಟಪಡಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.