
ಬೆಂಗಳೂರು: ಒಂದೇ ಕಾಮಗಾರಿಗೆ ಎರಡು ಬಾರಿ ಟೆಂಡರ್ ಅಧಿಸೂಚನೆ ಹೊರಡಿಸಿದ್ದ ಹಾವೇರಿಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಹೈಕೋರ್ಟ್ ₹50 ಸಾವಿರ ದಂಡ ವಿಧಿಸಿದೆ.
ಕಾಮಗಾರಿ ಪ್ರಾರಂಭಿಸಿದ ಬಳಿಕ ಅದೇ ಕಾಮಗಾರಿಗೆ ಮತ್ತೊಮ್ಮೆ ಟೆಂಡರ್ ಕರೆಯಲಾಗಿದ್ದ ಕ್ರಮವನ್ನು ಪ್ರಶ್ನಿಸಿ ರಾಣೆಬೆನ್ನೂರು ತಾಲ್ಲೂಕಿನ ಬೇಲೂರು ಗ್ರಾಮದ ಸರ್ಕಾರದ ‘ಎ’ ದರ್ಜೆ ಗುತ್ತಿಗೆದಾರ ಗೋಪಿ ಗೊಲ್ಲರ ಬಿನ್ ತಿಮ್ಮಪ್ಪ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
‘ಈ ಕೃತ್ಯವು ಮೇಲ್ನೋಟಕ್ಕೆ ಕಾನೂನುಬಾಹಿರ ಮತ್ತು ಉದ್ಧಟತನದಿಂದ ಕೂಡಿದೆ. ಹೀಗಾಗಿ, ಎರಡನೇ ಬಾರಿ ಕರೆದಿರುವ ಟೆಂಡರ್ ರದ್ದುಗೊಳಿಸುವುದು ಕೇವಲ ಔಪಚಾರಿಕ ಎನಿಸಬಾರದು’ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ‘ಕಾರ್ಯನಿರ್ವಾಹಕ ಎಂಜಿನಿಯರ್ ತಮ್ಮ ಸ್ವಂತ ಹಣದಿಂದ ದಂಡವನ್ನು ಅರ್ಜಿದಾರರಿಗೆ ಕಾನೂನು ಹೋರಾಟದ ವೆಚ್ಚವಾಗಿ ಪಾವತಿಸಬೇಕು’ ಎಂದು ತಾಕೀತು ಮಾಡಿದೆ.
ಪ್ರಕರಣವೇನು?: ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಬಾಳಂಬೀಡ ಗ್ರಾಮ ಪಂಚಾಯತ್‌ನಲ್ಲಿ ಮಲ ತ್ಯಾಜ್ಯ ಸಂಸ್ಕರಣಾ (ಎಫ್‌ಎಸ್‌ಟಿಪಿ) ಘಟಕದ ನಿರ್ಮಾಣಕ್ಕಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಟೆಂಡರ್ ಕರೆಯಲಾಗಿತ್ತು. ಈ ಟೆಂಡರ್‌ನ್ನು ಗೋಪಿ ಗೊಲ್ಲರ ಪಡೆದುಕೊಂಡಿದ್ದರು. 2025ರ ಮೇ 27ರಂದು ಕಾರ್ಯಾದೇಶ ನೀಡಲಾಗಿತ್ತು. ಆದರೆ, 2025ರ ಸೆಪ್ಟೆಂಬರ್ 9ರಂದು ಇದೇ ಕಾಮಗಾರಿಗೆ ಮತ್ತೊಂದು ಟೆಂಡರ್ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.