ADVERTISEMENT

ಸರ್ಕಾರದಿಂದ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ರಕ್ಷಣೆ: ಸಿದ್ದರಾಮಯ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2023, 19:56 IST
Last Updated 7 ಮಾರ್ಚ್ 2023, 19:56 IST
ಸಿದ್ದರಾಮಯ್ಯ
ಸಿದ್ದರಾಮಯ್ಯ    

ಬೆಂಗಳೂರು: ‘ರಾಜ್ಯ ಸರ್ಕಾರ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರ ರಕ್ಷಣೆ ಮಾಡುತ್ತಿದೆ. ಅವರನ್ನು ಈ ಕೂಡಲೇ ಬಂಧಿಸಬೇಕು‘ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಸರ್ಕಾರದ ಭ್ರಷ್ಟಾಚಾರಕ್ಕೆ ದಾಖಲೆ ಕೇಳುತ್ತಿದ್ದವರಿಗೆ ವಿರೂಪಾಕ್ಷಪ್ಪ ಮಾಡಾಳ್‌ ಅವರ ಮಗ ಲಂಚದ ಹಣದ ಸಮೇತ ಸಿಕ್ಕಿಬಿದ್ದಿರುವುದು ಸಾಕ್ಷಿ. ರಾಜೀನಾಮೆ ಕೊಡಲು ಬಂದ ದಿನವೇ ವಿರೂಪಾಕ್ಷಪ್ಪ ಮಾಡಾಳ್‌ ಬಂಧನ ಆಗಬೇಕಿತ್ತು. ಈಗಲೂ ಅವರು ಬೆಂಗಳೂರಿನಲ್ಲಿದ್ದುಕೊಂಡೇ ಜಾಮೀನಿಗೆ ಅರ್ಜಿ ಹಾಕಿದ್ದಾರೆ. ಇಂಥಾ ಭ್ರಷ್ಟ ಸರ್ಕಾರವನ್ನು ಕಿತ್ತುಹಾಕಲೇಬೇಕು‘ ಎಂದರು.

‘ಎಸಿಬಿ ರದ್ದು ಮಾಡಿ ಎಂದು ಸಲ್ಲಿಸಿದ್ದ ಮನವಿ ಬಗ್ಗೆ ರಾಜ್ಯದ ಅಡ್ವೋಕೇಟ್‌ ಜನರಲ್‌ ಅವರು ಕೋರ್ಟ್‌ನಲ್ಲಿ ಹಿಂದಿನ ಸರ್ಕಾರ ಎಸಿಬಿ ರಚನೆ ಮಾಡಿರುವುದು ಸರಿ ಎಂದು ನಮ್ಮ (ಕಾಂಗ್ರೆಸ್‌) ಸರ್ಕಾರದ ಎಸಿಬಿ ರಚನೆಯ ಸಮರ್ಥನೆ ಮಾಡಿದ್ದಾರೆ. ಬರೀ ಕರ್ನಾಟಕ ಮಾತ್ರವಲ್ಲ ದೇಶದ 16 ರಾಜ್ಯಗಳಲ್ಲಿ ಎಸಿಬಿ ಇದೆ ಎಂದು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದಾರೆ. ಅಡ್ವೊಕೇಟ್‌ ಜನರಲ್‌ ಅವರ ನಿಲುವು ಎಂದರೆ ಅದು ಸರ್ಕಾರದ ನಿಲುವು. ಕೋರ್ಟ್‌ನಲ್ಲಿ ಎಸಿಬಿಯನ್ನು ಸಮರ್ಥಿಸಿಕೊಂಡು, ಹೊರಗೆ ನಾವು ಎಸಿಬಿ ರದ್ದು ಮಾಡಿದ್ದೇವೆ ಎಂದು ಸುಳ್ಳು ಹೇಳುವುದು ಆತ್ಮವಂಚನೆಯಾಗುತ್ತದೆ. ನಮ್ಮ ಸರ್ಕಾರದ ಅವಧಿಯಲ್ಲಿ ವಿಶ್ವನಾಥ್‌ ಶೆಟ್ಟಿ ಅವರು ಲೋಕಾಯುಕ್ತರಾಗಿದ್ದರು. ಲೋಕಾಯುಕ್ತ ಎಲ್ಲಿ ರದ್ದಾಗಿತ್ತು‘ ಎಂದು ಪ್ರಶ್ನಿಸಿದರು,

