ADVERTISEMENT

ಸರ್ಕಾರ–ರಾಜ್ಯಪಾಲರ ಶೀತಲ ಸಮರ; ಪುನರ್‌ ಪರಿಶೀಲಿಸುವಂತೆ ಕೋರಲು ಚಿಂತನೆ

ರಾಷ್ಟ್ರಪತಿ ಅಂಕಿತಕ್ಕೆ ಮಸೂದೆ– ತಮಿಳುನಾಡು ಪ್ರಕರಣ ಉಲ್ಲೇಖಿಸಿ ಪುನರ್‌ ಪರಿಶೀಲಿಸುವಂತೆ ಕೋರಲು ಚಿಂತನೆ

​ಪ್ರಜಾವಾಣಿ ವಾರ್ತೆ
Published 15 ಮೇ 2025, 0:30 IST
Last Updated 15 ಮೇ 2025, 0:30 IST
<div class="paragraphs"><p>ಪ್ರಜಾವಾಣಿ ಚಿತ್ರ</p></div>

ಪ್ರಜಾವಾಣಿ ಚಿತ್ರ

   

ಬೆಂಗಳೂರು: ರಾಷ್ಟ್ರಪತಿಯ ಅಂಕಿತಕ್ಕೆ ಕಾದಿರಿಸಿ ಹಿಂದಿರುಗಿಸಿದ್ದ ಮುಸ್ಲಿಂ ಸಮುದಾಯಕ್ಕೆ ಗುತ್ತಿಗೆಯಲ್ಲಿ ಶೇ 4 ಮೀಸಲು ಕಲ್ಪಿಸಲು ಅವಕಾಶ ಕಲ್ಪಿಸುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕತೆ (ಕೆಟಿಟಿಪಿ) ತಿದ್ದುಪಡಿ ಮಸೂದೆ, ಕರ್ನಾಟಕ ಸಹಕಾರಿ ಸಂಘಗಳ (ತಿದ್ದುಪಡಿ) ಮಸೂದೆ, ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ಮಸೂದೆಗಳನ್ನು ಪುನರ್‌ ಪರಿಶೀಲಿಸುವಂತೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರನ್ನು ಮತ್ತೊಮ್ಮೆ ಕೋರಲು ರಾಜ್ಯ ಸರ್ಕಾರ ‌ಮುಂದಾಗಿದೆ.

ಕೇಂದ್ರಕ್ಕೆ ವ್ಯತಿರಿಕ್ತವಾಗಿರದ ಮತ್ತು ರಾಜ್ಯಕ್ಕೆ ಸಂಬಂಧಿಸಿದ ಕಾಯ್ದೆಗಳ ತಿದ್ದುಪಡಿಗೆ ರೂಪಿಸಿದ ಮಸೂದೆಗಳನ್ನು ರಾಷ್ಟ್ರಪತಿಯ ಅನುಮೋದನೆಗೆ ಕಳುಹಿಸುವ ಅಗತ್ಯ ಇಲ್ಲವೆಂದು ತಮಿಳುನಾಡು ಸರ್ಕಾರ, ಅಲ್ಲಿನ ರಾಜ್ಯಪಾಲರ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ತೀರ್ಪು ನೀಡಿದೆ. ಈ ಪ್ರಕರಣವನ್ನು ಉಲ್ಲೇಖಿಸಿ, ಮೂರೂ ಮಸೂದೆಗಳಿಗೆ ಅಂಕಿತ ಹಾಕುವಂತೆ ರಾಜ್ಯಪಾಲರಿಗೆ ಕಡತವನ್ನು ಮರು ಮಂಡಿಸಲು ಕಾನೂನು ಇಲಾಖೆ ಚಿಂತನೆ ನಡೆಸಿದೆ.

