
ಬೆಂಗಳೂರು: ‘ಮಾದಕ ವಸ್ತುಗಳ ಮಾರಾಟದ ಅಡ್ಡೆಗಳಿಗೆ ರಾಜ್ಯ ಸರ್ಕಾರದ ಕುಮ್ಮಕ್ಕಿದೆ. ಇದರ ಪರಿಣಾಮ ಗಂಧದ ನಾಡಾಗಿದ್ದ ಕರ್ನಾಟಕ ಈಗ ಗಾಂಜಾದ ಬೀಡಾಗಿದೆ’ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.
‘ಗೊತ್ತಿಲ್ಲ ಸಚಿವರೇ ರಾಜೀನಾಮೆ ಕೊಟ್ಟು ನಡೆಯಿರಿ’ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮಾದಕ ದ್ರವ್ಯದ ದೆಸೆಯಿಂದ ವಿದ್ಯಾರ್ಥಿಗಳು ಕಾಲೇಜಿಗೆ ಕಾಲಿಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
‘ಗೃಹ ಸಚಿವರೇ ಸಬೂಬುಗಳನ್ನು ಹೇಳಿಕೊಂಡೇ ಎಷ್ಟು ದಿನ ಈ ರಾಜ್ಯವನ್ನು ಹಾಳು ಮಾಡುತ್ತೀರಿ? ನೀವು ಅಧಿಕಾರ ಬಿಟ್ಟು ಕೊಡಿ. ಇಲ್ಲವೇ ಬೇರೆ ಯಾರಿಗಾದರೂ ತಾಕತ್ತಿದ್ದವರಿಗೆ ಆಡಳಿತ ನಡೆಸಲು ಬಿಡಿ. ಇದು ನಿಮ್ಮ ಅಸಹಾಯಕತೆಯೇ ಅಥವಾ ಬೇರೆಯವರು ನಿಮಗೆ ಕೆಟ್ಟ ಹೆಸರು ತರಲು ಷಡ್ಯಂತ್ರ ಮಾಡಿದ್ದಾರೆಯೇ ಎಂಬುದಕ್ಕೆ ನೀವೇ ಉತ್ತರ ನೀಡಬೇಕು’ ಎಂದು ಆಗ್ರಹಿಸಿದರು.
‘ರಾಜ್ಯದಲ್ಲಿ ಡ್ರಗ್ಸ್ ಕಾರ್ಖಾನೆಗಳು ತಲೆ ಎತ್ತಿರುವುದು ಬಯಲಾಗಿದೆ. ಇದರಿಂದ ಇಡೀ ರಾಜ್ಯದಲ್ಲಿ ಸಂಚಲನವೇ ಸೃಷ್ಟಿಯಾಗಿದೆ. ಈ ಮಾಫಿಯಾಕ್ಕೆ ಸಂಪೂರ್ಣ ಅವಕಾಶ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರವೇ ಡ್ರಗ್ ಸರ್ಕಾರವಾಗಿ ಮಾರ್ಪಟ್ಟಿದೆ. ಸಚಿವರು ಆಪ್ತರು ಭಾಗಿಯಾಗಿದ್ದಾರೆ. ಡ್ರಗ್ ಪೆಡ್ಲರ್‌ಗಳನ್ನು ಹಿಡಿಯದೇ ಸರ್ಕಾರ ಕಣ್ಮುಚ್ಚಿ ಕುಳಿತಿದೆ’ ಎಂದು ದೂರಿದರು.
‘ಮೈಸೂರು ಮತ್ತು ಬೆಂಗಳೂರಿನ ಮೂರು ಕಡೆಗಳಲ್ಲಿ ಮಾದಕ ವಸ್ತು ಕಾರ್ಖಾನೆಗಳ ಮೇಲೆ ಮಹಾರಾಷ್ಟ್ರ ಪೊಲೀಸರು ದಾಳಿ ಮಾಡಬೇಕಾಯಿತು. ಅಲ್ಲಿನ ಪೊಲೀಸರು ಪತ್ತೆ ಹಚ್ಚಿದ ಬಳಿಕ ನಾವೇ ಹಿಡಿದಿದ್ದೇವೆ ಎಂದು ತಿಳಿಸಿ ಘನಕಾರ್ಯ ಮಾಡಿದಂತೆ ವರ್ತಿಸುತ್ತಿದ್ದಾರೆ’ ಎಂದು ಛಲವಾದಿ ಟೀಕಿಸಿದರು.
ರಾಜ್ಯದಲ್ಲಿ ಕಾನೂನು–ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಹೇಳುತ್ತಲೇ ಬಂದಿದ್ದೇವೆ. ಹಲವು ನಿದರ್ಶನಗಳನ್ನೂ ನೀಡಿದ್ದೇವೆ. ಅತ್ಯಾಚಾರ, ದೌರ್ಜನ್ಯ, ಹತ್ಯೆಗಳು ನಡೆಯುತ್ತಿವೆ. ಇವುಗಳನ್ನು ತಡೆಯಲು ಸರ್ಕಾರಕ್ಕೆ ಆಗುತ್ತಿಲ್ಲ. ಸಾಮಾನ್ಯ ಜನರಿಗೆ ರಕ್ಷಣೆಯೇ ಇಲ್ಲವಾಗಿದೆ ಎಂದು ಹೇಳಿದರು.