ADVERTISEMENT

‘ಒಬ್ಬ ಶಾಸಕನ ಮಗನ ಮನೆಯಲ್ಲಿ ₹ 8 ಕೋಟಿ ಭ್ರಷ್ಟ ಹಣ ಸಿಕ್ಕಿದೆ ಎಂದರೆ ಇನ್ನು ಇಡೀ ಸರ್ಕಾರ ಎಷ್ಟು ಲೂಟಿ ಮಾಡಿರಬಹುದು. ಈ ಪ್ರಕರಣದಿಂದ ರಾಜ್ಯದಲ್ಲಿ ಶೇ 40 ಕಮಿಷನ್‌ ನಡೆಯುತ್ತಿದೆ ಎಂಬುದು ಸಾಬೀತಾಗಿದೆ. ನಿಮ್ಮದು ಶೇ 40 ಕಮಿಷನ್‌ ಸರ್ಕಾರ ಎಂದು ಹೇಳಲು ಇದಕ್ಕಿಂತ ಬೇರೆ ಯಾವ ಸಾಕ್ಷಿ ಬೇಕು ಬೊಮ್ಮಾಯಿಯವರೇ? ನಿಮಗೇನಾದರೂ ನೈತಿಕತೆ ಇದ್ದರೆ ಈ ಕೂಡಲೇ ರಾಜೀನಾಮೆ ನೀಡಬೇಕು. ಸಂತೋಷ್‌ ಪಾಟೀಲ್‌ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಈಶ್ವರಪ್ಪ ರಾಜೀನಾಮೆ ನೀಡಿದ್ರು, ಇನ್ನೊಬ್ಬ ಗುತ್ತಿಗೆದಾರ ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿದ್ದರು. ಇವು ಸಾಕ್ಷ್ಯ ಅಲ್ಲವೇ‘ ಎಂದೂ ವಾಗ್ದಾಳಿ ನಡೆಸಿದರು.

**

‘ಮಾಡಾಳ್‌ಗೆ ಸರ್ಕಾರದಿಂದಲೇ ರಕ್ಷಣೆ’
ಶಿವಮೊಗ್ಗ
: ‘ಸರ್ಕಾರದ ವಿರುದ್ಧ ಶೇ 40ರಷ್ಟು ಕಮಿಷನ್‌ ಆರೋಪ ಮಾಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರನ್ನು ಜೈಲಿಗೆ ಹಾಕಲಾಯಿತು. ಆದರೆ, ಲಂಚ ತಿಂದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಪ್ಪಿಸಿಕೊಂಡು ಓಡಾಡಿದರು. ಇದು ಬಿಜೆಪಿ ಸರ್ಕಾರದ ನೀತಿ’ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಟೀಕಿಸಿದರು.

ಹೊಳೆಬೆನವಳ್ಳಿಯಲ್ಲಿ ಮಂಗಳವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಗೆ ಗ್ಯಾರಂಟಿ ಕಾರ್ಡ್ ವಿತರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಕೆಂಪಣ್ಣ ಅವರನ್ನು ರಾತ್ರೋರಾತ್ರಿ ಬಂಧಿಸಲಾಗಿತ್ತು. ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಲುಕ್‌ ಔಟ್ ನೋಟಿಸ್ ಹೊರಡಿಸುವುದಾಗಿ ತಿಳಿಸಿ ಸರ್ಕಾರವೇ ಅವರನ್ನು ರಕ್ಷಿಸಿತು’ ಎಂದು ಆರೋಪಿಸಿದ ಅವರು, ‘ಸಚಿವರಾದ ವಿ. ಸೋಮಣ್ಣ, ಕೆ.ಸಿ. ನಾರಾಯಣಗೌಡ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವುದು ಖಚಿತ. ಅಂತೆಯೇ ಪಕ್ಷ ಬಿಡುವವರು ಬಿಟ್ಟು ಹೋಗಲಿ ಎಂದು ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ’ ಎಂದರು.

**

‘ತನಿಖಾ ವರದಿ ಬಂದ ನಂತರವೇ ಕ್ರಮ’
ಬೆಂಗಳೂರು:
‘ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿಲ್ಲ. ಪ್ರಾಥಮಿಕ ತನಿಖಾ ವರದಿ ಬರುವವರೆಗೂ ಉಚ್ಛಾಟನೆ ಮಾಡುವ ವ್ಯವಸ್ಥೆ ನಮ್ಮ ಪಕ್ಷದಲ್ಲಿ ಇಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ.

‘ನಮ್ಮಲ್ಲಿ ಮಾತ್ರವಲ್ಲ, ಯಾವುದೇ ಪಕ್ಷದಲ್ಲೂ ಆ ವ್ಯವಸ್ಥೆ ಇಲ್ಲ. ಪ್ರಾಥಮಿಕ ತನಿಖಾ ವರದಿ ಬಂದ ನಂತರ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಚನ್ನಗಿರಿಯಲ್ಲಿ ಶಾಸಕ ವಿರೂಪಾಕ್ಷಪ್ಪ ಅವರನ್ನು ಮೆರವಣಿಗೆಯಲ್ಲಿ ಒಯ್ದ ಬಗ್ಗೆ ಪ್ರಶ್ನಿಸಿದಾಗ, ‘ಡಿ.ಕೆ.ಶಿವಕುಮಾರ್‌ ಅವರು ದೆಹಲಿಯಿಂದ ಬಂದಾಗ ಮೆರವಣಿಗೆ ಮಾಡಿದ್ದು, ಅವರಿಗೆ ಮಾದರಿ ಎನಿಸಿರಬಹುದು. ಅವರು ಅದನ್ನು ಮಾದರಿಯಾಗಿ ತೆಗೆದುಕೊಳ್ಳ
ಬೇಕಿಲ್ಲ. ನಮ್ಮ ಪಕ್ಷದ ನಾಯಕರ ನಿಲುವನ್ನು ಅನುಸರಿಸಿದರೆ ಸಾಕು’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.