ADVERTISEMENT

‘ರಾಜ್ಯ ಸರ್ಕಾರ ಸ್ಪಷ್ಟೀಕರಣ ನೀಡಿದ ಬಳಿಕ ‘ಮೈಸೂರು ಅಭಿವೃದ್ಧಿ ಪ್ರಾಧಿಕಾರ’ ರಚನೆಗಾಗಿ ರಾಜ್ಯ ಸರ್ಕಾರ ರೂಪಿಸಿದ ‘ಮೈಸೂರು ಅಭಿವೃದ್ದಿ ಪ್ರಾಧಿಕಾರ ಮಸೂದೆ’ ಮತ್ತು ಗದಗ ಬೆಟಗೇರಿ ವಾಣಿಜ್ಯ, ಸಂಸ್ಕೃತಿ ಮತ್ತು ಪ್ರದರ್ಶನಗಳ ಪ್ರಾಧಿಕಾರ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಆದರೆ, ಸಹಕಾರಿ ಸಂಘಗಳ (ತಿದ್ದುಪಡಿ) ಮಸೂದೆ ಮತ್ತು ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ಮಸೂದೆಯನ್ನು ರಾಷ್ಟ್ರಪತಿಯ ಅಂಕಿತಕ್ಕೆ ಕಾದಿರಿಸಿ ಕಡತವನ್ನು ಮಂಗಳವಾರ (ಮೇ 13) ವಾಪಸ್‌ ಮಾಡಿದ್ದಾರೆ’ ಎಂದು ಕಾನೂನು ಮತ್ತು ಸಂಸದೀಯ ಇಲಾಖೆಯ ಕಾರ್ಯದರ್ಶಿ ಜಿ. ಶ್ರೀಧರ್‌ ತಿಳಿಸಿದರು.

‘ಮೈಸೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ಗದಗ ಬೆಟಗೇರಿ ಮಸೂದೆಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ದೀಪಾ ಚೋಳನ್‌ ಜೊತೆ ರಾಜ್ಯಪಾಲರನ್ನು ಭೇಟಿ ಮಾಡಿ ಅವರು ಕೇಳಿದ್ದ ಎಲ್ಲ ಮಾಹಿತಿಗಳನ್ನು ನೀಡಲಾಗಿತ್ತು. ಕಾನೂನು ಸಚಿವ ಎಚ್‌.ಕೆ. ಪಾಟೀಲ ಅವರೂ ರಾಜ್ಯಪಾಲರನ್ನು ಮಂಗಳವಾರ ಭೇಟಿ ಮಾಡಿ ವಿವರಣೆ ನೀಡಿದರು. ಆ ಬಳಿಕ ಆ ಎರಡೂ ಮಸೂದೆಗಳಿಗೆ ರಾಜ್ಯಪಾಲರು ಅಂಕಿತ ಹಾಕಿದರು. ಆದರೆ, ಸಹಕಾರಿ ಸಂಘಗಳ (ತಿದ್ದುಪಡಿ) ಮತ್ತು ಸೌಹಾರ್ದ ಸಹಕಾರಿ (ತಿದ್ದುಪಡಿ) ಈ ಎರಡೂ ಮಸೂದೆಗಳನ್ನು ಕಾನೂನು ತೊಡಕುಗಳ ಕಾರಣ ನೀಡಿ ಮತ್ತು ರಾಷ್ಟ್ರಪತಿಯ ಅಂಕಿತಕ್ಕೆ ಮೀಸಲಿಟ್ಟು ಹಿಂದಿರುಗಿಸಿದ್ದಾರೆ’ ಎಂದು ಅವರು ವಿವರಿಸಿದರು.

ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇಕಡ 4ರಷ್ಟು ಮೀಸಲಾತಿ ಕಲ್ಪಿಸುವ ರಾಜ್ಯ ಸರ್ಕಾರದ ತೀರ್ಮಾನಕ್ಕೆ ತಕರಾರು ಎತ್ತಿರುವ ರಾಜ್ಯಪಾಲ, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ಕೆಟಿಪಿಪಿ) ತಿದ್ದುಪಡಿ ಮಸೂದೆಯನ್ನು ಏಪ್ರಿಲ್‌ 15ರಂದೇ ವಾಪಸ್ ಕಳುಹಿಸಿದ್ದಾರೆ. ಈ ಮಸೂದೆ ಕೂಡಾ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ ರಾಷ್ಟ್ರಪತಿಯ ಅನುಮೋದನೆಗೆ ಕಳುಹಿಸುವ ಅಗತ್ಯ ಇಲ್ಲ ಎಂದು ಪ್ರತಿಪಾದಿಸಲು ಸರ್ಕಾರ ತೀರ್ಮಾನಿಸಿದೆ.

