ADVERTISEMENT

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ; ಸಿ.ಟಿ.ರವಿ ‘ಏಕಚಕ್ರಾಧಿಪತ್ಯ’ ಅಂತ್ಯಕ್ಕೆ ಯತ್ನ

ಜಾತಿ ಲೆಕ್ಕಾಚಾರ ಜೋರು

ಬಿ.ಜೆ.ಧನ್ಯಪ್ರಸಾದ್
Published 24 ಫೆಬ್ರುವರಿ 2023, 22:45 IST
Last Updated 24 ಫೆಬ್ರುವರಿ 2023, 22:45 IST
ಸಿ.ಟಿ.ರವಿ
ಸಿ.ಟಿ.ರವಿ   

ಚಿಕ್ಕಮಗಳೂರು: ಸತತ ನಾಲ್ಕು ಬಾರಿ ಗೆದ್ದಿರುವ ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ‘ಏಕಚಕ್ರಾಧಿಪತ್ಯ ಭೇದಿಸುವ’ ಉಮೇದಿನಲ್ಲಿ ಕಾಂಗ್ರೆಸ್‌ ಇದೆ.

ರವಿ ವಿರುದ್ಧ ತಿರುಗಿಬಿದ್ದಿರುವ ಅವರ ಆಪ್ತ, ನಗರಸಭೆ ಮಾಜಿ ಅಧ್ಯಕ್ಷ ಎಚ್‌.ಡಿ. ತಮ್ಮಯ್ಯ ಈಚೆಗೆ ಕಾಂಗ್ರೆಸ್‌ ಸೇರಿದ್ದಾರೆ. ತಮ್ಮಯ್ಯ, ಬಿ.ಎಚ್‌. ಹರೀಶ್‌, ಮಹಡಿಮನೆ ಸತೀಶ್‌, ಗಾಯತ್ರಿ ಶಾಂತೇಗೌಡ, ರೇಖಾ ಹುಲಿಯಪ್ಪಗೌಡ, ಎ.ಎನ್‌. ಮಹೇಶ್‌, ನಯಾಜ್‌, ಡಾ.ಡಿ.ಎಲ್‌. ವಿಜಯಕುಮಾರ್‌ ಅವರು ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.
ಈ ಪೈಕಿ ಗಾಯತ್ರಿ ಮತ್ತು ತಮ್ಮಯ್ಯ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿಲ್ಲ.

ಸಿ.ಟಿ. ರವಿ ಒಕ್ಕಲಿಗ ಸಮುದಾಯದವರು. 1999ರ ಚುನಾವಣೆಯಲ್ಲಿ ರವಿ ಅವರು ಸಗೀರ್‌ ಅಹಮದ್‌ ವಿರುದ್ಧ ಸೋಲುಂಡಿದ್ದರು. ಮೂರು ಬಾರಿ (1989, 1994 ,1999) ಗೆದ್ದಿದ್ದ ಸಗೀರ್‌ ಅವರನ್ನು 2004ರ ಚುನಾವಣೆಯಲ್ಲಿ ಸೋಲಿಸಿ ರವಿ ವಿಧಾನಸಭೆ ಪ್ರವೇಶಿಸಿದರು.

ADVERTISEMENT

ಕ್ಷೇತ್ರದಲ್ಲಿ ಬಿಜೆಪಿಯ ವ್ಯವಸ್ಥಿತ ಸಂಪರ್ಕ ಜಾಲ ಇದೆ. ಮತಬೇಟೆಯಲ್ಲಿ ‘ದತ್ತ ಪೀಠ’, ‘ಹಿಂದುತ್ವ’, ‘ಕ್ಷೇತ್ರದ ಅಭಿವೃದ್ಧಿ’ ವಿಚಾರಗಳು ಬಿಂಬಿತವಾಗುತ್ತವೆ. ಇದು ರವಿ ಅವರ ಬಲ.

ಬಿಜೆಪಿ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದ ತಮ್ಮಯ್ಯ ಅವರು, ಟಿಕೆಟ್‌ ಸಿಗುವುದಿಲ್ಲ ಎಂಬುದು ಖಾತ್ರಿಯಾಗಿ ಪಕ್ಷದಿಂದ ಹೊರನಡೆದರು. ಬೇರಾರೂ ಟಿಕೆಟ್‌ಗಾಗಿ ತುಟಿಬಿಚ್ಚಿಲ್ಲ. ಬಿಜೆಪಿಯಲ್ಲಿ ರವಿ ಅವರೇ ಏಕತ್ರ ಎಂಬಂತಿದೆ.

ಕ್ಷೇತ್ರದ ದೊಡ್ಡ ಸಮುದಾಯಗಳಲ್ಲಿ ವೀರಶೈವ– ಲಿಂಗಾಯತ ಸಮುದಾಯವೂ ಒಂದು. ತಮ್ಮಯ್ಯ, ಹರೀಶ್‌, ಮಹಡಿಮನೆ ಸತೀಶ್‌ ಈ ಸಮುದಾಯದವರು. ವೀರಶೈವ– ಲಿಂಗಾಯತ ಅಥವಾ ಕುರುಬ ಸಮುದಾಯದವರಿಗೆ ಟಿಕೆಟ್‌ ನೀಡುವ ಲೆಕ್ಕಾಚಾರ ಇದೆ.

