ADVERTISEMENT

ಸಚಿವರಿಲ್ಲದ ಸರ್ಕಾರ: ಪರಿಹಾರ ಕಾರ್ಯಕ್ಕೆ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 20:15 IST
Last Updated 16 ಆಗಸ್ಟ್ 2019, 20:15 IST
   

ಬೆಂಗಳೂರು: ರಾಜ್ಯದ 18 ಜಿಲ್ಲೆಗಳು ಪ್ರವಾಹ ಪೀಡಿತವಾಗಿದ್ದು, ಪೂರ್ಣ ಪ್ರಮಾಣದಲ್ಲಿ ಸರ್ಕಾರ ರಚನೆ ಆಗದೇ ಸಚಿವರಿಲ್ಲದ ಕಾರಣ ಪರಿಹಾರ ಕಾರ್ಯಕ್ಕೆ ಹಿನ್ನಡೆಯಾಗಿದೆ.

ಪ್ರವಾಹ ಬಂದಾಗ ಬಹುತೇಕ ಎಲ್ಲ ಜಿಲ್ಲೆಗಳಿಗೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭೇಟಿ ನೀಡಿದ್ದಾರೆ. ಆದರೆ, ಚುನಾಯಿತ ಸರ್ಕಾರದ ಸಚಿವರಿಲ್ಲದ ಕಾರಣ ಸ್ಥಳದಲ್ಲಿ ಇದ್ದು ಪರಿಹಾರ ಕಾರ್ಯ ಚುರುಕಾಗಿ ನಡೆಯುತ್ತಿಲ್ಲ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಆದರೆ, ಈವರೆಗೂ ಪರಿಹಾರ ಕಾರ್ಯಕ್ಕಾಗಿ ಕೇಂದ್ರದಿಂದ ಒಂದು ಪೈಸೆಯೂ ಬಿಡುಗಡೆ ಮಾಡಿಲ್ಲ ಎಂದು ವಿರೋಧ ಪಕ್ಷಗಳ ನಾಯಕರು ಟೀಕಾ ಪ್ರಹಾರ ನಡೆಸುತ್ತಿದ್ದು, ಇದಕ್ಕೆ ಬಿಜೆಪಿ ನಾಯಕರ ಬಳಿ ಉತ್ತರವೇ ಇಲ್ಲ.

ADVERTISEMENT

ರಾಜ್ಯದಲ್ಲಿ ಇಷ್ಟು ದೊಡ್ಡ ಅನಾಹುತ ಆಗಿದ್ದರೂ, ಪ್ರಧಾನಿ ಮೋದಿ ಭೇಟಿ ನೀಡಿಲ್ಲ. ಹಿಂದೆ 2009 ರಲ್ಲಿ ರಾಜ್ಯದ ಉತ್ತರಕರ್ನಾಟಕ ಪ್ರದೇಶದಲ್ಲಿ ಪ್ರವಾಹ ಬಂದಾಗ ಅಂದಿನ ಪ್ರಧಾನಿ ಡಾ.ಮನಮೋಹನಸಿಂಗ್‌ ಭೇಟಿ ನೀಡಿದ್ದರು. ಬಿಜೆಪಿಯಿಂದ 25 ಶಾಸಕರನ್ನು ಕಳುಹಿಸಿಕೊಟ್ಟಿದ್ದರೂ ಮೋದಿ ಬೆಲೆಯೇ ನೀಡುತ್ತಿಲ್ಲ ಎಂದು ಕಾಂಗ್ರೆಸ್‌ ನಾಯಕರು ಹರಿಹಾಯ್ದಿದ್ದಾರೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಕೊಡಗು ಮತ್ತು ಮಲೆನಾಡು ಪ್ರದೇಶ ಮಳೆ, ಭೂಕುಸಿತ ಮತ್ತು ಪ್ರವಾಹದಿಂದ ತತ್ತರಿಸಿತ್ತು. ಆಗ ಎಚ್‌.ಡಿ.ಕುಮಾರಸ್ವಾಮಿ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ತಿಂಗಳು ಕಳೆದಿತ್ತು. ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿದ್ದ, ಸಾ.ರಾ.ಮಹೇಶ್‌ ಪರಿಹಾರ ಕಾರ್ಯದ ಉಸ್ತುವಾರಿ ನೋಡಿಕೊಂಡಿದ್ದರು.ಎಚ್‌.ಡಿ.ಕುಮಾರಸ್ವಾಮಿ ಕೊಡಗಿಗೆ 4 ರಿಂದ 5 ಬಾರಿ ಭೇಟಿ ನೀಡಿದ್ದರು.

ಆಗ ವಿರೋಧಪಕ್ಷದ ನಾಯಕ ರಾಗಿದ್ದ ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ಇತರ ನಾಯಕರಾದಡಿ.ವಿ.ಸದಾನಂದಗೌಡ, ಜಗದೀಶ ಶೆಟ್ಟರ್‌, ಶೋಭಾ ಕರಂದ್ಲಾಜೆ ಮುಂತಾದವರು ಕೊಡಗಿಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಪರಿಹಾರ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ ಮತ್ತು ಪರಿಹಾರದ ಮೊತ್ತವನ್ನೂ ಕಡಿಮೆ ನೀಡಲಾಗುತ್ತಿದೆ ಎಂದು ಆರೋಪಿಸಿದ್ದರು.

ಮುಖ್ಯಮಂತ್ರಿ ಪರಿಹಾರ ನಿಧಿಗೆ ಬಂದ ಹಣವನ್ನು ಸರಿಯಾಗಿ ಬಳಸುತ್ತಿಲ್ಲ. ಎನ್‌ಡಿಆರ್‌ಎಫ್‌ ಮಾರ್ಗಸೂಚಿಗಿಂತ ಹೆಚ್ಚು ಹಣ ನೀಡುತ್ತಿಲ್ಲ. ಇದರಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಯಡಿಯೂರಪ್ಪ ಆರೋಪಿಸಿದ್ದರು.

ಮುಖ್ಯಮಂತ್ರಿ ಪರಿಹಾರ ನಿಧಿಯ ದುರುಪಯೋಗ ನಡೆಯುತ್ತಿದೆ. ಎಷ್ಟು ಹಣ ಸಂಗ್ರಹವಾಗಿದೆ ಮತ್ತು ಎಷ್ಟು ಖರ್ಚಾಗಿದೆ ಎಂಬ ಲೆಕ್ಕ ನೀಡಬೇಕು. ಈ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಸಂಸದರಾದ ಶೋಭಾ ಕರಂದ್ಲಾಜೆ ಮತ್ತು ಪ್ರತಾಪಸಿಂಹ ಒತ್ತಾಯಿಸಿದ್ದರು. ಸಂತ್ರಸ್ತರಿಗೆ ನಿರ್ಮಿಸುತ್ತಿರುವ ಮನೆಗಳ ಗುಣಮಟ್ಟ ಕಳಪೆಯಾಗಿದೆ ಎಂದೂ ಶಾಸಕರಾದ ಕೆ.ಜೆ.ಬೋಪಯ್ಯ ಮತ್ತು ಅಪ್ಪಚ್ಚು ರಂಜನ್‌ ದೂರಿದ್ದರು.

ಆದರೆ, ಈ ಬಾರಿ ಕೊಡಗು ಜಿಲ್ಲೆಗೆ ಯಡಿಯೂರಪ್ಪ ಒಂದು ಬಾರಿಯೂ ಭೇಟಿ ನೀಡಿಲ್ಲ ಎಂಬ ದೂರು ಕೇಳಿ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.