ADVERTISEMENT

2.94 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ: ಭರ್ತಿ ಮಾಡದ ಸರ್ಕಾರ; ಕುಮಾರಸ್ವಾಮಿ ಕಳವಳ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 14:01 IST
Last Updated 24 ಫೆಬ್ರುವರಿ 2026, 14:01 IST
<div class="paragraphs"><p>ಎಚ್‌.ಡಿ ಕುಮಾರಸ್ವಾಮಿ</p></div>

ಎಚ್‌.ಡಿ ಕುಮಾರಸ್ವಾಮಿ

   

ನವದೆಹಲಿ: ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು, ನಿರುದ್ಯೋಗಿ ಯುವಜನರ ಪ್ರತಿಭಟನೆಯನ್ನು ಲಘುವಾಗಿ ಪರಿಗಣಿಸಬೇಡಿ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು; ಧಾರವಾಡದಲ್ಲಿ ಅಸಂಖ್ಯಾತ ಉದ್ಯೋಗಾಕಾಂಕ್ಷಿಗಳು ಬೀದಿಗೆ ಇಳಿದಿರುವುದನ್ನು ರಾಜ್ಯ ಸರಕಾರ ಲಘುವಾಗಿ ಪರಿಗಣಿಸಬಾರದು. ಸರಕಾರಿ ಹುದ್ದೆಗಳನ್ನು ಕಾಲ ಕಾಲಕ್ಕೆ ತುಂಬದೇ ನಿರ್ಲಕ್ಷಿಸಿದ ಪರಿಣಾಮವೇ ಯುವಜನರು ಪ್ರತಿಭಟನೆ ದಾರಿ ತುಳಿಯಲು ಕಾರಣ ಎಂದಿದ್ದಾರೆ.

ADVERTISEMENT

ಅಲ್ಲದೆ; ಯುವಜನರ ಪ್ರತಿಭಟನೆ ಶಾಂತಿಯುತವಾಗಿರಲಿ, ನಿಮ್ಮೊಂದಿಗೆ ನಾನಿದ್ದೇನೆ ಎಂದು ಸಚಿವರು ಬೆಂಬಲ ಸೂಚಿಸಿದ್ದಾರೆ.

ರಾಜ್ಯದಲ್ಲಿ 2.94 ಲಕ್ಷ ಸರಕಾರಿ ಹುದ್ದೆಗಳು ಖಾಲಿ ಬಿದ್ದಿವೆ. ಸಂಪುಟ ದರ್ಜೆ ಹುದ್ದೆಗಳು ಮಾತ್ರ ಸೂಪರ್‌‌ʼಫಾಸ್ಟ್ ಆಗಿ ಭರ್ತಿ ಆಗುತ್ತಿವೆ. ಕಾಂಗ್ರೆಸ್ ಸರಕಾರದ ಆದ್ಯತೆ ಯಾವ ರೀತಿಯಲ್ಲಿದೆ ಎಂಬುದು ಅರ್ಥವಾಗುತ್ತದೆ.‌ ಆರ್.ವಿ. ದೇಶಪಾಂಡೆ ಅವರ ಅಧ್ಯಕ್ಷತೆಯ ಕರ್ನಾಟಕ ಆಡಳಿತ ಸುಧಾರಣೆ ಆಯೋಗದ ವರದಿಯಂತೆ ರಾಜ್ಯದಲ್ಲಿ 7 ಲಕ್ಷ ನಿರುದ್ಯೋಗಿಗಳಿದ್ದಾರೆ. ಇವರೆಲ್ಲರೂ ಸರ್ಕಾರಿ ಹುದ್ದೆಗಳ ನಿರೀಕ್ಷೆಯಲ್ಲಿದ್ದು, ಖಾಲಿ ಹುದ್ದೆಗಳನ್ನು ಸರ್ಕಾರ ಹಂತ ಹಂತವಾಗಿ ಭರ್ತಿ ಮಾಡಬೇಕಿತ್ತು. ಕುರ್ಚಿ ತಿಕ್ಕಾಟದಲ್ಲಿ ಅಮೂಲ್ಯವಾದ 3 ವರ್ಷಗಳನ್ನು ಪೋಲು ಮಾಡಿದೆ. ಯುವಜನರತ್ತ ಗಮನ ಹರಿಸಲು ಈ ಸರಕಾರಕ್ಕೆ ಟೈಮಿಲ್ಲ! ಎಂದು ಕಟುವಾಗಿ ಟೀಕಿಸಿದ್ದಾರೆ.

ನಿರುದ್ಯೋಗ ಸದಾ ಕುದಿಯುವ ಜ್ವಾಲಾಮುಖಿ

ನಿರುದ್ಯೋಗ ಎನ್ನುವುದು ಸರಳ ಸಮಸ್ಯೆ ಅಲ್ಲ. ಅದು ಸದಾ ಕುದಿಯುವ ಜ್ವಾಲಾಮುಖಿ ಎಂಬುದನ್ನು ಸರಕಾರ ಮರೆಯಬಾರದು. ಈ ಹೊತ್ತಿಗೇ ಆಡಳಿತಗಾರರು ಎಚ್ಚೆತ್ತು ಬಜೆಟ್‌ನಲ್ಲಿ ಪ್ರತ್ಯೇಕ ಹಣ ಇರಿಸಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಬೇಕಿತ್ತು. ಅತಿ ಹೆಚ್ಚು ಹುದ್ದೆಗಳು ಶಿಕ್ಷಣ, ಆರೋಗ್ಯ, ಪೊಲೀಸ್ ಇಲಾಖೆಗಳಲ್ಲಿ ಖಾಲಿ ಇವೆ. ಬೆಂಗಳೂರು ನಗರದ 18 ಆಯಕಟ್ಟಿನ ಪೊಲೀಸ್‌ ಠಾಣೆಗಳಲ್ಲಿ ಇನ್‌ಸ್ಪೆಕ್ಟರ್‌ಗಳು ಇಲ್ಲ! ವರ್ಗಾವಣೆ ದಂಧೆಯಲ್ಲಿ ಸರಕಾರ ಮುಳುಗಿದ್ದರ ಪರಿಣಾಮವಿದು ಎಂದು ಕುಮಾರಸ್ವಾಮಿ ದೂರಿದ್ದಾರೆ.

ಈ ಎಲ್ಲಾ ಕಾರಣಗಳು ಆಡಳಿತದ ಮೇಲೆ ನೇರವಾಗಿ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಕೂಡಲೇ ಖಾಲಿ ಹುದ್ದೆಗಳ ಭರ್ತಿ ಮಾಡುವ ನಿಟ್ಟಿನಲ್ಲಿ ಸರಕಾರ ತುರ್ತು ಕ್ರಮ ವಹಿಸಬೇಕು. ವಿಧಾನಸೌಧದ 3ನೇ ಮಹಡಿಯಿಂದ ಕೆಳಗಿಳಿದು ಬಂದು ಯುವಜನರ ದನಿ ಆಲಿಸಬೇಕು. ಇಲ್ಲವಾದರೆ, ಇವರ ಆಕ್ರೋಶಕ್ಕೆ ಕಾಂಗ್ರೆಸ್‌ ಸರಕಾರ ಬೆಲೆ ತೆರಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.