ADVERTISEMENT

ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಸಮೀಕ್ಷೆ ಅವಧಿ ವಿಸ್ತರಿಸಲ್ಲ: ತಂಗಡಗಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 13:48 IST
Last Updated 14 ಅಕ್ಟೋಬರ್ 2025, 13:48 IST
<div class="paragraphs"><p>ಶಿವರಾಜ ತಂಗಡಗಿ</p></div>

ಶಿವರಾಜ ತಂಗಡಗಿ

   

ಬೆಳಗಾವಿ: ‘ಬೆಂಗಳೂರು ನಗರ ಬಿಟ್ಟರೆ, ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಉತ್ತಮ ರೀತಿಯಲ್ಲಿ ಸಾಗಿದೆ. ಅ.18ರೊಳಗೆ ಪೂರ್ಣಗೊಳಿಸುತ್ತೇವೆ. ಸಮೀಕ್ಷೆ ಅವಧಿ ವಿಸ್ತರಿಸುವುದಿಲ್ಲ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.

‘ರಾಜ್ಯದಲ್ಲಿ ಈವರೆಗೆ 5.34 ಕೋಟಿ ಜನರು ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ. ಈ ಪೈಕಿ ಬೆಂಗಳೂರು ನಗರದಲ್ಲಿ 41 ಲಕ್ಷ ಜನರು ಭಾಗಿಯಾಗಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಮೀಕ್ಷೆಗೆ ಉತ್ತಮ ಸ್ಪಂದನೆ ಇದೆ. ಕೆಲವು ಜಿಲ್ಲೆಗಳಲ್ಲಂತೂ ಶೇ 100ರಷ್ಟು ಮುಗಿದಿದೆ. ಬೆಂಗಳೂರು ನಗರದಲ್ಲಿ ಮಾತ್ರ ವಿಳಂಬವಾಗುತ್ತಿದೆ. ಅದನ್ನು ಬೇಗ ಮುಗಿಸುವ ಸವಾಲು ನಮ್ಮ ಮುಂದಿದೆ. ನಿಗದಿತ ಅವಧಿಯಲ್ಲೇ ಮುಗಿಸುತ್ತೇವೆ’ ಎಂದು ಇಲ್ಲಿ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

‘ಟೀಕಿಸುವುದೇ ಬಿಜೆಪಿಯವರ ಕೆಲಸ. ಹಾಗಾಗಿ ಸಮೀಕ್ಷೆ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಕೇಂದ್ರ ಸಚಿವ ಸ್ಥಾನದಲ್ಲಿ ಇರುವವರು ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ ಎಂದಿದ್ದಾರೆ. ಇದು ಹಿಂದುಳಿದ ಸಮುದಾಯದವರ ಬಗ್ಗೆ ಅವರಿಗೆ ಎಷ್ಟು ಕಾಳಜಿ ಇದೆ ಎಂಬುದನ್ನು ತೋರಿಸುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಪಕ್ಷದ ಹಂತದಲ್ಲಿ ಈ ವಿಚಾರವಾಗಿ ಗೊಂದಲವಿಲ್ಲ. ಈ ಬಗ್ಗೆ ಚರ್ಚಿಸುವ ಅಗತ್ಯವೂ ಇಲ್ಲ. ಮಾಧ್ಯಮದವರು ಪ್ರಶ್ನಿಸುವುದನ್ನು ನಿಲ್ಲಿಸಿದರೆ, ಈ ಚರ್ಚೆ ಇಲ್ಲಿಗೇ ನಿಲ್ಲುತ್ತದೆ’ ಎಂದರು.

‘ಮುಖ್ಯಮಂತ್ರಿ ಜತೆಗೆ ನಡೆದ ಸಭೆಯಲ್ಲಿ ಇಲಾಖೆ ಕೆಲಸಗಳ ಚರ್ಚಿಸಲಾಗಿದೆಯೇ ಹೊರತು, ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಯಾಗಿಲ್ಲ. ಮಂತ್ರಿ ಸ್ಥಾನಕ್ಕೆ ಆಕಾಂಕ್ಷಿಗಳು ಸಹಜ. ಆದರೆ, ಈ ಬಗ್ಗೆ ಪಕ್ಷದ ಹೈಕಮಾಂಡ್‌ ನಿರ್ಧರಿಸುತ್ತದೆ’ ಎಂದು ಹೇಳಿದರು.

‘ಪ್ರತಿವರ್ಷ ಕಿತ್ತೂರು ಉತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ₹1 ಕೋಟಿ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದಿಂದ ₹4 ಕೋಟಿ ಅನುದಾನ ನೀಡಲಾಗುತ್ತದೆ. ಅಂತೆಯೇ ಈ ವರ್ಷವೂ ಅನುದಾನ ಬಿಡುಗಡೆಗೊಳಿಸುತ್ತೇವೆ’ ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆ ಬಗ್ಗೆ ಶಾಸಕ ಆರ್.ವಿ.ದೇಶಪಾಂಡೆ ಟೀಕಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ತಂಗಡಗಿ, ‘ಅದು ಅವರ ವೈಯಕ್ತಿಕ ‌ವಿಚಾರ. ವಿಧಾನಸಭೆ ಚುನಾವಣೆಯಲ್ಲಿ ಘೋಷಿಸಿದಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಯಾರೂ ಏನೇ ಹೇಳಿದರೂ ಯೋಜನೆಗಳನ್ನು ಕೈಬಿಡಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.