ಸಿ.ಎಂ ಮೂಲಕ ಕಳುಹಿಸಿ: 
‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ವಿಶ್ವವಿದ್ಯಾಲಯದ ಕುಲಪತಿ ನೇಮಕ ಸಂಬಂಧ ರಾಜ್ಯಪಾಲರಿಗೆ ಇರುವ ಅಧಿಕಾರವನ್ನು ರದ್ದುಪಡಿಸಿ, ಮುಖ್ಯಮಂತ್ರಿಗೆ ನೀಡುವ ಉದ್ದೇಶ ಹೊಂದಿರುವ ‘ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ವಿಶ್ವವಿದ್ಯಾಲಯ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆಯೂ ಸ್ಪಷ್ಟೀಕರಣ ನೀಡಿ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಆದರೆ, ಅವರು ಮಸೂದೆಯನ್ನು ಮುಖ್ಯಮಂತ್ರಿಯ ಮೂಲಕ ಕಳುಹಿಸಬೇಕೆಂಬ ತಾಂತ್ರಿಕ ಕಾರಣ ನೀಡಿ ವಾಪಸ್‌ ಮಾಡಿದ್ದಾರೆ. ರಾಜ್ಯಪಾಲರ ಸಲಹೆಯಂತೆ ಮತ್ತೊಮ್ಮೆ ಕಳುಹಿಸಲಾಗುವುದು’ ಎಂದು ಶ್ರೀಧರ್ ತಿಳಿಸಿದರು.

ಧರ್ಮಾದಾಯ ದತ್ತಿ ಮಸೂದೆ: ಮತ್ತೆ ಕಳುಹಿಸಲು ಸಲಹೆ

ಮುಜರಾಯಿ ಇಲಾಖೆಯ ವ್ಯಾಪ್ತಿಯ ಶ್ರೀಮಂತ ದೇವಸ್ಥಾನಗಳಲ್ಲಿ ಸಂಗ್ರಹವಾಗುವ ‘ಸಾಮಾನ್ಯ ಸಂಗ್ರಹಣಾ ನಿಧಿ’ಯನ್ನು ಆದಾಯ ಇಲ್ಲದಿರುವ ‘ಸಿ’ ವರ್ಗದ ದೇವಸ್ಥಾನಗಳಿಗೆ ಬಳಸುವುದನ್ನು ಕಡ್ಡಾಯಗೊಳಿಸುವ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಮಸೂದೆ–2024’ನ್ನು ಸರ್ಕಾರವು ರಾಜ್ಯಪಾಲರ ಅಂಕಿತಕ್ಕೆ 2024ರ ಮಾರ್ಚ್‌ 6ರಂದು ಕಳುಹಿಸಿತ್ತು. ಆದರೆ, ಅವರು ಸ್ಪಷ್ಟೀಕರಣ ಕೇಳಿ ಅದೇ ಮಾರ್ಚ್‌ 14ರಂದು ವಾಪಸ್‌ ಮಾಡಿದ್ದರು.

