ADVERTISEMENT

Karnataka Elections | ಕೋಲಾರ ಕ್ಷೇತ್ರ: ಸಿದ್ದರಾಮಯ್ಯ ‘ವಾರ್‌ ರೂಂ’ ಸಿದ್ಧ!

ಕೋಲಾರ ಕ್ಷೇತ್ರ: ಚುನಾವಣಾ ಪ್ರಚಾರ–ನಿರ್ವಹಣೆಗೆ ತಂಡ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2023, 13:46 IST
Last Updated 13 ಫೆಬ್ರುವರಿ 2023, 13:46 IST
   

ಕೋಲಾರ: ಚುನಾವಣೆ ಸಮೀಪಿಸುತ್ತಿರುವಂತೆ ಕೋಲಾರ ವಿಧಾನಸಭಾ ಕ್ಷೇತ್ರದ ರಾಜಕೀಯ ಚಟುವಟಿಕೆಗಳು ರಂಗು ಪಡೆಯುತ್ತಿದ್ದು, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಮ್ಮ ಚುನಾವಣಾ ತಂತ್ರಗಾರಿಕೆಯ ‘ವಾರ್‌ ರೂಂ’ಗೆ ಚಾಲನೆ ನೀಡಿದರು.

ಈಗಾಗಲೇ ಅವರಿಗೆ ಕ್ಷೇತ್ರದಲ್ಲಿ ವಾಸ್ತವ್ಯಕ್ಕೆಂದು ವಿಶಾಲವಾದ ಬಾಡಿಗೆ ಮನೆಯೊಂದನ್ನು ಸಿದ್ಧಪಡಿಸಲಾಗಿದೆ. ಇದರೊಂದಿಗೆ ಅವರು ಎಲ್ಲರಿಗಿಂತ ಮೊದಲೇ ಚುನಾವಣಾ ಪ್ರಚಾರ ಅಖಾಡಕ್ಕೆ ಸಿದ್ಧಮಾಡಿಕೊಂಡಿದ್ದಾರೆ.

ಟೇಕಲ್‌ ರಸ್ತೆಯ ಸಮೃದ್ಧಿ ಬಡಾವಣೆಯಲ್ಲಿರುವ ಸುಸಜ್ಜಿತ ‘ವಾರ್‌ ರೂಮ್‌’ನಲ್ಲಿ ಕ್ಷೇತ್ರದ ಚುನಾವಣಾ ಕೆಲಸ, ಪ್ರಚಾರದ ಯೋಜನೆ ರೂಪಿಸಲಾಗುತ್ತದೆ. ಬೆಂಗಳೂರಿನ ಚುನಾವಣಾ ತಂತ್ರಗಾರಿಕೆ ತಂಡ ‘ಪೋಲ್ ಹೌಸ್‌’ ಕ್ಷೇತ್ರದ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದು ಮುಂದಿನ ಮೂರು ತಿಂಗಳು ಈ ವಾರ್ ರೂಂ ನಿರ್ವಹಿಸಲಿದೆ.

ADVERTISEMENT

‘ನಾನು ಕೋಲಾರ ಕ್ಷೇತ್ರದಿಂದಲೇ ಕಣಕ್ಕಿಳಿಯುತ್ತಿದ್ದೇನೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ಬಿಜೆಪಿ ಹಾಗೂ ಜೆಡಿಎಸ್‌ನಿಂದ ಯಾರಾದರೂ ಅಭ್ಯರ್ಥಿ ಹಾಕಲಿ. ಎದುರಾಳಿ ಯಾರು ಎಂಬುದು ನನಗೆ ಮುಖ್ಯವಲ್ಲ. ಕಾಂಗ್ರೆಸ್‌ನ ಸ್ಥಳೀಯ ಶಾಸಕರು, ಮುಖಂಡರು ನನ್ನನ್ನು ಗೆಲ್ಲಿಸಿ ಕೊಡುತ್ತಾರೆ’ ಎಂದು ಸಿದ್ದರಾಮಯ್ಯ ಹೇಳಿದರು.

ದಲಿತರಿಗೆ ಅನ್ಯಾಯವಾಗಿದೆ ಎಂದು ಕೆಲ ದಲಿತ ಸಂಘಟನೆಗಳು ಕರಪತ್ರ ಹಂಚುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ‘ಬಿಜೆಪಿ, ಆರ್‌ಎಸ್‌ಎಸ್‌ ಹಾಗೂ ಜೆಡಿಎಸ್‌ನವರು ಷಡ್ಯಂತರ ನಡೆಸಿ ನನ್ನ ವಿರುದ್ಧ ಕರಪತ್ರ ಹಂಚುತ್ತಿದ್ದಾರೆ. ಇದಕ್ಕೆಲ್ಲಾ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಏನು ಕೆಲಸ ಮಾಡಿದ್ದೇನೆ ಎಂಬುದು ದಲಿತ ಸಮುದಾಯದವರಿಗೆ ಗೊತ್ತಿದೆ’ ಎಂದು ತಿರುಗೇಟು ನೀಡಿದರು.

ಶಾಸಕರಾದ ಕೆ.ಶ್ರೀನಿವಾಸಗೌಡ, ಬೈರತಿ‌ ಸುರೇಶ್, ಕೆ.ಆರ್‌.ರಮೇಶ್‌ ಕುಮಾರ್‌, ವಿಧಾನ ಪರಿಷತ್ ಸದಸ್ಯರಾದ ನಜೀರ್ ಅಹಮದ್‌, ಎಂ.ಎಲ್‌.ಅನಿಲ್‌ ಕುಮಾರ್‌, ಮಾಜಿ ಸಚಿವ ಎಂ.ಆರ್‌.ಸೀತಾರಾಂ, ಮಾಜಿ ಸಭಾಪತಿ ವಿ.ಆರ್ ಸುದರ್ಶನ್ ಇದ್ದರು.

ವಾರ್‌ ರೂಂ ವಿಶೇಷವೇನು?

* ಬೆಂಗಳೂರಿನ ಪೋಲ್‌ ಹೌಸ್‌ ಏಜೆನ್ಸಿ ನಿರ್ವಹಣೆ
* ವಾರ್‌ ರೂಂನಲ್ಲಿ 25ರಿಂದ 30 ತಂಡ
* 30x60 ವಿಸ್ತೀರ್ಣ ಎರಡು ಮಹಡಿಯ ಕಟ್ಟಡ
* ವಿವಿಧ ರೀತಿಯ ಸಮೀಕ್ಷೆ
* ಸಿದ್ದರಾಮಯ್ಯ ಬ್ರ್ಯಾಂಡಿಂಗ್‌, ಇಮೇಜ್‌ ಬಿಲ್ಡಿಂಗ್‌
* ಜನರಿಗೆ ಸಿದ್ದರಾಮಯ್ಯ ಅವರ ಯೋಜನೆ ತಲುಪಿಸುವುದು
* ಕ್ಷೇತ್ರದ ವಿವಿಧೆಡೆ ತಂಡ ತಿರುಗಾಟ
* ಡಿಜಿಟಲ್‌ ಮೂಲಕ ತಂತ್ರಗಾರಿಕೆ
* ಕಂಪ್ಯೂಟರ್‌, ವಿವಿಧ ರೀತಿ ಉಪಕರಣ ಅಳವಡಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.