ADVERTISEMENT

ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣ: ಎಸ್‌ಐಟಿ ತನಿಖೆಗೆ ರಾಜ್ಯ ಸರ್ಕಾರ ಆದೇಶ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 20:44 IST
Last Updated 10 ಮಾರ್ಚ್ 2021, 20:44 IST
   

ಬೆಂಗಳೂರು: ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ವಿರುದ್ಧದ ಸಿ.ಡಿ ಪ್ರಕರಣದ ಹಿಂದಿನ ‘ಷಡ್ಯಂತ್ರ’ ಬಯಲಿಗೆಳೆಯಲು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು(ಎಸ್‌ಐಟಿ) ರಚಿಸಿದೆ.

‘ಸಿ.ಡಿ ಪ್ರಕರಣದ ಷಡ್ಯಂತ್ರದ ಹಿಂದಿರುವ ವ್ಯಕ್ತಿಗಳು ಯಾರು, ಅವರ ಉದ್ದೇಶಗಳೇನು ಎಂಬ ಬಗ್ಗೆ ಕೂಲಂಕಷ ತನಿಖೆಗಾಗಿ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

‘ರಮೇಶ ಜಾರಕಿಹೊಳಿ ನನಗೆ ಪತ್ರ ಬರೆದಿದ್ದು, ಅದರಲ್ಲಿ ಅವರ ವಿರುದ್ಧ ಇದೇ 2 ರಂದು ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ದೂರು ದಾಖಲಾಗಿರುವ ಬಗ್ಗೆ ತಿಳಿಸಿದ್ದಾರೆ. ರಾಜಕೀಯ ತೇಜೋವಧೆ ಹಾಗೂ ಮಾನಹಾನಿ ಮಾಡುವ ಉದ್ದೇಶದಿಂದ ಹಲವರು ಸೇರಿ ತಮ್ಮ ವಿರುದ್ಧ ಷಡ್ಯಂತ್ರ ರೂಪಿಸಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿ ಆದೇಶಿಸಲಾಗಿದೆ’ ಎಂದಿದ್ದಾರೆ.

ADVERTISEMENT

ಈ ಕುರಿತು ತನಿಖೆ ನಡೆಸಬೇಕು ಎಂದು ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದರು.

ವಿದೇಶಿ ಸಂಸ್ಥೆಯಿಂದ ತನಿಖೆ?: ‘ಪ್ರಕರಣದ ಬಗ್ಗೆ ಜಾರಕಿಹೊಳಿ ಕುಟುಂಬ, ವಿದೇಶಿ ಗೂಢಚಾರ ಸಂಸ್ಥೆ ಮೂಲಕ ಸ್ವತಂತ್ರ ತನಿಖೆ ನಡೆಸುತ್ತಿದೆ. ಡಿಜಿಟಲ್‌ ಮತ್ತು ಸೈಬರ್‌ ರಹಸ್ಯಗಳನ್ನು ಬಯಲಿಗೆಳೆಯುವಲ್ಲಿ ಪರಿಣಿತವಾಗಿರುವ ಸಂಸ್ಥೆ
ಯ ಮೂಲಕ ಸಾಕಷ್ಟು ಮಾಹಿತಿ ಸಂಗ್ರಹಿಸಲಾಗಿದೆ. ಸಾಕ್ಷ್ಯ ಸಂಗ್ರಹವಾದ ಬಳಿಕ ನಿರ್ದಿಷ್ಟ ವ್ಯಕ್ತಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಲು ರಮೇಶ ನಿರ್ಧರಿಸಿದ್ದಾರೆ’ ಎಂದು ಜಾರಕಿಹೊಳಿ ಆಪ್ತ ಮೂಲಗಳು ಹೇಳಿವೆ.

ಸಿ.ಡಿ ನಕಲಿ ಆಗಿದ್ದರೆ ತನಿಖೆ ಏಕೆ?
‘ಅವರು( ರಮೇಶ ಜಾರಕಿಹೊಳಿ) ನಕಲಿ ಸಿ.ಡಿ ಎನ್ನುತ್ತಿದ್ದಾರೆ. ನಕಲಿ ಆಗಿದ್ದರೆ ತನಿಖೆ ಏಕೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪ್ರಶ್ನಿಸಿದ್ದಾರೆ.

‘ನೀವು ಸರಿ ಇದ್ದರೆ ನಿಮ್ಮನ್ನು ಯಾಕೆ ಸಿಕ್ಕಿಸುತ್ತಾರೆ. ಶರ್ಟ್‌, ಪ್ಯಾಂಟ್‌ ಬಿಚ್ಚಿ ಎಂದು ಕಾಂಗ್ರೆಸ್‌ನವರು ಹೇಳಿದ್ದರಾ? ಯಡಿಯೂರಪ್ಪ ಭ್ರಷ್ಟಚಾರಿ ಎಂದು ವಿಡಿಯೊದಲ್ಲಿ ಹೇಳಿರುವ ಅವರು, ಕನ್ನಡಿಗರನ್ನು ಅವಹೇಳನ ಮಾಡಿದ್ದಾರೆ’ ಎಂದಿದ್ದಾರೆ.

ಅಪ್ಪ–ಮಗನ ಸಿ.ಡಿಗಳೂ ಬರಲಿವೆ
‘ಎರಡೂ ಪಕ್ಷದ ನಾಯಕರು ಸೇರಿ ರಮೇಶ ಜಾರಕಿಹೊಳಿ ಸಿ.ಡಿ ಬಿಡುಗಡೆ ಮಾಡಿದ್ದಾರೆ. ಅವರು ಸುಮ್ಮನಿರುವುದಿಲ್ಲ. ರಾಜ್ಯದ ಆಡಳಿತ ನಡೆಸುತ್ತಿರುವ ಅಪ್ಪ–ಮಗ ಸೇರಿದಂತೆ 23 ನಾಯಕರ ಸಿ.ಡಿಗಳೂ ಹೊರ ಬರಲಿವೆ’ ಎಂದು ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

‘ಎಲ್ಲ ಸಿ.ಡಿಗಳನ್ನೂ ರಮೇಶ ಅವರೇ ಬಿಡುಗಡೆ ಮಾಡಬಹುದು. ಸತ್ಯ ಯಾವತ್ತಿದ್ದರೂ ಹೊರಗೆ ಬರಲೇಬೇಕಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.