ವಿವರಣೆ ನೀಡಿ ಡಿ. 5ರಂದು ಮತ್ತೆ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಆದರೆ, ಅವರು ಅಂಕಿತ ಹಾಕದೆ ಡಿ. 21ರಂದು ಎರಡನೇ ಬಾರಿ ವಾಪಸ್‌ ಮಾಡಿದ್ದರು. ಹೀಗಾಗಿ, ಸಂಸದೀಯ ಇಲಾಖೆಯು ಕಡತವನ್ನು ಕಂದಾಯ ಇಲಾಖೆಗೆ ಕಳುಹಿಸಿತ್ತು. ಈ ಮಧ್ಯೆ, ರಾಜ್ಯಪಾಲರನ್ನು ಭೇಟಿ ಮಾಡಿದ್ದ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ, ‘ಅರ್ಚಕರ ಅನುಕೂಲಕ್ಕಾಗಿ ಕಾನೂನು ತಿದ್ದುಪಡಿ ಮಾಡಿರುವ ಕಡತಕ್ಕೆ ಸಹಿ ಹಾಕಬೇಕು’ ಎಂದು ಆಗ್ರಹಿಸಿತ್ತು. ಹೀಗಾಗಿ, ಈ ಮಸೂದೆಯನ್ನು ಮತ್ತೆ ಕಳುಹಿಸುವಂತೆ ಸರ್ಕಾರಕ್ಕೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ ಎಂದೂ ಜಿ. ಶ್ರೀಧರ್‌ ಅವರು ತಿಳಿಸಿದರು. ಈ ತಿದ್ದುಪಡಿಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. 

ಕೆಪಿಎಸ್‌ಸಿ ಮಸೂದೆ: ಮತ್ತೆ ರಾಜಭವನಕ್ಕೆ

ಕರ್ನಾಟಕ ಲೋಕಸೇವಾ ಆಯೋಗ (ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಪ್ರಕಾರ್ಯಗಳು) ಕಾಯ್ದೆ–1959 (1959ರ ಕರ್ನಾಟಕ ಕಾಯ್ದೆ 20)ಕ್ಕೂ ತಿದ್ದುಪಡಿ ತರಲು ಉದ್ದೇಶಿಸಿದ್ದ ಮಸೂದೆ ಸ್ಪಷ್ಟೀಕರಣವನ್ನು ನೀಡಿ ರಾಜ್ಯಪಾಲರಿಗೆ ಮತ್ತೆ ಕಳುಹಿಸಲಾಗಿದೆ.

‘ಈ ಮಸೂದೆಯನ್ನು ರಾಜ್ಯಪಾಲರು ತಮ್ಮ ಬಳಿಯಲ್ಲೇ ಇಟ್ಟುಕೊಂಡಿದ್ದಾರೆ. ಪ್ರಸ್ತಾಪಿತ ತಿದ್ದುಪಡಿಯಲ್ಲಿ ಇರುವಂತೆ ಕಾಯ್ದೆಯ ಸೆಕ್ಷನ್‌ 18ನ್ನು ಕೈಬಿಟ್ಟರೆ ಕೆಪಿಎಸ್‌ಸಿ ಜೊತೆ ಸಮಾಲೋಚನೆ ನಡೆಸದೆ ನಿಯಮಗಳನ್ನು ರೂಪಿಸಲು ಸರ್ಕಾರಕ್ಕೆ ಅಧಿಕಾರ ಸಿಗಲಿದೆ. ಪ್ರಸ್ತಾವಿತ ತಿದ್ದುಪಡಿಯು ಸಂವಿಧಾನ 320ನೇ ವಿಧಿಗೆ ವ್ಯತಿರಿಕ್ತವಾಗಿದ್ದು, ಆಯೋಗದ ಸ್ವಾಯತ್ತತೆಯನ್ನು ಮೊಟಕುಗೊಳಿಸಲಿದೆ. ಈ ಬಗ್ಗೆ ಸ್ಪಷ್ಟೀಕರಣ ಮತ್ತು ಕಾನೂನು ಅಭಿಪ್ರಾಯದ ಜೊತೆಗೆ ಕಡತವನ್ನು ಮತ್ತೆ ಸಲ್ಲಿಸುವಂತೆ ರಾಜ್ಯಪಾಲರು ಸೂಚಿಸಿದ್ದರು. ಮೇ 6ರಂದೇ ರಾಜ್ಯಪಾಲರಿಗೆ ಮತ್ತೆ ಕಳುಹಿಸಲಾಗಿದೆ’ ಎಂದು ಕಾನೂನು ಮತ್ತು ಸಂಸದೀಯ ಇಲಾಖೆಯ ಕಾರ್ಯದರ್ಶಿ ಜಿ. ಶ್ರೀಧರ್‌  ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.