ADVERTISEMENT

ಅಕ್ರಮ ನೇಮಕಾತಿ ದಾಖಲೆ ರಾಹುಲ್‌ಗೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಕಾಂಗ್ರೆಸ್‌ ಮುಖಂಡರಿಗೆ ಶಿಕ್ಷೆ ಕೊಡುವರೇ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸವಾಲು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2022, 20:54 IST
Last Updated 18 ಅಕ್ಟೋಬರ್ 2022, 20:54 IST
ಬೀದರ್‌ ಜಿಲ್ಲೆಯ ಔರಾದ್‌ನಲ್ಲಿ ಬಿಜೆಪಿಯ ಜನ ಸಂಕಲ್ಪ ಯಾತ್ರೆಗೆ ಗೋ‍ಪೂಜೆ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಇದ್ದಾರೆ
ಬೀದರ್‌ ಜಿಲ್ಲೆಯ ಔರಾದ್‌ನಲ್ಲಿ ಬಿಜೆಪಿಯ ಜನ ಸಂಕಲ್ಪ ಯಾತ್ರೆಗೆ ಗೋ‍ಪೂಜೆ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಇದ್ದಾರೆ   

ಔರಾದ್ (ಬೀದರ್‌ ಜಿಲ್ಲೆ): ‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ನೇಮಕಾತಿಯಲ್ಲಿ ನಡೆದ ಅಕ್ರಮ ವ್ಯವಹಾರಗಳ ಮಾಹಿತಿ ಕಲೆ ಹಾಕಲಾಗಿದ್ದು, ಎಲ್ಲ ದಾಖಲೆಗಳನ್ನು ರಾಹುಲ್‌ ಗಾಂಧಿ ಅವರಿಗೆ ಕಳಿಸಿಕೊಡಲಾಗುವುದು. ಅವರು ತಪ್ಪು ಮಾಡಿದವರಿಗೆ ಏನಾದರೂ ಶಿಕ್ಷೆ ಕೊಡುತ್ತಾರೆಯೇ ಎನ್ನುವುದು ನನ್ನ ನೇರ ಪ್ರಶ್ನೆಯಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಹೇಳಿದರು.

ಪಟ್ಟಣದಲ್ಲಿ ಆಯೋಜಿಸಿದ್ದ ಬಿಜೆಪಿಯ ಜನ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಭಾರತ ಜೋಡೊ ಯಾತ್ರೆ ಸಂದರ್ಭದಲ್ಲಿ ಬಳ್ಳಾರಿಯಲ್ಲಿ ರಾಹುಲ್‌ ಅವರು ಬಿಜೆಪಿ ಸರ್ಕಾರದಲ್ಲಿ ಹಣ ಕೊಟ್ಟರೆ ನೌಕರಿ ಸಿಗುತ್ತದೆ ಎಂದು ಆರೋಪಿಸಿದ್ದಾರೆ. ಸಿದ್ದರಾಮಯ್ಯ ಅವಧಿಯಲ್ಲಿ ನಡೆದ ನೇಮಕಾತಿ ಅಕ್ರಮಗಳನ್ನು ಈಗಾಗಲೇ ಸಿಐಡಿ ಬಯಲು ಮಾಡಿದೆ. ಇಬ್ಬರನ್ನು ಬಂಧಿಸಲಾಗಿದೆ. ಇನ್ನೂ ನಾಲ್ವರು ಬಂಧನಕ್ಕೆ ಒಳಗಾಗಲಿದ್ದಾರೆ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಅರ್ಜಿ ಹಾಕದವರಿಗೂ ನೌಕರಿ ಸಿಕ್ಕಿದೆ’ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ADVERTISEMENT

‘ಪೊಲೀಸ್‌ ನೇಮಕಾತಿ ಸಂದರ್ಭದಲ್ಲಿ ಡಿಐಜಿ ಮನೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆಯಿತು. ಡಿಐಜಿ ಅವರೇ ಹಣ ಪಡೆದು ನೌಕರಿ ಕೊಡಿಸಿದ್ದರು. ಡಿಐಜಿ ಶ್ರೀಧರನ್‌ ವಿರುದ್ಧ ಎಫ್‌ಐಆರ್‌ ಆದರೂ ಕಾಂಗ್ರೆಸ್‌ನವರು ಪ್ರಕರಣ ಮುಚ್ಚಿ ಹಾಕಿದರು. ಪ್ರಾಸಿಕ್ಯೂಟರ್ ನೇಮಕಾತಿಯಲ್ಲೂ ಹಣ ಪಡೆದರು. ನಾನು ಬಂದ ಮೇಲೆ ಎಲ್ಲರನ್ನೂ ಅಮಾನತು ಮಾಡಿದೆ. ನಂತರ ವಿಶೇಷ ನೇಮಕಾತಿ ಮೂಲಕ ಅರ್ಹರನ್ನು ನೇಮಕ ಮಾಡಿಕೊಳ್ಳಲಾಯಿತು’ ಎಂದರು.

‘ತಪ್ಪು ಮಾಡಿದ ಯಾರನ್ನೂ ಬಿಟ್ಟಿಲ್ಲ. ಕಾಂಗ್ರೆಸ್‌ನವರಿಗೆ ಡಿಐಜಿ ಮುಟ್ಟಲು ಸಾಧ್ಯವಾಗಿರಲಿಲ್ಲ. ಅವರಿಗೆ ದಮ್‌ ಇರಲಿಲ್ಲ. ಶ್ರೀಧರನ್‌ ವಿರುದ್ಧ ಕ್ರಮಕ್ಕೆ ನಾನೇ ಅನುಮತಿ ಕೊಟ್ಟಿದ್ದೇನೆ. ಇದೆಲ್ಲವನ್ನೂ ಸನ್ಮಾನ್ಯಶ್ರೀ ರಾಹುಲ್‌ ಗಾಂಧಿ ಅವರಿಗೆ ಮುಟ್ಟಿಸುತ್ತೇನೆ’ ಎಂದು ಅವರು ತಿಳಿಸಿದರು.

‘ಬಿಜೆಪಿ ಸರ್ಕಾರ 23 ಸಾವಿರ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದೆ. ಮನೆಗಳ ಹಕ್ಕುಪತ್ರಗಳನ್ನೂ ಕೊಟ್ಟಿದೆ. ಕರ್ನಾಟಕದಲ್ಲಿ ಮತ್ತೊಮ್ಮೆ ಕಮಲ ಅರಳಿಸುವುದೇ ಜನರ ಸಂಕಲ್ಪವಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.