ADVERTISEMENT

ಶಿಕ್ಷಕರ ವರ್ಗಾವಣೆ: ಶೇ 25ರ ನಿಯಮ ರದ್ದುಪಡಿಸಿ

ಶಿಕ್ಷಕರ ಸಂಘದಿಂದ ಪ್ರಧಾನ ಕಾರ್ಯದರ್ಶಿಗೆ ಆಕ್ಷೇಪಣೆ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2020, 4:45 IST
Last Updated 25 ಜೂನ್ 2020, 4:45 IST
ಶಿಕ್ಷಕರ ವರ್ಗಾವಣೆ ಕಾಯ್ದೆಗೆ ಸಂಬಂಧಿಸಿದಂತೆ ಶಿಕ್ಷಕರ ಸಂಘ ಸಿದ್ಧಪಡಿಸಿದ ಆಕ್ಷೇಪಣಿಗಳನ್ನು ಬುಧವಾರ ಬೆಂಗಳೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್‌.ಉಮಾಶಂಕರ್ ಅವರಿಗೆ ಸಲ್ಲಿಸಲಾಯಿತು.
ಶಿಕ್ಷಕರ ವರ್ಗಾವಣೆ ಕಾಯ್ದೆಗೆ ಸಂಬಂಧಿಸಿದಂತೆ ಶಿಕ್ಷಕರ ಸಂಘ ಸಿದ್ಧಪಡಿಸಿದ ಆಕ್ಷೇಪಣಿಗಳನ್ನು ಬುಧವಾರ ಬೆಂಗಳೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್‌.ಉಮಾಶಂಕರ್ ಅವರಿಗೆ ಸಲ್ಲಿಸಲಾಯಿತು.   

ಬೆಂಗಳೂರು: ಶಿಕ್ಷಕರ ವರ್ಗಾವಣೆ ಕಾಯ್ದೆ 2020ರ ಕರಡು ನಿಯಮಗಳಲ್ಲಿ ಶೇಕಡ 25ಕ್ಕಿಂತ ಹೆಚ್ಚು ಖಾಲಿ ಹುದ್ದೆಗಳಿರುವ ತಾಲ್ಲೂಕಿನಿಂದ ವರ್ಗಾವಣೆ ಇಲ್ಲವೆಂಬ ಅಂಶ ಅತ್ಯಂತ ಮಾರಕವಾಗಿದ್ದು, ಅದನ್ನು ಕೈಬಿಡಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಒತ್ತಾಯಿಸಿದೆ.‌

ಕರಡು ನಿಯಮಗಳಿಗೆ ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನವಾದ ಬುಧವಾರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್‌.ಆರ್.ಉಮಾಶಂಕರ್ ಅವರನ್ನು ಭೇಟಿ ಮಾಡಿದ ಸಂಘದ ಅಧ್ಯಕ್ಷ ವಿ.ಎಂ.ನಾರಾಯಣಸ್ವಾಮಿ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಅವರು ವಿವರವಾದ ಆಕ್ಷೇಪಣೆಗಳನ್ನು ಸಲ್ಲಿಸಿದರು.‌

‘ಘಟಕದ ಹೊರಗಿನ ವರ್ಗಾವಣಾ ಮಿತಿಯು ಕೇವಲ 2+2 ಆಗಿದ್ದು, ಯಾವುದೇ ತಾಲ್ಲೂಕಿನಿಂದ ಇದಕ್ಕಿಂತ ಹೆಚ್ಚಿನ ಶೇಕಡಾವಾರು ಶಿಕ್ಷಕರು ವರ್ಗಾವಣೆ ಹೊಂದುವುದಕ್ಕೆ ಸಾಧ್ಯವೇ ಇಲ್ಲ, ಶೇಕಡಾವಾರು ಮಿತಿಯಲ್ಲಿ ವರ್ಗಾವಣೆ ಜಾರಿ
ಯಾಗುವುದರಿಂದ ಮತ್ತೆ ಶೇಕಡ 25ಕ್ಕಿಂತ ಹೆಚ್ಚು ಖಾಲಿ ಇರುವ ತಾಲ್ಲೂಕಿನಿಂದ ವರ್ಗಾವಣೆ ನೀಡದೇ ಇರುವುದು ಆ ತಾಲ್ಲೂಕಿನ ಶಿಕ್ಷಕರಿಗೆ ಮಾಡುತ್ತಿರುವ ಅನ್ಯಾಯವಾಗಿದೆ’ ಎಂದು ಮನವರಿಕೆ ಮಾಡಲಾಗಿದೆ.

ADVERTISEMENT

‘ಒಂದು ಬಾರಿಯೂ ವರ್ಗಾವಣೆ ಆಗದೇ ಇರುವ, 10 ವರ್ಷಕ್ಕಿಂತಲೂ ಹೆಚ್ಚಿನ ಸೇವೆ ಸಲ್ಲಿಸಿದ ಕಲ್ಯಾಣ ಕರ್ನಾಟಕದ ಶಿಕ್ಷಕರಿಗೆ ಪ್ರಾಶಸ್ತ್ಯ ನೀಡಬೇಕು. ಮಾನವೀಯತೆ ದೃಷ್ಟಿಯಿಂದ ಕೋರಿಕೆ ಆಧಾರದ ಮೇಲೆ ಸ್ವಂತ ಜಿಲ್ಲೆಗೆ ವರ್ಗಾವಣೆ ಹೊಂದಲು ಒಂದು ಬಾರಿ ಅವಕಾಶ ನೀಡಬೇಕು ಅಥವಾ ಶೇಕಡ 25ರಷ್ಟು ಖಾಲಿ ಹುದ್ದೆಗಳು ಇರುವ ತಾಲ್ಲೂಕಿನಿಂದ ವರ್ಗಾವಣೆ ಇಲ್ಲ ಎಂಬ ನಿಯಮ ಸಡಿಲಗೊಳಿಸಿ ಶೇಕಡ 50ರಷ್ಟು ಎಂದು ನಿಗದಿ ಪಡಿಸಬೇಕು’ ಎಂದು ಒತ್ತಾಯಿಸಲಾಗಿದೆ.

ವಿಧವಾ ಪ್ರಕರಣ: ಮಾನದಂಡ ಸಡಿಲಿಸಿ

‘ವಿಧವಾ ಪ್ರಕರಣದಲ್ಲಿ 12 ವರ್ಷದೊಳಗಿನ ಮಗು ಇರಬೇಕೆಂಬ ಮಾನದಂಡವನ್ನು ಹೊಂದಿದವರನ್ನು ಮಾತ್ರ ವಿಧವಾ ಪ್ರಕರಣದಡಿ ತಂದಿರುವುದು ಸರಿಯಲ್ಲ. ಮಕ್ಕಳ ವಯಸ್ಸನ್ನು ಪರಿಗಣಿಸದೇ ಗಂಡನನ್ನು ಕಳೆದುಕೊಂಡ ಎಲ್ಲಾ ಸಹೋದರಿಯರು/ ತಾಯಂದಿರನ್ನು ವಿಧವೆಯರೆಂದು ಪರಿಗಣಿಸಿ ನಿಯಮಗಳಲ್ಲಿ ಅಳವಡಿಸಬೇಕು’ ಎಂದು ಒತ್ತಾಯಿಸಲಾಗಿದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.