
ವಿಭು ಬಖ್ರು
ಬೆಂಗಳೂರು: ‘ಹೈಕೋರ್ಟ್ ನ್ಯಾಯಮೂರ್ತಿಗಳ ಹುದ್ದೆಗೆ ನೇಮಕ ಮಾಡಲು ಕರ್ನಾಟಕ ಹೈಕೋರ್ಟ್ ಕೊಲಿಜಿಯಂನಿಂದ ಶಿಫಾರಸುಗೊಂಡಿರುವ 10 ಜನ ವಕೀಲರ ಪಟ್ಟಿಯಲ್ಲಿ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಸಮುದಾಯದವರನ್ನು ಕಡೆಗಣಿಸಲಾಗಿದೆ’ ಎಂದು ‘ಬೆಂಗಳೂರು ವಕೀಲರ ಸಂಘ’ ಅಸಮಾಧಾನ ವ್ಯಕ್ತಪಡಿಸಿದೆ.
ಈ ಕುರಿತಂತೆ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ, ಉಪಾಧ್ಯಕ್ಷ ಸಿ.ಎಸ್.ಗಿರೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎಚ್.ವಿ.ಪ್ರವೀಣ್ ಗೌಡ ಮತ್ತು ಖಜಾಂಚಿ ಶ್ವೇತಾ ರವಿಶಂಕರ್, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆ) ವಿಭು ಬಖ್ರು ಅವರಿಗೆ ಬುಧವಾರ ಮೂರು ಪುಟಗಳ ಪತ್ರ
ಬರೆದಿದ್ದಾರೆ.
‘ವಕೀಲ ವೃಂದದಿಂದ ನೇಮಕಗೊಳ್ಳುವ 10 ಜನರ ಶಿಫಾರಸು ಪಟ್ಟಿಯನ್ನು, ಕರ್ನಾಟಕ ಹೈಕೋರ್ಟ್ ಕೊಲಿಜಿಯಂ ಕಳೆದ ವಾರ ಸುಪ್ರೀಂ ಕೋರ್ಟ್‌ಗೆ ಕಳುಹಿಸಿದೆ. ಈ ಪ್ರಸ್ತಾವಿತ ಪಟ್ಟಿಯಲ್ಲಿ ಒಬ್ಬರೇ ಒಬ್ಬರೂ ಒಬಿಸಿ ಸಮುದಾಯದವರಿಲ್ಲ’ ಎಂದು ಅತೃಪ್ತಿ ವ್ಯಕ್ತಪಡಿಸಲಾಗಿದೆ.
‘ಇದರಿಂದ ರಾಜ್ಯದಲ್ಲಿ ಶೇಕಡ 25ರಷ್ಟು ಜನಸಂಖ್ಯೆಯನ್ನು ಪ್ರತಿನಿಧಿಸುವ ಒಬಿಸಿ ಸಮುದಾಯಕ್ಕೆ ಅನ್ಯಾಯ ಎಸಗಲಾಗಿದೆ. ಭಾರತದ ಸಂವಿಧಾನದ ಅಡಿಯಲ್ಲಿ ಕೊಡಮಾಡಿರುವ 15 ಮತ್ತು 16ನೇ ವಿಧಿಗಳ ಪ್ರಯೋಜನವನ್ನು ಉಪೇಕ್ಷಿಸಿದಂತಾಗಿದೆ. ಕರ್ನಾಟಕ ಹೈಕೋರ್ಟ್ ಕೊಲಿಜಿಯಂ, ಸಾರ್ವಜನಿಕ ಕಾಳಜಿಯ ಮನೋಭಾವ ಹೊಂದಿದ ನ್ಯಾಯಮೂರ್ತಿಗಳನ್ನು ಹೊಂದಿದೆ. ಇಂತಹ ಕೊಲಿಜಿಯಂ, ಒಬಿಸಿಯಂತಹ ಸಮುದಾಯದಿಂದ ಸ್ಪರ್ಧಾತ್ಮಕ ಅಭ್ಯರ್ಥಿಗಳನ್ನು ಪಡೆಯಲು ಯಾಕೆ ಪ್ರಯತ್ನ ಮಾಡಿಲ್ಲ’ ಎಂದು ಪ್ರಶ್ನಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.