ADVERTISEMENT

Karnataka Election 2023 | ಲಿಂಗಾಯತ ಮತ ಬ್ಯಾಂಕ್ ಹಿಡಿದಿಡಲು ಬಿಜೆಪಿ ಕಸರತ್ತು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 0:00 IST
Last Updated 1 ಮಾರ್ಚ್ 2023, 0:00 IST
   

ಬೆಂಗಳೂರು: ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸದ ಕಾರಣ ವೀರಶೈವ– ಲಿಂಗಾಯತ ಮತ ಬ್ಯಾಂಕ್‌ ಪಕ್ಷದ ಕೈ ಹಿಡಿಯುತ್ತದೆಯೇ ಇಲ್ಲವೇ ಎಂಬ ಆತಂಕ ಬಿಜೆಪಿಯನ್ನು ಕಾಡಲಾರಂಭಿಸಿದೆ.

ಬಿಜೆಪಿಯಿಂದ ಈ ಸಮುದಾಯ ದೂರಸರಿಯಲೂ ಬಹುದು ಎಂಬ ಸುಳಿವು ಸಿಕ್ಕ ಬೆನ್ನಲ್ಲೇ ಎಚ್ಚೆತ್ತ ಪಕ್ಷದ ವರಿಷ್ಠರು ಬಿ.ಎಸ್‌.ಯಡಿಯೂರಪ್ಪ ಅವರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾರಂಭಿದ್ದಾರೆ. ಸಂಸದೀಯ ಮಂಡಳಿಯಲ್ಲಿ ಸದಸ್ಯ ಸ್ಥಾನ ನೀಡುವುದರ ಜತೆಗೆ, ರಾಜ್ಯದ ಉದ್ದಗಲ ಎಲ್ಲ ಕಾರ್ಯಕ್ರಮಗಳಲ್ಲಿ ಅವರನ್ನು ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಅದರ ಭಾಗವಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮದಲ್ಲೂ ಭಾಗವಹಿಸಿ, ಅವರನ್ನು ಆತ್ಮೀಯವಾಗಿ ಮತ್ತು ಹೆಚ್ಚಿನ ಗೌರವದಿಂದ ನಡೆಸಿಕೊಂಡರು ಎನ್ನಲಾಗಿದೆ.

ಒಂದು ವೇಳೆ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಿ, ಅವರ ಪುತ್ರ ವಿಜಯೇಂದ್ರ ಅವರಿಗೆ ಟಿಕೆಟ್‌ ನೀಡದೇ ಇದ್ದರೆ ಈ ಸಮುದಾಯ ಬಿಜೆಪಿಯಿಂದ ಪೂರ್ಣ ಪ್ರಮಾಣದಲ್ಲಿ ದೂರ ಸರಿಯುವ ಸಾಧ್ಯತೆ ಇದೆ ಎಂಬ ಮಾಹಿತಿಯೂ ವರಿಷ್ಠರನ್ನು ತಲುಪಿದೆ. ವೀರಶೈವ– ಲಿಂಗಾಯತ ಸಮುದಾಯದ ಅಸಮಾಧಾನವನ್ನು ತಣಿಸಲು ಎಚ್ಚರಿಕೆ ಹೆಜ್ಜೆ ಇಡುತ್ತಿರುವ ಪಕ್ಷದ ವರಿಷ್ಠರು ಈ ಮತ ಬ್ಯಾಂಕ್‌ ಅಲುಗಾಡದಿರುವಂತೆ ಮಾಡಲು ಶತಪ್ರಯತ್ನ ಹಾಕುತ್ತಿದ್ದಾರೆ.

ADVERTISEMENT

ಈ ಸಮುದಾಯದ ಹೆಚ್ಚು ಮತ ಕಮಲದ ನೆರಳಿನಿಂದ ದೂರ ಸರಿದರೆ ಕಾಂಗ್ರೆಸ್‌ ಅನ್ನು ಪೂರ್ಣ ಪ್ರಮಾಣದಲ್ಲಿ ಬೆಂಬಲಿಸುವ ಸಾಧ್ಯತೆಯೂ ಇಲ್ಲ. ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿರುವ ಈ ಸಮುದಾಯಕ್ಕೆ ಸೇರಿದ ಪ್ರಬಲ ಅಭ್ಯರ್ಥಿಗಳಿಗೆ ಮಾತ್ರ ಮತ ಹಾಕುವ ಸಾಧ್ಯತೆ ಹೆಚ್ಚು. ಇದರಿಂದ ಕಮಲ ಪಾಳಯಕ್ಕೆ ನಷ್ಟ ಆಗಲಿದೆ ಎಂದು ಆ ಪಕ್ಷದ ಮುಖಂಡರೊಬ್ಬರು ಅಭಿಪ್ರಾಯಪಡುತ್ತಾರೆ.

‘ಬಸವರಾಜ ಬೊಮ್ಮಾಯಿ ಅವರು ಲಿಂಗಾಯತ ಸಮುದಾಯಕ್ಕೆ ಸೇರಿದ್ದರೂ, ಯಡಿಯೂರಪ್ಪ ಅವರ ಜಾಗವನ್ನು ತುಂಬಲು ಸಾಧ್ಯವಾಗಿಲ್ಲ. ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟ ಬಳಿಕ ಲಿಂಗಾಯತ ಸಮುದಾಯಕ್ಕೆ ದೊಡ್ಡ ಪ್ರಮಾಣದ ಅನ್ಯಾಯವನ್ನೇನೂ ಬಿಜೆಪಿ ಮಾಡಿಲ್ಲ. ವೀರಶೈವ– ಲಿಂಗಾಯತ, ಪರಿಶಿಷ್ಟ ಜಾತಿ (ಎಡ), ಪರಿಶಿಷ್ಟವರ್ಗ, ಇತರ ಹಿಂದುಳಿದ ವರ್ಗದ ಮತಗಳನ್ನು ಭದ್ರಪಡಿಸಿಕೊಂಡರೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬಹುದು ಚರ್ಚೆಯೂ ಪಕ್ಷದಲ್ಲಿ ನಡೆದಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.