ADVERTISEMENT

ಹಿಂದಿನ ಪಠ್ಯಪುಸ್ತಕಗಳನ್ನೇ ಮುಂದುವರಿಸಿ: ಸರ್ಕಾರಕ್ಕೆ ಈಶ್ವರ ಖಂಡ್ರೆ ಒತ್ತಾಯ‌

​ಪ್ರಜಾವಾಣಿ ವಾರ್ತೆ
Published 8 ಜೂನ್ 2022, 9:07 IST
Last Updated 8 ಜೂನ್ 2022, 9:07 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ   

ಹುಬ್ಬಳ್ಳಿ: ‘ಪರಿಷ್ಕರಣೆ ನೆಪದಲ್ಲಿ ಪಠ್ಯಪುಸಕ್ತಗಳ ಕೇಸರಿಕರಣ ಮಾಡಲಾಗುತ್ತಿದೆ. ಶಾಲಾ ಹಂತದಲ್ಲೇ ಮಕ್ಕಳಲ್ಲಿ ಜಾತೀಯತೆಯ ವಿಷಬೀಜವನ್ನು ಬಿತ್ತುವ ಪ್ರಯತ್ನ ನಡೆದಿದೆ. ಸರ್ಕಾರ ಪರಿಷ್ಕರಣೆಯಾಗಿರುವ ಪಠ್ಯವನ್ನು ಕಸದ ಬುಟ್ಟಿಗೆ ಎಸೆದು, ಹಿಂದಿನ ಪಠ್ಯಪುಸ್ತಕಗಳನ್ನೇ ಮುಂದುವರಿಸಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಒತ್ತಾಯಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಹಾಪುರುಷರ ಇತಿಹಾಸ ಹಾಗೂ ವಿಚಾರಧಾರೆಯನ್ನು ತಿರುಚಬಾರದು. ಬಸವಣ್ಣ, ಅಂಬೇಡ್ಕರ್, ಅವರಂತಹ ಮಹಾಪುರುಷರ ವಿಚಾರಧಾರೆಗಳನ್ನು ತಿರುಚಲು ಹೊರಟಿರುವುದು ತಪ್ಪು. ಅವರ ತತ್ವ –ಸಿದ್ದಾಂತಗಳು ಸಾರ್ವಕಾಲಿಕ’ ಎಂದರು.

‘ಜನರನ್ನು ಒಡೆದಾಳುವ ಹಾಗೂ ಜಾತಿ– ಧರ್ಮಗಳ ಮಧ್ಯೆ ಸಂಘರ್ಷ ಸೃಷ್ಟಿಸುವ ಕೆಲಸವನ್ನು ಆರೆಸ್ಸೆಸ್ ಮಾಡುತ್ತಿದೆ. ಇದನ್ನು ಸಾಂಕೇತಿಕವಾಗಿ ವಿರೋಧಿಸುವ ಸಲುವಾಗಿ ಚಡ್ಡಿಗಳನ್ನು ಸುಡುವುದಾಗಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಆದರೆ, ಬಿಜೆಪಿಯವರು ಅವರ ಮನೆಗೆ ಚಡ್ಡಿಗಳನ್ನು ಒಯ್ದು ಪ್ರತಿಭಟಿಸಿರುವುದು ಖಂಡನೀಯ’ ಎಂದು ಹೇಳಿದರು.

ADVERTISEMENT

ವೀರಶೈವ– ಲಿಂಗಾಯತ ಒಂದೇ: ‘ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ. ಈ ಮಾತನ್ನು ಹಲವು ಸ್ವಾಮೀಜಿಗಳು ಹಾಗೂ ಮುಖಂಡರು ಈಗಾಗಲೇ ಉಚ್ಛರಿಸಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ಬಸವಣ್ಣನ ವಿಚಾರಧಾರೆಯ ಪ್ರಚಾರದೊಂದಿಗೆ ಸಮುದಾಯದ ಪ್ರಗತಿಗೆ ಶ್ರಮಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.