ADVERTISEMENT

ಮಳೆ ಹಾನಿ: ₹130 ಕೋಟಿ ಪರಿಹಾರ- ಅಧಿಕಾರಿಗಳಿಗೆ ಬೊಮ್ಮಾಯಿ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 22:41 IST
Last Updated 19 ನವೆಂಬರ್ 2021, 22:41 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ರಾಜ್ಯದಲ್ಲಿ ಮಳೆಯಿಂದ ಉಂಟಾದ ಹಾನಿಯ ಪರಿಹಾರ ಕಾರ್ಯಕ್ಕಾಗಿ ತಕ್ಷಣವೇ ₹130 ಕೋಟಿ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕಳೆದ ಎರಡು ತಿಂಗಳಿಂದ ಸುರಿದ ಮಳೆಯಿಂದಾಗಿ ಉಂಟಾದ ಹಾನಿಯ ಕುರಿತು ಅವರು ಶುಕ್ರವಾರ ಸಂಜೆ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಸಿಇಒಗಳ ಜತೆ ವಿಡಿಯೊ ಸಂವಾದ ನಡೆಸಿದರು.

ಮಳೆಯಿಂದ ಹಾನಿಗೀಡಾದ ಮನೆಗಳಿಗೆ ತಕ್ಷಣವೇ ₹10 ಸಾವಿರಪರಿಹಾರ ನೀಡಬೇಕು. ಸಾಂತ್ವನ ಕೇಂದ್ರಗಳಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಬೇಕು. ಪರಿಹಾರ ಕಾರ್ಯಕ್ಕೆ ಈ ಹಿಂದಿನ ವರ್ಷಗಳಲ್ಲಿ ಹೊರಡಿಸಿರುವ ಮಾರ್ಗಸೂಚಿಗಳನ್ನೇ ಪಾಲಿಸಲು ಅವರು ಸಲಹೆ ನೀಡಿದರು ಎಂದು ಮೂಲಗಳು ಹೇಳಿವೆ.

ADVERTISEMENT

ಎಲ್ಲ ಜಿಲ್ಲಾಧಿಕಾರಿಗಳು ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ತಕ್ಷಣವೇ ಭೇಟಿ ನೀಡಬೇಕು. ಬೆಳೆ ಮತ್ತು ಇತರ ಹಾನಿಯ ಬಗ್ಗೆ ವಿಡಿಯೊ ಮಾಡಿಟ್ಟುಕೊಳ್ಳಬೇಕು. ಕೇಂದ್ರ ತಂಡ ಬರುವುದು ಇನ್ನೂ ಒಂದು ತಿಂಗಳಾಗಬಹುದು. ಆ ವೇಳೆಗೆ ಬೆಳೆಯೇ ಇರುವುದಿಲ್ಲ. ಆಗ ಅವರಿಗೆ ಹಾನಿಯ ಕುರಿತ ವಿಡಿಯೊ ನೀಡಬಹುದು ಎಂದು ಅಧಿಕಾರಿಗಳಿಗೆ ಕಂದಾಯ ಸಚಿವ ಆರ್.ಅಶೋಕ ಸಲಹೆ ನೀಡಿದರು ಎನ್ನಲಾಗಿದೆ.

ಮಳೆ ಮಧ್ಯದಲ್ಲಿ ಒಂದೆರಡು ದಿನ ಬಿಡುವು ಕೊಟ್ಟು ಮತ್ತೆ ನ.24 ರಿಂದ ಆರಂಭವಾಗುತ್ತದೆ. ತಿಂಗಳ ಕೊನೆಯವರೆಗೂ ಮಳೆಯಾಗುವ ಸಾಧ್ಯತೆ ಇರುವುದರಿಂದ ಯಾವುದೇ ಪರಿಸ್ಥಿತಿ ಎದುರಿಸಲು ಅಧಿಕಾರಿಗಳು ಸನ್ನದ್ಧರಾಗಿರಬೇಕು ಎಂದೂ ಸೂಚನೆ ನೀಡಿದರು.

ತಮಿಳುನಾಡು, ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಜಿಲ್ಲೆಗಳು, ಕರಾವಳಿ ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದರು.ಸಭೆಯಲ್ಲಿ ವಸತಿ ಸಚಿವ ವಿ.ಸೋಮಣ್ಣ, ತೋಟಗಾರಿಕಾ ಸಚಿವ ಮುನಿರತ್ನ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್‌.ಮಂಜುನಾಥ್‌ ಪ್ರಸಾದ್‌ ಇದ್ದರು.

ಹಾನಿ ವೀಕ್ಷಣೆಗೆ ಚುನಾವಣೆ ಅಡ್ಡಿ

‘ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಲು ಚುನಾವಣಾ ಆಯೋಗ ಬಿಡುತ್ತಿಲ್ಲ ಎಂದು ಸಚಿವ ಆರ್‌.ಅಶೋಕ ಅವರು ಸಭೆಯ ಗಮನಕ್ಕೆ ತಂದರು’ ಎಂದು ಮೂಲಗಳು ಹೇಳಿವೆ.

‘ಎಲ್ಲಿಗೂ ಹೋಗಲು ಅವಕಾಶ ನೀಡುತ್ತಿಲ್ಲ. ಇದರಿಂದ ವಾಸ್ತವ ಸ್ಥಿತಿಯ ಮಾಹಿತಿ ಪಡೆಯಲು ಸಾಧ್ಯವಾಗುತ್ತಿಲ್ಲ. ಹಾಸನಕ್ಕೆ ಹೋದಾಗ ಹಾನಿ ಪ್ರದೇಶದ ಭೇಟಿಗೆ ಮತ್ತು ಸಭೆ ನಡೆಸಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ಹಾನಿಗೀಡಾದ ಪ್ರದೇಶಕ್ಕೆ ಹೋಗದಿದ್ದರೆ ಹೇಗೆ ಎಂದು ಅವರು ಸಭೆಯಲ್ಲಿ ಪ್ರಶ್ನಿಸಿದರು’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.