‘ಲಿಂಗಾಯತ ಸಮುದಾಯದ ಮೂವರು ಟಿಕೆಟ್‌ಗಾಗಿ ಬಿಗಿಪಟ್ಟು ಹಿಡಿದಿದ್ದು, ಈ ಪೈಕಿ ಯಾರು ಹಿತವರು ಎಂದು ಪಕ್ಷ ಸಮೀಕ್ಷೆ ಕಾರ್ಯದಲ್ಲಿ ತೊಡಗಿದೆ. ಈ ಮೂವರೂ ಪಟ್ಟು ಸಡಿಲಿಸದಿದ್ದರೆ ಕುರುಬ ಸಮುದಾಯದವರಿಗೆ (ಗಾಯತ್ರಿ, ರೇಖಾ, ಮಹೇಶ್‌) ಟಿಕೆಟ್‌ ಒಲಿಯುವ ಸಾಧ್ಯತೆ ಇದೆ’ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

2.20 ಲಕ್ಷ ಮತದಾರರು ಇದ್ದಾರೆ. ಎಸ್‌ಸಿ, ವೀರಶೈವ–ಲಿಂಗಾಯತ, ಮುಸ್ಲಿಂ, ಕುರುಬ, ಒಕ್ಕಲಿಗ, ಶೆಟ್ಟರು ಸಮುದಾಯದವರು ಹೆಚ್ಚು ಇದ್ದಾರೆ.

‘ಹಿಜಾಬ್‌’, ‘ಹಲಾಲ್‌’ ವಿಚಾರ, ರವಿ ಅವರು ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರನ್ನು ‘ಕಚ್ಚೆ ಹರುಕ’, ‘ಸಿದ್ರಾಮುಲ್ಲಾ ಖಾನ್‌’ ಎಂದು ಗೇಲಿ ಮಾಡಿರುವುದು, ಎಚ್‌.ಡಿ. ದೇವೇಗೌಡ ಅವರಿಗೆ ಸಾಬರಾಗಿ ಹುಟ್ಟಲು ತಡ ಏಕೆ ಈಗಲೇ ಹೋಗಿ...’ ಎಂದು ಕಿಚಾಯಿಸಿರುವುದು ಮೊದಲಾದ ಅಂಶಗಳು ರವಿ ಅವರಿಗೆ ಮುಳುವಾಗಿ, ತಮ್ಮ ಪಕ್ಷಕ್ಕೆ ಅನುಕೂಲಸಿಂಧುವಾಗಿ ಪರಿಣಮಿಸಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್‌ನದ್ದು.

****

ರಾಜ್ಯ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸಿದ್ದೇವೆ. ಎದುರಾಳಿ ಪಕ್ಷದವರು ಯಾರನ್ನು ಕಣಕ್ಕಿಳಿಸಿದರೂ ಸಮರ್ಥವಾಗಿ ಎದುರಿಸಲು ಸಜ್ಜಾಗಿದ್ದೇವೆ

-ಸಿ.ಟಿ.ರವಿ,ಶಾಸಕ

****

ಪಕ್ಷದಿಂದ ಟಿಕೆಟ್‌ ಸಿಗುತ್ತದೆ ಎಂಬ ಭರವಸೆ ಇದೆ. ಯಾರಿಗೆ ಟಿಕೆಟ್‌ ನೀಡಿದರೂ ಅವರ ಬೆಂಬಲಕ್ಕೆ ನಿಲ್ಲುತ್ತೇನೆ. ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ.

-ಬಿ.ಎಚ್‌.ಹರೀಶ್‌, ಟಿಕೆಟ್‌ ಆಕಾಂಕ್ಷಿ, ಕಾಂಗ್ರೆಸ್‌

****

ಪಕ್ಷವು ಸಮೀಕ್ಷೆ ಮಾಡಿಸಿ ವರದಿ ಪಡೆದುಕೊಂಡಿದೆ. ಸ್ಪರ್ಧಿಸುವ ಇಚ್ಛೆ ಇದೆ. ಯಾರಿಗೆ ಟಿಕೆಟ್‌ ನೀಡಿದರೂ ಒಕೆ. ರವಿ ಅವರನ್ನು ಸೋಲಿಸುವುದೇ ಗುರಿ.

-ಎ.ವಿ. ಗಾಯತ್ರಿ ಶಾಂತೇಗೌಡ, ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ

****

ಬೇಷರತ್ತಾಗಿ ಕಾಂಗ್ರೆಸ್‌ ಸೇರಿದ್ದೇನೆ. ವರಿಷ್ಠರು ಜನಾಭಿಪ್ರಾಯ ಸಂಗ್ರಹಿಸಿ ಟಿಕೆಟ್‌ ಯಾರಿಗೆ ಎಂಬುದನ್ನು ನಿರ್ಧರಿಸುತ್ತಾರೆ. ‘ಕಿಂಗ್’, ‘ಕಿಂಗ್‌ ಮೇಕರ್‌’ ಎರಡಕ್ಕೂ ಸಿದ್ಧ ಇದ್ದೇನೆ.

-ಎಚ್.ಡಿ.ತಮ್ಮಯ್ಯ , ಟಿಕೆಟ್‌ ಆಕಾಂಕ್ಷಿ, ಕಾಂಗ್ರೆಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.